Advertisement

ರಾಹುಲ್‌ V/S ಮೋದಿ; ಮಹಾಮೈತ್ರಿಗೆ ರಾಹುಲ್‌ ನಾಯಕ: ಕಾಂಗ್ರೆಸ್‌ 

06:00 AM Jul 23, 2018 | |

ನವದೆಹಲಿ: ಮುಂದಿನ ವರ್ಷ ನಡೆಯುವ ಲೋಕಸಭೆ ಚುನಾವಣೆ ಪ್ರಧಾನಿ ನರೇಂದ್ರ ಮೋದಿ ವರ್ಸಸ್‌ ರಾಹುಲ್‌ ಗಾಂಧಿ ಆಗಲಿದ್ದು, ಇದುವರೆಗೆ ದೇಶ ಕಂಡ ಅತ್ಯಂತ ಪ್ರಬಲ ಚುನಾವಣಾ ಸಮರ ಇದಾಗಲಿದೆ.

Advertisement

ಭಾನುವಾರ ನವದೆಹಲಿಯಲ್ಲಿ ರಾಹುಲ್‌ ಗಾಂಧಿ ಅಧ್ಯಕ್ಷತೆಯಲ್ಲಿ ನಡೆದ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ (ಸಿಡಬ್ಲೂéಸಿ)ಸಭೆಯಲ್ಲಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿಯವರನ್ನೇ ಪ್ರಧಾನಿ ಅಭ್ಯರ್ಥಿಯನ್ನಾಗಿ ಆಯ್ಕೆ ಮಾಡಲಾಗಿದೆ. ಜತೆಗೆ ವಿವಿಧ ರಾಜಕೀಯ ಪಕ್ಷಗಳ ಜತೆಗೆ ಮೈತ್ರಿ ಬಗ್ಗೆ ಅಂತಿಮ ನಿರ್ಧಾರ ಕೈಗೊಳ್ಳುವ ಅಧಿಕಾರವನ್ನು ರಾಹುಲ್‌ಗೇ ನೀಡಲಾಗಿದ್ದು, ಮೈತ್ರಿ ಪಕ್ಷಗಳ ಜತೆಗೂಡಿ  300 ಸ್ಥಾನಗಳನ್ನು ಗೆಲ್ಲುವ ಗುರಿ ಹಾಕಿಕೊಂಡಿದೆ. ಹೀಗಾಗಿ, ರಾಹುಲ್‌ ಗಾಂಧಿಯವರ ರಾಜಕೀಯ ಚಾಣಾಕ್ಷತೆ ಮುಂದಿನ ಚುನಾವಣೆಯಲ್ಲಿ ಪರೀಕ್ಷೆಗೆ ಒಡ್ಡಲಿದೆ.

ಪಿಎಂ ಅಭ್ಯರ್ಥಿ:
ರಾಹುಲ್‌ ಗಾಂಧಿ ಕಾಂಗ್ರೆಸ್‌ ಅಧ್ಯಕ್ಷರಾದ ಬಳಿಕ ಮೊದಲ ಸಿಡಬ್ಲೂéಸಿ ಸಭೆ ನಡೆದಿದೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮೈತ್ರಿಕೂಟದ ವಿರುದ್ಧ ಹೋರಾಟ ನಡೆಸಲು ರಾಹುಲ್‌ ಗಾಂಧಿ ಅವರೇ ಸಮರ್ಥರು. ಹೀಗಾಗಿ, ಅವರೇ ಮೈತ್ರಿ ಕೂಟದ ನೇತೃತ್ವ ವಹಿಸಬೇಕು ಎಂದು ಹೊಸತಾಗಿ ಪುನರ್‌ ರಚಿತವಾಗಿರುವ ಕಾಂಗ್ರೆಸ್‌ ಕಾರ್ಯಕಾರಿ ಸಮಿತಿ ಸಭೆಯಲ್ಲಿ 35-40 ನಾಯಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರ ಜತೆಗೆ ಯಾವ ಪಕ್ಷಗಳ ಜತೆಗೆ ಮೈತ್ರಿ ನಡೆಸಬೇಕು ಎಂಬ ಬಗ್ಗೆ ಅಂತಿಮ ನಿರ್ಧಾರವನ್ನೂ ರಾಹುಲ್‌ ಅವರೇ ಕೈಗೊಳ್ಳಲಿದ್ದಾರೆ. ವಿವಿಧ ರಾಷ್ಟ್ರೀಯ ಮತ್ತು ಪ್ರಾದೇಶಿಕ ಪಕ್ಷಗಳ ಜತೆಗೆ ಮೈತ್ರಿ ಮಾಡಿಕೊಳ್ಳಲು ಸಮಿತಿ ರಚಿಸುವ ಅಧಿಕಾರವನ್ನು ಕಾಂಗ್ರೆಸ್‌ ಅಧ್ಯಕ್ಷರಿಗೇ ನೀಡಲಾಗಿದೆ.

