ರಾಯಬಾಗ: ದೇವರು ವರ ಕೊಟ್ಟರೂ ಪೂಜಾರಿ ವರ ಕೊಡಲ್ಲಿಲ್ಲ ಎಂಬಂತೆ ಜಿ.ಎಲ್.ಬಿ.ಸಿ. ಅನುದಾನದಲ್ಲಿ 1.60 ಕೋಟಿ ರೂ. ವೆಚ್ಚದಲ್ಲಿ 33 ಚಿಕ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಟೆಂಡರ್ ಆಗಿದ್ದು, ಗುತ್ತಿದಾರ ಸಹ ಕೆಲಸ ಪ್ರಾರಂಭಿಸಿದ್ದಾರೆ.
ಆದರೆ ಕೆಲ ರೈತರು ಇದಕ್ಕೆ ತಕರಾರು ಮಾಡಿದ್ದರಿಂದ, ಸರ್ವೆ ಮಾಡಿ ನಿಮ್ಮ ರಸ್ತೆ ಎಲ್ಲಿ ಬರುತ್ತದೆ ಅಲ್ಲಿ ತೆಗೆದುಕೊಳ್ಳಿ ಎಂದಿದ್ದಾರೆ. ಅದರಂತೆ ಸರ್ವೆ ಇಲಾಖೆಯ ಅಧಿಕಾರಿಗಳಿಗೆ ಹಾಗೂ ತಾಲೂಕು ದಂಡಾಧಿಕಾರಿಗಳಿಗೆ ಹಲವಾರು ಬಾರಿ ಮನವಿ ಮಾಡಿಕೊಂಡರೂ ಕೂಡ ಇಲ್ಲಿಯವರೆಗೂ ಯಾರು ಇತ್ತ ಕಡೆ ಯಾವ ಅಧಿಕಾರಿಗಳು ಗಮನ ಹರಿಸಿಲ್ಲ ಎಂದು ಅಲ್ಲಿನ ಸಾರ್ವಜನಿಕರು ತಮ್ಮ-ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಮಳೆಗಾಲ ಪ್ರಾರಂಭವಾಗಿದ್ದು, ಶಾಲಾ ವಿದ್ಯಾರ್ಥಿಗಳು ಹಾಗೂ ಅನಾರೋಗ್ಯಕ್ಕೆ ತುತ್ತಾಗಿರುವವರನ್ನು ತುರ್ತಾಗಿ ಆಸ್ಪತ್ರೆಗೆ ಹಾಗೂ ಶಾಲೆಗೆ ಈ ರಸ್ತೆ ಮೂಲಕ ಹೋಗಬೇಕಾದರೆ ಹರ ಸಾಹಸ ಪಡಬೇಕಾಗುತ್ತದೆ.
ವಿದ್ಯಾರ್ಥಿಗಳು ಶಾಲೆಗೆ ಹೋಗುವಾಗ ಸೈಕಲ್ ಮೂಲಕ ಹಾಗೂ ನಡೆದುಕೊಂಡು ಹೋಗುವ ಸಂದರ್ಭ ಜಾರಿ ಬಿದ್ದು, ಸಮವಸ್ತ್ರವೆಲ್ಲ ಕೊಳೆಯಾಗುತ್ತದೆ. ಅಷ್ಟೇ ಅಲ್ಲದೆ ಸೈಕಲ್ ಗಳಲ್ಲಿ ರಾಡಿ ಸಿಕ್ಕು ಸೈಕಲ್ ಹಾಳಾಗಿವೆ. ಶಾಲೆಗೆ ಸರಿಯಾದ ಸಮಯಕ್ಕೆ ತಲುಪಲು ಆಗುತ್ತಿಲ್ಲ ಎಂದು ವಿದ್ಯಾರ್ಥಿಗಳು ತಮ್ಮ ಸಮಸ್ಯೆ ಹೇಳಿಕೊಂಡಿದ್ದಾರೆ. ಆದಷ್ಟು ಬೇಗ ಈ ರಸ್ತೆ ಸಮಸ್ಯೆಗೆ ಪರಿಹಾರ ಸಿಗಲಿ ಎಂಬುದು ಸಾರ್ವಜನಿಕರ ಮನವಿ.