Advertisement

ರಾಯಚೂರು: ಹೆದ್ದಾರಿ ಒತ್ತುವರಿ ತೆರವಿಗೆ 7 ದಿನ ಗಡುವು!

06:20 PM Dec 27, 2023 | Team Udayavani |

ಮಸ್ಕಿ: ಪಟ್ಟಣದ ಅಶೋಕ ವೃತ್ತದಿಂದ ಬಸವೇಶ್ವರ ವೃತ್ತದವರೆಗೆ 2 ಕಿ.ಮೀ ಹೆದ್ದಾರಿ ವ್ಯಾಪ್ತಿ ಒತ್ತುವರಿ ಮಾಡಿ ಕಟ್ಟಿದ ಕಟ್ಟಡ, ಗೂಡಂಗಡಿ, ಶೆಡ್‌ಗಳ ತೆರವಿಗೆ ಏಳು ದಿನಗಳ ಗಡುವು ನೀಡಲಾಗಿದೆ. ಗಡುವಿನ ಒಳಗೆ ಸ್ವಯಂ ತೆರವು ಮಾಡಿಕೊಳ್ಳದಿದ್ದರೆ ಪುರಸಭೆಯಿಂದ ತೆರವು ಕಾರ್ಯಾಚರಣೆ ಆರಂಭವಾಗಲಿದೆ.

Advertisement

ಮಸ್ಕಿ ಪಟ್ಟಣದ ಹೃದಯ ಭಾಗದಲ್ಲಿ ಹಾದು ಹೋದ ರಾಷ್ಟ್ರೀಯ ಹೆದ್ದಾರಿ-150(ಎ) ಸುಧಾರಣೆ ಕಾಮಗಾರಿ ಆರಂಭವಾಗಿದೆ. ಸಿಟಿ ಲಿಮಿಟ್ಸ್‌ ರಸ್ತೆಯ ಅಗಲೀಕರಣ ಕಾಮಗಾರಿ ಭರದಿಂದ ಸಾಗಿದೆ. ಆದರೆ, ಇಲ್ಲಿ ರಸ್ತೆಗೆ ಸೇರಿದ ಜಾಗ ಅತಿಕ್ರಮಣ ಮಾಡಿ ಹಲವು ಗೂಡಂಗಡಿ, ಹೋಟೆಲ್‌, ಶೆಡ್‌ಗಳ ನಿರ್ಮಾಣವಾಗಿದ್ದ ಇವುಗಳ ತೆರವು ಮಾಡದ್ದರಿಂದ ಕೆಲಸಕ್ಕೆ ತೊಂದರೆಯಾಗಿದೆ. ಹೀಗಾಗಿ ಪುರಸಭೆ ಆಡಳಿತಾಧಿಕಾರಿಗಳು, ಎಸಿಯೂ ಆಗಿರುವ ಅವಿನಾಶ ಶಿಂಧೆ ಕೂಡಲೇ ಒತ್ತುವರಿ ತೆರವು ಮಾಡುವಂತೆ ಆದೇಶ ನೀಡಿದ್ದು, ಇದಕ್ಕಾಗಿ ಏಳು ದಿನಗಳ ಗುಡುವು ನೀಡಿದ್ದಾರೆ.

10 ಕೋಟಿ ರೂ. ಕೆಲಸ: ಪಟ್ಟಣ ಸುಂದರೀಕರಣ, ರಸ್ತೆ ಅಗಲೀಕರಣ, ವಿಭಜಕ ನಿರ್ಮಾಣ, ಚರಂಡಿ ನಿರ್ಮಾಣಕ್ಕಾಗಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿ ಕಾರದಿಂದ 10 ಕೋಟಿ ರೂ. ಅನುದಾನ ಬಿಡುಗಡೆಯಾಗಿದೆ. ಇದಕ್ಕಾಗಿ ಕಳೆದ ಎರಡು ತಿಂಗಳಿಂದ ಕಾಮಗಾರಿಯೂ ಆರಂಭವಾಗಿದೆ. ಆದರೆ ರಸ್ತೆಯ ಮಧ್ಯದಿಂದ ಎಡ ಮತ್ತು ಬಲ ಬದಿಯಲ್ಲಿ 50 ಅಡಿವರೆಗೂ ರಸ್ತೆ
ಅಗಲೀಕರಣ ಅಗತ್ಯವಿದೆ.