300 ಸ್ಥಾನಗಳು: ಸದ್ಯ ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಎನ್‌ಡಿಎ 312 ಸ್ಥಾನಗಳನ್ನು ಹೊಂದಿವೆ. ಅದೇ ಮಾದರಿಯಲ್ಲಿ ಕಾಂಗ್ರೆಸ್‌ ನೇತೃತ್ವದ ಯುಪಿಎ 2019ರ ಚುನಾವಣೆಯಲ್ಲಿ 300 ಸ್ಥಾನಗಳನ್ನು ಪಡೆಯುವ ಗುರಿ ಹಾಕಿಕೊಂಡಿದೆೆ. ಸ್ಥಾನ ಹೊಂದಾಣಿಕೆ ಮತ್ತು ಮೈತ್ರಿ ಬಗ್ಗೆ ಸುದೀರ್ಘ‌ವಾಗಿ ಮಾತನಾಡಿದ ಕೇಂದ್ರದ ಮಾಜಿ ಸಚಿವ ಪಿ.ಚಿದಂಬರಂ,  ಚುನಾವಣಾ ಪೂರ್ವ ಮೈತ್ರಿ ಒಳಿತು ಎಂದಿದ್ದಾರೆ. ಅವರ ಪ್ರಕಾರ ಸದ್ಯ ಇರುವ 48 ಸ್ಥಾನಗಳಿಂದ ಮುಂದಿನ ಚುನಾವಣೆ ವೇಳೆ ಕಾಂಗ್ರೆಸ್‌ 150 ಸ್ಥಾನಗಳನ್ನು ಗೆಲ್ಲಲು ಶಕ್ತವಾಗಲಿದೆ. 12 ರಾಜ್ಯಗಳಲ್ಲಿ ಪಕ್ಷ ಬಲಿಷ್ಠವಾಗಿದೆ. ಜತೆಗೆ ಇತರ ಪಕ್ಷಗಳ ನೆರವಿಂದ ಬಲಿಷ್ಠ ಮೈತ್ರಿಕೂಟ ರಚಿಸಲು ಸಾಧ್ಯವಿದೆ ಎಂದಿದ್ದಾರೆ.

ತುಳಿತಕ್ಕೊಳಗಾದವರ ವಿರುದ್ಧ ಹೋರಾಡಿ:
ಮೊದಲ ಬಾರಿಗೆ ಸಿಡಬ್ಲೂéಸಿಯಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಪುನಾರಚಿತ ಕಾರ್ಯಕಾರಿಣಿ ಭೂತಕಾಲ, ವರ್ತಮಾನ ಮತ್ತು ಭವಿಷ್ಯದ ದಿನಗಳನ್ನು ಪ್ರತಿನಿಧಿಸುತ್ತಿದೆ ಎಂದಿದ್ದಾರೆ. ಪಕ್ಷದ ಕಾರ್ಯಕರ್ತರು ತುಳಿತಕ್ಕೊಳಗಾದವರಿಗಾಗಿ ಹೋರಾಟ ನಡೆಸಬೇಕು ಎಂದಿದ್ದಾರೆ. ಬಿಜೆಪಿ ವಿರುದ್ಧ ವಾಗ್ಧಾಳಿ ನಡೆಸಿದ ಅವರು, ಬಡವರು, ಹಿಂದುಳಿದ ವರ್ಗದವರು, ಅಲ್ಪಸಂಖ್ಯಾತರು, ದಲಿತರ ಮೇಲೆ ದಾಳಿ ನಡೆಸುತ್ತಿದೆ ಎಂದು ಟೀಕಿಸಿದರು.

