Advertisement

ಸಂಪುಟಕ್ಕೆ ಸೂತ್ರ ಸಿದ್ಧ

06:00 AM Dec 14, 2018 | Team Udayavani |

ಬೆಳಗಾವಿ: ಸಂಪುಟ ವಿಸ್ತರಣೆಗೆ ಕಸರತ್ತು ಆರಂಭಿಸಿರುವ ರಾಜ್ಯ ಸಮ್ಮಿಶ್ರ ಸರ್ಕಾರದ ನಾಯಕರು ಆಕಾಂಕ್ಷಿಗಳನ್ನು ಸಮಾಧಾನ ಪಡಿಸಲು ಸರಳ ಸೂತ್ರ ಸಿದ್ದಪಡಿಸಿಕೊಂಡಿದ್ದು, ಡಿಸೆಂಬರ್‌ 21ರಂದು ಕಾಂಗ್ರೆಸ್‌ ಹೈಕಮಾಂಡ್‌ ಮುಂದೆ ಈ ಸೂತ್ರವನ್ನು ಇಡಲು ತೀರ್ಮಾನಿಸಿದ್ದಾರೆ. ಕಾಂಗ್ರೆಸ್‌ನಲ್ಲಿ ಖಾಲಿ ಇರುವ 6 ಸಚಿವ ಸ್ಥಾನಗಳನ್ನು ಜಾತಿವಾರು ರೀತಿಯಲ್ಲಿ ಹಂಚಿಕೆ ಮಾಡಲು ನಿರ್ಧರಿಸಲಾಗಿದೆ. ಲಿಂಗಾಯತ, ಒಕ್ಕಲಿಗ, ಹಿಂದುಳಿದ ವರ್ಗ, ಅಲ್ಪಸಂಖ್ಯಾತ, ದಲಿತ ಎಡಗೈ ಸಮುದಾಯ, ವಾಲ್ಮೀಕಿ ಸಮುದಾಯದ ಒಬ್ಬರನ್ನು ಸಚಿವರನ್ನಾಗಿ ಮಾಡಲು ನಿರ್ಧರಿಸಿದ್ದಾರೆ ಎನ್ನಲಾಗಿದೆ.

Advertisement

ಅದರ ಜತೆಗೆ 10 ಜನ ಸಂಸದೀಯ ಕಾರ್ಯದರ್ಶಿಗಳನ್ನು ನೇಮಕ ಮಾಡಲು ನಿರ್ಧರಿಸಿದ್ದು, 6 ಜನ ಕಾಂಗ್ರೆಸ್‌ಗೆ 3 ಜನ  ಜೆಡಿಎಸ್‌ನಿಂದ ನೇಮಕ ಮಾಡುವ ಆಲೋಚನೆ ವರಿಷ್ಠರದ್ದು. ಜತೆಗೆ ಕಾಂಗ್ರೆಸ್‌ನ ಒಬ್ಬರು ಹಿರಿಯ ಶಾಸಕರನ್ನು ಮುಖ್ಯಮಂತ್ರಿಯ ರಾಜಕೀಯ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿ ಸಂಪುಟ ದರ್ಜೆಯ ಸ್ಥಾನ ನೀಡಬೇಕೆಂಬ ಸೂತ್ರವನ್ನು ಮೈತ್ರಿ ಸರ್ಕಾರದ ನಾಯಕರು ಹೆಣೆದಿದ್ದಾರೆ ಎನ್ನಲಾಗಿದೆ. 

ಯಾರಿಗೂ ಕೊಕ್‌ ಇಲ್ಲ: ಸದ್ಯದ ಪರಿಸ್ಥಿತಿಯಲ್ಲಿ ಸಚಿವಾಕಾಂಕ್ಷಿಗಳ ಪಟ್ಟಿ ದೊಡ್ಡದಿದ್ದರೂ, ಹಾಲಿ ಸಚಿವರನ್ನು ಕೈಬಿಡದಿರಲು ರಾಜ್ಯ ಕಾಂಗ್ರೆಸ್‌ ನಾಯಕರು ನಿರ್ಧರಿಸಿದ್ದಾರೆ ಎನ್ನಲಾಗಿದೆ. ಖಾಲಿ ಇರುವ 6 ಸ್ಥಾನಗಳನ್ನು ಮಾತ್ರ ಭರ್ತಿ ಮಾಡಿ, ಎರಡು ವರ್ಷದ  ನಂತರವೇ ಬದಲಾವಣೆ ಮಾಡುವ ಲೆಕ್ಕಾಚಾರ ಹಾಕಿದ್ದಾರೆ ಎಂದು ತಿಳಿದು ಬಂದಿದೆ. ಇನ್ನೊಂದು ಮೂಲಗಳ ಪ್ರಕಾರ, ಲೋಕಸಭೆ ಚುನಾವಣೆವರೆಗೂ ಸಂಪುಟ ವಿಸ್ತರಣೆ ಮಾಡುವುದು ಬೇಡ ಎಂಬ ನಿರ್ಧಾರಕ್ಕೆ ಕಾಂಗ್ರೆಸ್‌ ಹೈಕಮಾಂಡ್‌ ಬಂದಿದೆ ಎಂದು ಹೇಳಲಾಗುತ್ತಿದೆ.

