Advertisement

ಔಷಧ ಸಾಮಗ್ರಿ ಉತ್ಪಾದನೆ ಮೇಲೂ ಕೊರೊನಾ ಛಾಯೆ

12:34 PM Mar 25, 2020 | Team Udayavani |

ರಾಯಚೂರು: ಈಗಾಗಲೇ ಸಾಕಷ್ಟು ಕ್ಷೇತ್ರದ ಮೇಲೆ ಕರಿಛಾಯೆ ಬೀರಿದ ಕೊರೊನಾ ವೈರಸ್‌, ಔಷಧ ಸಾಮಗ್ರಿ ಉತ್ಪಾದನಾ ಕಂಪನಿಗಳಿಗೂ ವ್ಯಾಪಿಸಿದೆ. ವಿವಿಧ ಔಷಧಗಳಿಗಾಗಿ ಡ್ರಗ್ಸ್‌ ಉತ್ಪಾದಿಸುವ ಜಿಲ್ಲೆಯ ಶಿಲ್ಪಾ ಮೆಡಿಕೇರ್‌ ಸಂಸ್ಥೆ ಕೂಡ ಶೇ.30ರಷ್ಟು ಉತ್ಪಾದನೆ ಕುಸಿತ ಕಂಡಿದೆ.

Advertisement

ಬಹುತೇಕ ಸಂಸ್ಥೆಗಳು ತನ್ನ ಸಿಬ್ಬಂದಿಗೆ ರಜೆ ನೀಡಿ ಮನೆಯಿಂದಲೇ ಕೆಲಸ ಮಾಡುವಂತೆ ತಿಳಿಸಿದ್ದು, ಸೇವೆ ಸ್ಥಗಿತಗೊಳಿಸಿವೆ. ಆದರೆ, ಫಾರ್ಮಾ ಕಂಪನಿಗಳಿಗೆ ಮಾತ್ರ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ದೇಶದ ಪರಿಸ್ಥಿತಿ ಗಂಭೀರವಾಗಿದ್ದು, ನಿಮ್ಮಿಂದ ಇನ್ನಷ್ಟು ಹೆಚ್ಚಿನ ಸೇವೆ ನಿರೀಕ್ಷೆಯಲ್ಲಿದ್ದೇವೆ ಎಂದು ತಿಳಿಸಿದೆ. ಹೀಗಾಗಿ ಜಟಿಲ ಸ್ಥಿತಿಯಲ್ಲೂ ಉತ್ಪಾದನೆ ಮಾಡಲಾಗುತ್ತಿದೆ ಎನ್ನುತ್ತಾರೆ ಆಡಳಿತಾಧಿಕಾರಿ.

ಮುಖ್ಯವಾಗಿ ಸರಕು ಸಾಗಣೆಯದ್ದೇ ಸಮಸ್ಯೆ ಎದುರಾಗಿದ್ದು, ಉತ್ಪಾದನೆಗೆ ಬೇಕಾದ ಕಚ್ಚಾ ಸಾಮಗ್ರಿ ಹಾಗೂ ಸಿದ್ಧ ವಸ್ತುಗಳ ಸಾಗಣೆ ನಿಗದಿತ ಕಾಲಾವಧಿಗೆ ತಲುಪುತ್ತಿಲ್ಲ. ಎಲ್ಲೆಡೆ ನಿಷೇಧಾಜ್ಞೆ ಜಾರಿಯಲ್ಲಿದ್ದು, ಕಟ್ಟೆಚ್ಚರ ವಹಿಸಿದ್ದರಿಂದ ಈ ಸಮಸ್ಯೆ ಎದುರಾಗಿದೆ. ಒಂದು ವೇಳೆ ಈ ಪರಿಸ್ಥಿತಿ ಮುಂದುವರಿದಲ್ಲಿ ಒಂದು ವಾರದಲ್ಲಿ ಉತ್ಪಾದನೆ ಪ್ರಮಾಣ ಶೇ.50ಕ್ಕೆ ಇಳಿದರೂ ಅಚ್ಚರಿ ಪಡಬೇಕಿಲ್ಲ.

ಇದೇ ಕಾರಣಕ್ಕೆ ಸಂಸ್ಥೆ ವಾಹನಗಳ ಓಡಾಡಕ್ಕೆ ಯಾವುದೇ ಅಡ್ಡಿಪಡಿಸದಂತೆ ವಿನಾಯಿತಿ ಕೂಡ ಕೋರಲಾಗಿದೆ. ನಮ್ಮ ವಾಹನಗಳಿಗೆ ಪರವಾನಗಿ ಚೀಟಿಗಳನ್ನೂ ಅಳವಡಿಸಿಕೊಂಡು ಓಡಾಡುತ್ತೇವೆ ಎಂದು ತಿಳಿಸಿದೆ. ಆದರೆ, ಜಿಲ್ಲಾಡಳಿತ ಇನ್ನೂ ಸ್ಪಂದನೆ ನೀಡಿಲ್ಲ.