Advertisement

ಶಶಿ ತರೂರ್‌ಗೆ ಎಚ್ಚರಿಕೆ:
ತಿರುವನಂತಪುರ ಕ್ಷೇತ್ರದ ಸಂಸದ ಶಶಿ ತರೂರ್‌ ಅವರ ಇತ್ತೀಚಿನ ವಿವಾದಾತ್ಮಕ ಹೇಳಿಕೆಗಳಿಗೆ ರಾಹುಲ್‌ ಗಾಂಧಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. “ನಾನು ದೊಡ್ಡ ಹೋರಾಟ ನಡೆಸುತ್ತಿದ್ದೇನೆ. ಪ್ರತಿಯೊಬ್ಬರಿಗೂ ಪಕ್ಷದ ವೇದಿಕೆಯಲ್ಲಿ ಮಾತನಾಡುವ ಅವಕಾಶ ಇದೆ. ಆದರೆ ಯಾವನೇ ಒಬ್ಬ ನಾಯಕ ತಪ್ಪು ಹೇಳಿಕೆ ನೀಡಿ ಹೋರಾಟವನ್ನು ದುರ್ಬಲಗೊಳಿಸುವ ಪ್ರಯತ್ನ ಮಾಡಿದರೆ ಅಂಥವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯುವುದಿಲ್ಲ’ ಎಂದು ಎಚ್ಚರಿಕೆ ನೀಡಿದ್ದಾರೆ. ಆದರೆ ತರೂರ್‌ ಹೆಸರು ಪ್ರಸ್ತಾಪಿಸದೆ ಈ ಮಾತುಗಳನ್ನಾಡಿದ್ದಾರೆ ಎಂದು “ಎಎನ್‌ಐ’ ವರದಿ ಮಾಡಿದೆ.

ಮೋದಿ ಪತನಕ್ಕೆ ಕ್ಷಣಗಣನೆ: ಸೋನಿಯಾ
ಪ್ರಧಾನಿ ನರೇಂದ್ರ ಮೋದಿಯವರ ವಾಕ್ಚಾತುರ್ಯವೇ ಈಗ ಅವರ ನೇತೃತ್ವದ ಸರ್ಕಾರದ ಪತನಕ್ಕೆ ಕ್ಷಣಗಣನೆ ಎಂದಿದ್ದಾರೆ ಸೋನಿಯಾ. ಅವರ ಮಾತುಗಳು ಅದನ್ನು ಪ್ರತಿನಿಧಿಸುತ್ತವೆ ಎಂದಿದ್ದಾರೆ. ದೇಶದ ಬಡವರ ನಡುವೆ ಈಗ ಭೀತಿಯ ವಾತಾವರಣ ಮೂಡಿದೆ ಎಂದೂ ಆರೋಪಿಸಿದ್ದಾರೆ.

ಸ್ವಯಂ ಹೊಗಳಿಕೆ ಮತ್ತು ಜುಮ್ಲಾಕ್ಕೆ ಪ್ರೇರಣೆ: ಮನಮೋಹನ್‌ ಸಿಂಗ್‌
ಪ್ರಧಾನಿ ಪದೇ ಪದೆ ಸ್ವಯಂ ಹೊಗಳಿಕೆ ಮತ್ತು ಸುಳ್ಳು (ಜುಮ್ಲಾ) ಮಾತುಗಳಿಗೇ ಆದ್ಯತೆ ನೀಡುತ್ತಿದ್ದಾರೆ ಎಂದು ಮಾಜಿ ಪ್ರಧಾನಿ ಮನಮೋಹನ್‌ ಸಿಂಗ್‌ ಟೀಕಿಸಿದ್ದಾರೆ. ದೇಶ ಮತ್ತು ಅರ್ಥವ್ಯವಸ್ಥೆಯ ಬೆಳವಣಿಗೆಯ ಮೇಲೆ ಗಮನ ಕೇಂದ್ರೀಕರಿಸುವುದರ ಬದಲು ಈ ನಿಟ್ಟಿನತ್ತ ಗಮನ ಹರಿಸಲಾಗುತ್ತಿದೆ ಎಂದಿದ್ದಾರೆ. 2022ರ ಒಳಗಾಗಿ ರೈತರ ಆದಾಯ ದುಪ್ಪಟ್ಟುಗೊಳಿಸಬೇಕೆಂದರೆ ಕೃಷಿ ಪ್ರಗತಿ ದರ ಶೇ.14ರಷ್ಟಿರಬೇಕು. ಆದರೆ, ಅದ್ಯಾವುದೂ ಈಗ ಕಾಣಿಸುತ್ತಿಲ್ಲ ಎಂದು ಹೇಳಿದ್ದಾರೆ.