ಈ 50 ಅಡಿಗಳಲ್ಲಿನ ಜಾಗ ಎಲ್ಲೆಂದರಲ್ಲಿ ಒತ್ತುವರಿಯಾಗಿದ್ದು, ಒತ್ತುವರಿಯಾದ ಜಾಗವನ್ನು ಎನ್‌ಎಚ್‌, ಪುರಸಭೆ ಮತ್ತು ಕಂದಾಯ ಇಲಾಖೆ ಅ ಧಿಕಾರಿಗಳು ಜತೆಗೂಡಿ ಗುರುತು ಮಾಡಿದ್ದಾರೆ. ಒತ್ತುವರಿದಾರರಿಗೆ ನೋಟಿಸ್‌ ಸಹ ನೀಡಲಾಗಿದೆ. ಆದರೆ ಇನ್ನು ಬಹುತೇಕ ಕಡೆಗಳಲ್ಲಿ ಒತ್ತುವರಿ ತೆರವು ಮಾಡದ್ದರಿಂದ ಈಗ ಆರಂಭವಾದ ಕೆಲಸಕ್ಕೆ ತೊಂದರೆಯಾಗಿದೆ. ಮೊದಲ ಹಂತವಾಗಿ ಚರಂಡಿ ಕಾಮಗಾರಿ ಮಾಡಲಾಗುತ್ತಿದೆ. ಕಾಮಗಾರಿಗಾಗಿ ಜೆಸಿಬಿ ಯಂತ್ರ ಬಳಸುತ್ತಿದ್ದು, ಇದರಿಂದ ಹಗಲು-ರಾತ್ರಿ ಸಂಚಾರಕ್ಕೆ ತೊಂದರೆಯಾಗುತ್ತಿದೆ. ರಸ್ತೆ ಮಧ್ಯದಲ್ಲಿಯೇ ಜೆಸಿಬಿ ನಿಲ್ಲಿಸಿ ಕೆಲಸ ಮಾಡಲಾಗುತ್ತಿದೆ. ಟ್ರಾಫಿಕ್‌ ಹೆಚ್ಚಾಗಿ ಸಂಚಾರಕ್ಕೂ ತೊಂದರೆಯಾಗುತ್ತಿದೆ.

ಕೊನೆ ಎಚ್ಚರಿಕೆ: ರಸ್ತೆ ಒತ್ತುವರಿ ಮಾಡಿದ ಪ್ರದೇಶ ತೆರವು ಮಾಡಿದರೆ ಕೆಲಸಕ್ಕೆ ಅನುಕೂಲವಾಗಲಿದ್ದು, ಟ್ರಾಫಿಕ್‌ ಪ್ರಮಾಣವೂ ಕಡಿಮೆಯಾಗಲಿದೆ. ಇದಕ್ಕಾಗಿ ಲಿಂಗಸುಗೂರು ಸಹಾಯಕ ಆಯುಕ್ತ ಅವಿನಾಶ ಶಿಂಧೆ ನೇತೃತ್ವದಲ್ಲಿ ಎರಡು ಬಾರಿ ಪ್ರತ್ಯೇಕ ಸಭೆ ಕರೆದು ಒತ್ತುವರಿ ತೆರವಿಗೆ ಸೂಚನೆ ನೀಡಲಾಗಿತ್ತು. ಆದರೆ ಇದುವರೆಗೂ ಬಹುತೇಕ ಕಡೆ ತೆರವಾಗಿಲ್ಲ. ಇದರಿಂದಾಗಿ ಕೊನೆ ಎಚ್ಚರಿಕೆ ನೀಡಿರುವ ಎಸಿ ಕೂಡಲೇ ಎಲ್ಲ ಒತ್ತುವರಿದಾರರು ಏಳು ದಿನದೊಳಗೆ ಗುರುತು ಮಾಡಿದ ಒತ್ತುವರಿ ಜಾಗ ತೆರವು ಮಾಡಬೇಕು. ಇಲ್ಲದಿದ್ದರೆ ಪುರಸಭೆಯಿಂದಲೇ ಒತ್ತುವರಿ ತೆರವು ಕಾರ್ಯಾಚರಣೆ ಆರಂಭಿಸಲಾಗುವುದು ಎಂದು ಎಚ್ಚರಿಕೆ ನೀಡಿದ್ದಾರೆ.

Advertisement

ರಸ್ತೆ ಒತ್ತುವರಿ ಮಾಡಿ ಕಟ್ಟಿಕೊಂಡ ಎಲ್ಲ ಅಂಗಡಿ, ಶೆಡ್‌ಗಳನ್ನು ತೆರವು ಮಾಡುವಂತೆ ಈಗಾಗಲೇ ನೋಟಿಸ್‌ ನೀಡಿದ್ದೇವೆ. ಕೆಲವರು ತೆರವು ಮಾಡಿಕೊಂಡಿದ್ದರೆ ಇನ್ನು ಬಹುತೇಕರು ಖಾಲಿ ಮಾಡಿಲ್ಲ. ವಾರದಲ್ಲಿ ಖಾಲಿ ಮಾಡದಿದ್ದರೆ ಎಸಿಯವರ ಸೂಚನೆಯಂತೆ ನಾವೇ ತೆರವು ಮಾಡಿಸುತ್ತೇವೆ.
ನರಸರೆಡ್ಡಿ,
ಮುಖ್ಯಾಧಿಕಾರಿ, ಪುರಸಭೆ, ಮಸ್ಕಿ

*ಮಲ್ಲಿಕಾರ್ಜುನ ಚಿಲ್ಕರಾಗಿ

Advertisement

Udayavani is now on Telegram. Click here to join our channel and stay updated with the latest news.

Next