ಉದಯವಾಣಿ ಸಮಾಚಾರ
ರಾಯಬಾಗ: ಸರ್ಕಾರ ಶಿಕ್ಷಣ ಕ್ಷೇತ್ರಕ್ಕೆ ಸಾಕಷ್ಟು ಅನುದಾನ ನೀಡುತ್ತಿದ್ದು, ಅನುದಾನದಡಿ ಕೈಗೊಳ್ಳುವ ಅಭಿವೃದ್ಧಿ ಯೋಜನೆಗಳು ಕೆಲವೆಡೆ ಸದುಪಯೋಗವಾಗುತ್ತಿಲ್ಲ. ಅದಕ್ಕೆ ಉದಾಹರಣೆ ಎಂಬಂತೆ ತಾಲೂಕಿನ ಮೊರಬ ಸರ್ಕಾರಿ ಪ್ರೌಢಶಾಲೆ ಶಿಕ್ಷಕರಿಗೆ ಅನುಕೂಲವಾಗಲೆಂದು ಪ್ರೌಢಶಾಲೆ ಆವರಣದಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಿದ್ದ ವಸತಿ ನಿಲಯ ಸಮುಚ್ಚಯ ಈಗ ಪಾಳು ಬಿದ್ದಿದೆ.
ಶಿಕ್ಷಕರು ತಾವು ಕಾರ್ಯ ನಿರ್ವಹಿಸುವ ಶಾಲೆ ಹತ್ತಿರ ಕುಟುಂಬದೊಂದಿಗೆ ವಾಸಿಸಲಿ ಎಂಬ ಉದ್ದೇಶದಿಂದ ಈ ವಸತಿ ನಿಲಯ
ನಿರ್ಮಿಸಲಾಗಿದೆ. ಆದರೆ ಈ ಕಟ್ಟಡ ಸದುಪಯೋಗ ಆಗದೆ ಅನೈತಿಕ ಚಟುವಟಿಕೆಗಳ ತಾಣಗಳಾಗಿ ಬದಲಾಗಿದೆ.
ಮೊರಬ ಶಿಕ್ಷಕರ ವಸತಿ ಸಮುಚ್ಚಯ ನಿರ್ಜನ ಪ್ರದೇಶದಲ್ಲಿದ್ದು, ಮೂಲ ಸೌಕರ್ಯಗಳ ಕೊರತೆ ಎದ್ದು ಕಾಣುತ್ತಿದೆ. ಜನವಸತಿ ಪ್ರದೇಶದಿಂದ ದೂರವಿದ್ದು, ಇಲ್ಲಿ ಶಿಕ್ಷಕರು ನೆಲೆಸಲು ಹಿಂದೇಟು ಹಾಕಿದ್ದರಿಂದ ವಸತಿ ಸಮುಚ್ಚಯ ಪಾಳು ಬಿದ್ದಂತಾಗಿದೆ.
ವಸತಿ ಸಮುಚ್ಚಯದ ಬಾಗಿಲುಗಳು ಮುರಿದಿವೆ, ಕಿಟಕಿ ಗಾಜುಗಳು ಒಡೆದಿವೆ, ಪೈಪ್ ಗಳು ಕಿತ್ತು ಹೋಗಿವೆ, ವಿದ್ಯುತ್ ಸಲಕರಣೆಗಳು ನೇತಾಡುತ್ತಿವೆ, ಈ ಕಟ್ಟಡದ ಸುತ್ತಮುತ್ತ ಗಿಡಗಂಟಿಗಳು ಬೆಳೆದು ನಿಂತಿವೆ. ವಸತಿ ಸಮುಚ್ಚಯ ಜನವಸತಿ ಪ್ರದೇಶದಲ್ಲಿದ್ದರೆ ನೆಲೆಸಲು ಅನುಕೂಲವಾಗುತ್ತಿತ್ತು. ಆದರೆ ನಿರ್ಜನ ಪ್ರದೇಶದಲ್ಲಿ ಇರುವುದರಿಂದ ಶಿಕ್ಷಕರು ಇಲ್ಲಿ ನೆಲೆಸಲು ಮುಂದಾಗುತ್ತಿಲ್ಲ ಎನ್ನಲಾಗುತ್ತಿದೆ.
ವಸತಿ ನಿಲಯಗಳು ನಿರುಪಯುಕ್ತವಾಗಿರುವುದು ಗಮನಕ್ಕೆ ಬಂದಿದ್ದು, ಅವುಗಳನ್ನು ಸುಮಾರು 10 ವರ್ಷಗಳ ಹಿಂದೆ ನಿರ್ಮಿಸಲಾಗಿದೆ. ಅವಕಾಶವಿದ್ದರೆ ಅವುಗಳ ಸದುಪಯೋಗ ಮಾಡಿಕೊಳ್ಳಲು ಗ್ರಾಮ ಪಂಚಾಯಿತಿಗೆ ಪತ್ರ ಬರೆದು, ಅವರೊಂದಿಗೆ ಚರ್ಚಿಸಿ, ಮುಂದಿನ ಕ್ರಮ ಕೈಗೊಳ್ಳುತೇನೆ.
ಬಸವರಾಜಪ್ಪ ಆರ್., ಕ್ಷೇತ್ರ ಶಿಕ್ಷಣಾಧಿಕಾರಿಗಳು, ರಾಯಬಾಗ
*ಸಂಭಾಜಿ ಚವ್ಹಾಣ