ಮಿಂಚಿದ ರಮ್ಯಾ
ಗಮನಾರ್ಹ ಅಂಶವೆಂದರೆ ಸಿಡಬ್ಲೂéಸಿ ಸಭೆಯಲ್ಲಿ ಮಿಂಚಿದ್ದು ಕಾಂಗ್ರೆಸ್‌ನ ಸಾಮಾಜಿಕ ಜಾಲತಾಣದ ಮುಖ್ಯಸ್ಥೆ ರಮ್ಯಾ ದಿವ್ಯಸ್ಪಂದನ. ಶ್ವೇತವರ್ಣದ ಸೀರೆಯನ್ನುಟ್ಟು ಎಲ್ಲಾ ಪ್ರಮುಖ ನಾಯಕರ ಜತೆಗೆ ಅವರು ಮಾತನಾಡಿದರು. ಗರಿಷ್ಠ ಪ್ರಮಾಣದಲ್ಲಿ ಸಾಮಾಜಿಕ ಜಾಲತಾಣಗಳನ್ನು ಬಳಕೆ ಮಾಡಲು ಅವರು ಸಲಹೆ ಮಾಡಿದ್ದಾರೆ.

ಮಿತ್ರ ಪಕ್ಷಗಳು ಒಪ್ಪುತ್ತವೆಯೇ?
ರಾಹುಲ್‌ ಅವರೇ ಮುಂದಿನ ಚುನಾವಣೆಯಲ್ಲಿ ಪ್ರಧಾನಿ ಅಭ್ಯರ್ಥಿಯಾಗಲಿದ್ದಾರೆ ಎಂದು ಕಾಂಗ್ರೆಸ್‌ ಕಾರ್ಯಕಾರಿಣಿಯಲ್ಲಿ ಘೋಷಿಸಲಾಗಿದೆ. ಆದರೆ ರಾಹುಲ್‌ ನಾಯಕತ್ವವನ್ನು ಮಹಾ ಮೈತ್ರಿಕೂಟದ ಇತರೆ ಪಕ್ಷಗಳು ಒಪ್ಪುತ್ತವೆಯೇ ಎಂಬುದೇ ಈಗಿ ರುವ ಪ್ರಶ್ನೆ. ಪ್ರಧಾನಿ ಕನಸಿನಲ್ಲಿರುವ ಮಮತಾ ಬ್ಯಾನರ್ಜಿ ಹಾಗೂ ಎನ್‌ಪಿಪಿ ನಾಯಕ ಶರದ್‌ ಪವಾರ್‌ ಈಗಾಗಲೇ ರಾಹುಲ್‌ ನಾಯಕತ್ವದ ವಿರುದ್ಧ ಪರೋಕ್ಷ ಹೇಳಿಕೆ ನೀಡಿದ್ದಾರೆ. ಎಸ್‌ಪಿ ಮುಖ್ಯಸ್ಥ ಅಖೀಲೇಶ್‌ ಯಾದವ್‌ ಕೂಡಾ ರಾಹುಲ್‌ ನೇತೃತ್ವದ ಬಗ್ಗೆ ಸ್ಪಷ್ಟ ನಿಲುವು ಹೇಳಿಲ್ಲ. ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಂ ಯೆಚೂರಿ ಅವರಂತೂ ಮಹಾಮೈತ್ರಿಕೂಟ ಮತ್ತು ರಾಹುಲ್‌ ಗಾಂಧಿ ಪ್ರಧಾನಿ ಹುದ್ದೆಗೆ ಏರುವ ಬಗ್ಗೆ ಚುನಾವಣೆ ಬಳಿಕವೇ ಚರ್ಚಿಸಲು ಸಾಧ್ಯ ಎಂದಿದ್ದರು.

ಸೋನಿಯಾ ಗಾಂಧಿ ಮೋದಿ ಸರ್ಕಾರದ ಪತನದ ಬಗ್ಗೆ ಮಾತನಾಡಿದ್ದಾರೆ. ಆದರೆ ಅವರ ಅಧ್ಯಕ್ಷತೆಯಲ್ಲಿ 2 ಅವಧಿಯಲ್ಲಿ ಭಾರತದ ಅರ್ಥ ವ್ಯವಸ್ಥೆಯನ್ನು ರಿವರ್ಸ್‌ ಗೇರ್‌ನಲ್ಲಿ ತೆಗೆದುಕೊಂಡದ್ದು ನೆನಪಿದೆಯೇ? 2019ರಲ್ಲಿ ತುಷ್ಟೀಕರಣ, ಜಾತಿವಾದದ ಕೌಂಟ್‌ಡೌನ್‌ ಆಗಲಿದೆ. ಕಾಂಗ್ರೆಸ್‌ ಈಗ ಆತ್ಮಹತ್ಯಾ ಬಾಂಬರ್‌ನ ಪಾತ್ರಕ್ಕೆ ಸಿದ್ಧವಾದಂತಿದೆ.
– ಸಂಬಿತ್‌ ಪಾತ್ರಾ, ಬಿಜೆಪಿ ವಕ್ತಾರ

Advertisement

Udayavani is now on Telegram. Click here to join our channel and stay updated with the latest news.

Next