Advertisement

ಅಸಹಕಾರದಿಂದ ಸಹಕಾರಿ ರಂಗ ದುರ್ಬಲ

04:17 PM Nov 15, 2019 | Naveen |

ಸಿದ್ಧಯ್ಯಸ್ವಾಮಿ ಕುಕನೂರು
ರಾಯಚೂರು:
ಜನರ ಅಸಹಕಾರ, ತಿಳಿವಳಿಕೆ ಕೊರತೆ ಮಧ್ಯೆಯೂ ಜಿಲ್ಲೆಯಲ್ಲಿ ಸಹಕಾರಿ ವಲಯ ಬೆಳೆದು ಬಂದ ರೀತಿ ಅಚ್ಚರಿ ಮೂಡಿಸುತ್ತದೆ. ಸಹಕಾರಿ ಸಂಘಗಳನ್ನು ಸಮರ್ಪಕವಾಗಿ ಬಳಸಿಕೊಳ್ಳುವಲ್ಲಿ ಜಿಲ್ಲೆಯ ಜನ ಹಿಂದುಳಿದಿರುವುದು ಮೇಲ್ನೋಟಕ್ಕೆ ಕಂಡು ಬರುತ್ತದೆ.

Advertisement

ಬೇರೆ ಜಿಲ್ಲೆಗಳಲ್ಲಿ ಸಹಕಾರಿ ಕ್ಷೇತ್ರದಲ್ಲಿ ಕ್ರಾಂತಿಯಾಗುತ್ತಿದ್ದರೆ ಇಲ್ಲಿ ಮಾತ್ರ ಆಮೆ ವೇಗದಲ್ಲಿ ಸಾಗುತ್ತಿತ್ತು. ಅದರ ಮಧ್ಯೆಯೂ ರಾಯಚೂರು ಒಕ್ಕಲುತನ ಹುಟ್ಟುವಳಿ ಮಾರಾಟ ಸೌಹರ್ದ ಸಹಕಾರದಂಥ ಸಂಘಗಳು ರಾಜ್ಯಮಟ್ಟದಲ್ಲಿ ಗಮನ ಸೆಳೆದಿದ್ದು ವಿಶೇಷ. ಜನ ಸಹಕಾರಿ ಸಂಘಗಳು, ಬ್ಯಾಂಕ್‌ಗಳಿಂದ ಸಾಲ ಪಡೆಯುತ್ತಿದ್ದಾರಾದರೂ ಸಕಾಲಕ್ಕೆ ಮರುಪಾವತಿ ಮಾಡದ ಕಾರಣ ಅವು ದುರ್ಬಲಗೊಂಡಿವೆ. ಕೆಲವೊಂದು ಸ್ಥಗಿತಗೊಂಡರೆ ಸಾಕಷ್ಟು ಸಂಘ ಸಂಸ್ಥೆಗಳು ಮುಚ್ಚಿ ಹೋಗಿವೆ.

252 ಸಂಘಗಳು ನಿಷ್ಕ್ರಿàಯ: ಜಿಲ್ಲೆಯಲ್ಲಿ ಒಟ್ಟು 1,242 ಸಂಘಗಳು ನೋಂದಣಿಗೊಂಡಿದ್ದು, ಅದರಲ್ಲಿ ಈವರೆಗೆ 888 ಮಾತ್ರ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. 252 ಸಂಘಗಳು ನಿಷ್ಕ್ರಿàಯಗೊಂಡರೆ, 102 ಸಂಘಗಳು ಸಮಾಪನೆಗೊಂಡಿವೆ. ಅದರಲ್ಲಿ 478 ಸಂಘಗಳು ಲಾಭದಲ್ಲಿ ಕೆಲಸ ಮಾಡುತ್ತಿದ್ದರೆ, 596 ಸಂಘಗಳು ನಷ್ಟದಲ್ಲಿವೆ. ಕೇವಲ ಪರಿಶಿಷ್ಟ ಜಾತಿ, ಪಂಗಡದ ಜನರಿಗಾಗಿ-23, ಮಹಿಳೆಯರಿಗಾಗಿ 134, ಅಲ್ಪಸಂಖ್ಯಾತರಿಗಾಗಿ 18 ಸಂಘಗಳು ಶ್ರಮಿಸುತ್ತಿವೆ. ಅವುಗಳಲ್ಲಿ ಆರ್‌ಡಿಸಿಸಿ, ಕೃಷಿ ಪತ್ತಿನ ಸಹಕಾರ ಸಂಘಗಳು ಕೋಟಿ ವ್ಯವಹಾರದ ಗಡಿ ದಾಟಿದರೆ ಉಳಿದವು ಇನ್ನೂ ಲಕ್ಷದಲ್ಲೇ ಉಳಿದಿರುವುದು ವಿಪರ್ಯಾಸ.