ಪಾಳೆಯ ಪ್ರಕಾರ ಕೆಲಸ:ಸರ್ಕಾರ ಹೆಚ್ಚು ಜನ ಒಂದೆಡೆ ಸೇರಬಾರದು ಎಂಬ ಆದೇಶ ಹೊರಡಿಸಿದ ಕೂಡಲೇ ಕಂಪನಿಯಲ್ಲೂ ಕೂಡ ಕೆಲವೊಂದು ಮಾರ್ಪಾಡು ಮಾಡಲಾಗಿದೆ. ಬೆಳಗ್ಗೆ, ಮಧ್ಯಾಹ್ನ ಶಿಫ್ಟ್‌ಗಳನ್ನು ರೂಪಿಸಿ ಸಿಬ್ಬಂದಿಯನ್ನು ಎರಡು ಅವಧಿ ಗೆ ಕೆಲಸ ಮಾಡುವಂತೆ ತಿಳಿಸಲಾಗಿದೆ. 50 ವರ್ಷ ಮೇಲ್ಪಟ್ಟವರಿಗೆ ಕೆಲಸದಿಂದ ವಿನಾಯಿತಿ ನೀಡಲಾಗಿದೆ. ಈಗಾಗಲೇ ಕಂಪನಿಯಲ್ಲಿ ಆರೋಗ್ಯದ ಕಾಳಜಿಗೆ ವಿಶೇಷ ಒತ್ತು ನೀಡಲಾಗುತ್ತಿದೆ. ಈಗ ಮತ್ತಷ್ಟು ಮುತುವರ್ಜಿ ವಹಿಸಿದ್ದು, ಅಗತ್ಯವಿಲ್ಲದ ಕಡೆಯೂ ಮಾಸ್ಕ್, ಸ್ಯಾನಿಟೈಸೇಶನ್‌ಗಳನ್ನೂ ಕಡ್ಡಾಯವಾಗಿ ಬಳಸಲು ಸೂಚಿಸಲಾಗಿದೆ. ಮಾರುಕಟ್ಟೆ ವಿಭಾಗದ ಸಿಬ್ಬಂದಿಗೆ ಮಾತ್ರ ಮನೆಯಿಂದಲೇ ಸೇವೆ ನೀಡುವಂತೆ ತಿಳಿಸಲಾಗಿದೆ.

Advertisement

ಪ್ರಧಾನಿಯಿಂದಲೇ ಸೂಚನೆ
ದೇಶದ ಎಲ್ಲ ಫಾರ್ಮಾ ಕಂಪನಿಗಳ ಜತೆ ಚರ್ಚೆ ನಡೆಸಿರುವ ಪ್ರಧಾನಿ ನರೇಂದ್ರ ಮೋದಿ, ಪರಿಸ್ಥಿತಿಗೆ ಸಹಕರಿಸುವಂತೆ ಕೋರಿದ್ದಾರೆ. ನಷ್ಟದ ಬಗ್ಗೆ ಯೋಚಿಸದೆ ಸಾಧ್ಯವಾದಷ್ಟು ಉತ್ಪಾದನೆಗೆ ಒತ್ತು ನೀಡುವಂತೆ ತಿಳಿಸಿದ್ದಾರೆ. ದೇಶದಲ್ಲಿ ಔಷಧಿಧೀಯ ವಸ್ತುಗಳ ಅಗತ್ಯ ಹೆಚ್ಚಾಗುತ್ತಿದ್ದು, ಅದನ್ನು ಸರಿದೂಗಿಸುವಲ್ಲಿ ಶ್ರಮಿಸುವಂತೆ ತಿಳಿಸಿದ್ದಾರೆ.

ದೇಶ-ವಿದೇಶಗಳಲ್ಲಿ ನಮ್ಮ ಸಂಸ್ಥೆಯ ಶಾಖೆಗಳು ಕಾರ್ಯ ನಿರ್ವಹಿಸುತ್ತಿವೆ. ಆಸ್ಟ್ರಿಯಾ, ಯುರೋಪ್‌ಗ್ಳಲ್ಲಿ ಅಲ್ಲಿನ ಸರ್ಕಾರವೇ ಉತ್ಪಾದನೆ ನಿಲ್ಲಿಸದಂತೆ ನೋಟಿಸ್‌ ನೀಡಿದೆ. ನಮ್ಮ ದೇಶದಲ್ಲೂ ಪ್ರಧಾನಿ ಅದೇ ರೀತಿ ಸೂಚನೆ ನೀಡಿದ್ದು, ಸೇವೆ ಮುಂದುವರಿಸಲಾಗಿದೆ. ಆದರೆ, ಸಾರಿಗೆ ಸಮಸ್ಯೆಯಿಂದಾಗಿ ಈಗಾಗಲೇ ಶೇ.30ರಷ್ಟು ಉತ್ಪಾದನೆ ಕಡಿತಗೊಂಡಿದೆ. ಇದೇ ಪರಿಸ್ಥಿತಿ ಮುಂದುವರಿದಲ್ಲಿ ಈ ಪ್ರಮಾಣ ಇನ್ನಷ್ಟು ಹೆಚ್ಚಾಗಬಹುದು. ನಷ್ಟದ ಭೀತಿಯಿಲ್ಲ. ನಮ್ಮ ನಿರೀಕ್ಷಿತ ಗುರಿಯನ್ನು ತದನಂತರ ಪೂರೈಸಬಹುದು. ಪ್ರಧಾನಿ ಎಲ್ಲ ವಿವರ ಪಡೆಯುತ್ತಿದ್ದು, ಪರಿಸ್ಥಿತಿ ತಿಳಿಯಾದ ಬಳಿಕ ನಮಗಾದ ನಷ್ಟದ ಕುರಿತು ತಿಳಿಸಲಾಗುವುದು.
ವಿಷ್ಣುಕಾಂತ್‌,
ವ್ಯವಸ್ಥಾಪಕ ನಿರ್ದೇಶಕ, ಶಿಲ್ಪಾ ಮೆಡಿಕೇರ್‌

Advertisement

Udayavani is now on Telegram. Click here to join our channel and stay updated with the latest news.

Next