ಸಿದ್ದರಾಮಯ್ಯ ಮಾತುಕತೆ: ಮಲೇಶಿಯಾ ಪ್ರವಾಸ ಮೊಟಕುಗೊಳಿಸಿ ಬಂದಿರುವ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಅವರ ಜತೆ ಕೆಲವು ಶಾಸಕರು ಹಾಗೂ ಸಚಿವರು ದೂರವಾಣಿ ಮೂಲಕ ಮಾತುಕತೆ ನಡೆಸಿದರು. ಸಭಾಪತಿ ಆಯ್ಕೆ ವಿಚಾರದಲ್ಲಿ ಉತ್ತರ ಕರ್ನಾಟಕಕ್ಕೆ ಅನ್ಯಾಯ ಆಗಿರುವ ಬಗ್ಗೆಯೂ ಪ್ರಸ್ತಾಪಿಸಿದರು. ಜತೆಗೆ ಸಂಪುಟ ವಿಸ್ತರಣೆಯಲ್ಲಿ ಉತ್ತರ ಕರ್ನಾಟಕಕ್ಕೆ ಇನ್ನೂ ಹೆಚ್ಚಿನ ಅವಕಾಶ ಕೊಡಬೇಕು ಎಂದು ಮನವಿ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಸಿದ್ದರಾಮಯ್ಯ ಅವರು ಸೋಮವಾರದಿಂದ ಬೆಳಗಾವಿ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಜತೆಗೆ ಡಿ.18ರ ಶಾಸಕಾಂಗ ಪಕ್ಷದ ಸಭೆಯಲ್ಲೂ ಪಾಲ್ಗೊಳ್ಳಲಿದ್ದಾರೆ. ಶುಕ್ರವಾರ ಇಲ್ಲವೇ
ಶನಿವಾರ ಕೆಪಿಸಿಸಿ ಅಧ್ಯಕ್ಷರು, ಉಪ ಮುಖ್ಯಮಂತ್ರಿ ಜತೆ ರಾಹುಲ್‌ ಭೇಟಿಗಾಗಿ ದೆಹಲಿಗೆ ತೆರಳಲಿದ್ದಾರೆ.

ನಿಗಮ ಮಂಡಳಿ ನೇಮಕ
ಸಂಪುಟ ವಿಸ್ತರಣೆಯ ಜತೆಗೆ 30 ನಿಗಮ ಮಂಡಳಿಗಳಿಗೆ ಶಾಸಕರನ್ನು ಅಧ್ಯಕ್ಷರನ್ನಾಗಿ ನೇಮಿಸುವ ಲೆಕ್ಕಾಚಾರ ಇದೆ. ಕಾಂಗ್ರೆಸ್‌ನಿಂದ 20 ಶಾಸಕರು, ಜೆಡಿಎಸ್‌ನಿಂದ 10 ಜನ ಶಾಸಕರಿಗೆ ನಿಗಮ ಮಂಡಳಿ ಅಧ್ಯಕ್ಷರ ಸ್ಥಾನ ನೀಡಿ ಸಮಾಧಾನ ಪಡಿಸುವ ಸರಳ ಸೂತ್ರವನ್ನು ನಾಯಕರುಗಳು ರೂಪಿಸಿದ್ದಾರೆ ಎನ್ನಲಾಗಿದೆ. ಈ ಕುರಿತು ಸಮನ್ವಯ ಸಮಿತಿ ಸಭೆಯಲ್ಲಿ ಚರ್ಚೆಯಾಗಿದ್ದು, ಮಾಜಿ ಪ್ರಧಾನಿ ದೇವೇಗೌಡರ ಜತೆಗೂ ಚರ್ಚೆ ನಡೆಸಲಾಗಿದೆ ಎಂದು ಹೇಳಲಾಗುತ್ತಿದೆ. ಡಿ.21 ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಭೇಟಿಗೆ ಸಮಯ ಕೇಳಿದ್ದು, ರಾಹುಲ್‌ ಅವಕಾಶ ನೀಡಿದರೆ ಆಗ ಚರ್ಚಿಸಿ ಒಪ್ಪಿಗೆ ಪಡೆಯುವ ಸಾಧ್ಯತೆ ಇದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next