ಜಿಲ್ಲೆಯಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಸಂಘಗಳು ಸ್ಥಗಿತಗೊಳ್ಳಲು ಜನರ ಅಸಹಕಾರ ಕಾರಣ ಒಂದಾದರೆ, ಆಂತರಿಕ ಸಮಸ್ಯೆಗಳು ಮತ್ತೂಂದು ಕಾರಣ. ಸಾಕಷ್ಟು ಸಂಘ ಸಂಸ್ಥೆಗಳಲ್ಲಿ ಹಣ ದುರ್ಬಳಕೆ ಆರೋಪಗಳು ಕೇಳಿ ಬರುತ್ತಿವೆ. ಸ್ವಹಿತಾಸಕ್ತಿಗಾಗಿ ತಮಗೆ ಬೇಕಾದವರಿಗೆ ಬೇಕಾಬಿಟ್ಟಿ ಸಾಲ ಮಂಜೂರಾತಿ ಮಾಡಿ ಸಂಘಗಳ ಆರ್ಥಿಕ ದಿವಾಳಿತನಕ್ಕೆ ಕಾರಣವಾದ ನಿದರ್ಶನಗಳಿವೆ. ಇನ್ನೂ ಕೆಲವೆಡೆ ಅಧಿಕಾರ ದಾಹದಿಂದ ಒಳಜಗಳ ಹೆಚ್ಚಾಗಿಯೂ ಸಂಘಗಳ ಅಸ್ತಿತ್ವಕ್ಕೇ ಧಕ್ಕೆ ತರುವ ಕೆಲಸಗಳು ನಡೆಯುತ್ತಿವೆ. ಸಕಾಲಕ್ಕೆ ಸಾಲ ಮರುಪಾವತಿಯಾಗದೆ ನಿರ್ವಹಣೆ ಸಂಕಷ್ಟಕ್ಕೆ ಗುರಿಯಾಗಿದೆ. ಇಷ್ಟೆಲ್ಲದರ ಮಧ್ಯೆಯೂ 478 ಸಂಘಗಳು ಲಾಭದಲ್ಲಿ ಕೆಲಸ ಮಾಡುತ್ತಿರುವುದು ಸಮಾಧಾನಕರ ಸಂಗತಿ.

ಆರ್‌ಡಿಸಿಸಿ ಸಕ್ರಿಯ: ರಾಯಚೂರು ಜಿಲ್ಲಾ ಸಹಕಾರ ನಿಯಮಿತ ಬ್ಯಾಂಕ್‌ ಕೊಪ್ಪಳ ಒಳಗೊಂಡು ಕಾರ್ಯ ನಿರ್ವಹಿಸುತ್ತಿದೆ. ಜಿಲ್ಲೆಯಲ್ಲಿ ಇದರ 14 ಶಾಖೆಗಳಿದ್ದು, 42,200 ಸದಸ್ಯರಿದ್ದಾರೆ. 184 ಕೋಟಿ ರೂ ಕೃಷಿ ಸಾಲ ವಿತರಣೆಯಾಗಿದ್ದರೆ, 96 ಕೋಟಿ ಕೃಷಿಯೇತರ ಸಾಲ ಮಂಜೂರು ಮಾಡಲಾಗಿದೆ. 272 ಕೋಟಿ ಸಾಲ ಮನ್ನಾ ಆಗಿದೆ. ಒಟ್ಟಾರೆ ರಾಯಚೂರು ಜಿಲ್ಲೆಯಲ್ಲಿ 800 ಕೋಟಿಗೂ ಅ ಧಿಕ ವಹಿವಾಟು ನಡೆಸುತ್ತಿದೆ. ಎಲ್ಲ ಶಾಖೆಗಳು ಡಿಜಿಟಲೀಕರಣಗೊಂಡಿದ್ದು, ಶೀಘ್ರದಲ್ಲೇ ಇನ್ನೆರಡು ಕಡೆ ಶಾಖೆ ಆರಂಭಿಸುವ ಉದ್ದೇಶವಿದೆ. ಆದರೆ, ಇನ್ನೂ ಸ್ಥಳ ನಿಗದಿ ಮಾಡುವ ಕೆಲಸವಾಗಿಲ್ಲ. ಬಹುತೇಕ ಬ್ಯಾಂಕ್‌ಗಳು ಕೋಟಿಗಿಂತ ಮಿಗಿಲಾದ ವ್ಯವಹಾರ ಮಾಡುತ್ತಿವೆ.

Advertisement

ರಾಯಚೂರು ಜಿಲ್ಲಾ ಸಹಕಾರ ನಿಯಮಿತ ಮತ್ತು ಕೃಷಿ ಪತ್ತಿನ ಸಹಕಾರ ಸಂಘಗಳು ಜಿಲ್ಲೆಯಲ್ಲಿ ಸಾಕಷ್ಟು ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಬಹುತೇಕ ಆರ್‌ಡಿಸಿಸಿ ಬ್ಯಾಂಕ್‌ಗಳು ಡಿಜಿಟಲೀಕರಣಗೊಂಡಿದ್ದರೆ, ಕೃಷಿ ಪತ್ತಿನ ಸಹಕಾರ ಸಂಘಗಳು ಆ ದಿಸೆಯಲ್ಲಿ ಸಾಗಿವೆ. ಜಿಲ್ಲೆಯಲ್ಲಿ 132 ಕೃಷಿ ಪತ್ತಿನ ಸಹಕಾರ ಸಂಘಗಳಿದ್ದು, ಅದರಲ್ಲಿ 105 ಈಗಾಗಲೇ ಗಣಕೀಕೃತಗೊಂಡಿವೆ. ಇನ್ನೂ 17ಕ್ಕೆ ಪ್ರಸ್ತಾವನೆ ಸಲ್ಲಿಸಿದ್ದು, ಶೀಘ್ರದಲ್ಲೇ ಆಗಲಿವೆ ಎನ್ನುತ್ತಾರೆ ಅಧಿಕಾರಿಗಳು.

Advertisement

Udayavani is now on Telegram. Click here to join our channel and stay updated with the latest news.

Next