Advertisement
ಜಿ23… ಕಾಂಗ್ರೆಸ್‌ನಲ್ಲಿ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿ ಕೇಳಿಬರುತ್ತಿರುವ ಹೆಸರು. ಕಾಂಗ್ರೆಸ್‌ನಲ್ಲಿ ಗಾಂಧಿ ಅಥವಾ ನೆಹರೂ ಕುಟುಂಬದ ವಿರುದ್ಧ ಯಾರಾದರೂ ಮಾತನಾಡುತ್ತಾರೆ ಎಂದರೆ ಅದನ್ನು ನಂಬಲೂ ಸಾಧ್ಯವಿಲ್ಲದಂಥ ಸ್ಥಿತಿ ಇತ್ತು. ಆದರೆ ಜಿ23 ನಾಯಕರ ಬಹಿರಂಗ ಹೇಳಿಕೆಗಳು ಎಲ್ಲೋ ಒಂದು ಕಡೆಯಲ್ಲಿ ಕಾಂಗ್ರೆಸ್‌ನ ಬಲವನ್ನು ಕುಗ್ಗಿಸಿದ್ದು ಸುಳ್ಳಲ್ಲ. ಹೀಗಾಗಿಯೇ ಜಿ23 ನಾಯಕರ ಬೇಡಿಕೆಯಂತೆಯೇ ಶನಿವಾರ ಕಾಂಗ್ರೆಸ್ ಕಾರ್ಯಕಾರಿ ಸಮಿತಿ(ಸಿಡಬ್ಲ್ಯುಸಿ) ಸಭೆ ನಡೆದಿದೆ.
Advertisement
ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ
ಇದು ಒಂದು ರೀತಿಯಲ್ಲಿ ಕಾಂಗ್ರೆಸ್‌ನಲ್ಲಿ ಗಾಂಧಿ ಅಥವಾ ನೆಹರೂ ಕುಟುಂಬ ತೆಗೆದುಕೊಳ್ಳುತ್ತಿದ್ದ ನಿರ್ಧಾರಗಳನ್ನು ಪ್ರಶ್ನಿಸುವಂತೆಯೇ ಇತ್ತು. ಆದರೆ ಈ ಎಲ್ಲ ಮಾತುಗಳಿಗೆ ಸೋನಿಯಾ ಗಾಂಧಿಯವರು ಸಿಡಬ್ಲ್ಯುಸಿ ಸಭೆಯಲ್ಲಿ ತಕ್ಕ ತಿರುಗೇಟನ್ನೇ ನೀಡಿದ್ದಾರೆ ಎಂಬುದು ಮಾತ್ರ ಸುಳ್ಳಲ್ಲ.ಇವೆಲ್ಲದರ ಮಧ್ಯೆ ಕಾಂಗ್ರೆಸ್‌ನಲ್ಲಿ ಆಂತರಿಕ ಪ್ರಜಾಪ್ರಭುತ್ವವಿಲ್ಲ ಎಂಬ ಬಿಜೆಪಿ ಮತ್ತು ಪಕ್ಷದೊಳಗಿನ ಜಿ23 ನಾಯಕರ ಆರೋಪಕ್ಕೆ ಉತ್ತರವಾಗಿ ಸಂಘಟನಾತ್ಮಕ ಚುನಾವಣೆಗೂ ಸಮಯ ನಿಗದಿ ಮಾಡಲಾಗಿದೆ. ಈ ನವೆಂಬರ್ 1ರಿಂದಲೇ ಪಕ್ಷದ ಸದಸ್ಯತ್ವ ಅಭಿಯಾನ ಆರಂಭವಾಗಲಿದ್ದು, ಬಳಿಕ ಜಿಲ್ಲಾ ಘಟಕಗಳು ಮತ್ತು ರಾಜ್ಯ ಘಟಕಗಳಿಗೂ ಚುನಾವಣೆಯಾಗಲಿದೆ. ಇದು ಮಾರ್ಚ್ 1ರ ವೇಳೆಗೆ ಅಂತ್ಯವಾಗಲಿದೆ. ಆಗಸ್ಟ್ ಮತ್ತು ಸೆಪ್ಟಂಬರ್‌ನಲ್ಲಿ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ಹೊಸ ಅಧ್ಯಕ್ಷರ ಆಯ್ಕೆಯಾಗಲಿದೆ. ಹಾಗಾದರೆ ಸೋನಿಯಾ ಗಾಂಧಿ ಅನಂತರದಲ್ಲಿ ಯಾರು ಎಐಸಿಸಿ ಹೊಣೆ ವಹಿಸಿಕೊಳ್ಳಲಿದ್ದಾರೆ? ಸದ್ಯಕ್ಕೆ ಈ ಪ್ರಶ್ನೆಗೆ ಇರುವುದು ಒಂದೇ ಉತ್ತರ. ಅದು ರಾಹುಲ್ ಗಾಂಧಿ. 2019ರಲ್ಲಿ ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಅನಂತರ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಾಹುಲ್ ಗಾಂಧಿ, ಮತ್ತೆ ಈ ಹುದ್ದೆ ವಹಿಸಿಕೊಳ್ಳುವುದಿಲ್ಲಎಂದೇ ಕಟ್ಟುನಿಟ್ಟಾಗಿ ಹೇಳಿದ್ದರು. ಆದರೆ ಶನಿವಾರದ ಸಿಡಬ್ಲ್ಯುಸಿ ಸಭೆಯಲ್ಲಿ ಕೇರಳದ ಎ.ಕೆ. ಆ್ಯಂಟನಿ, ಪ್ರಿಯಾಂಕಾ ವಾದ್ರಾ ಸೇರಿದಂತೆ ಹಲವಾರು ನಾಯಕರು ರಾಹುಲ್ ಗಾಂಧಿ ಅವರೇ ಮುಂದಿನ ಅಧ್ಯಕ್ಷರಾಗಬೇಕು ಎಂದು ಒತ್ತಾಯಿಸಿದ್ದಾರೆ. ವಿಶೇಷವೆಂದರೆ ಇದಕ್ಕೆ ಪೂರಕವಾಗಿಯೇ ರಾಹುಲ್ ಸ್ಪಂದಿಸಿದ್ದಾರೆ. ಅಂದರೆ ನಾಯಕರ ಆಗ್ರಹಕ್ಕೆ ಮಣಿದಂತಿರುವ ರಾಹುಲ್ ಗಾಂಧಿ, ಮತ್ತೂಮ್ಮೆ ಪಕ್ಷದ ಚುಕ್ಕಾಣಿ ವಹಿಸಿಕೊಳ್ಳಲು ನಿರ್ಧರಿಸಿದಂತೆ ಕಾಣುತ್ತಿದೆ. ರಾಹುಲ್ ಗಾಂಧಿ ಅವರು ಪಕ್ಷದ ಅಧ್ಯಕ್ಷ ಸ್ಥಾನ ವಹಿಸಿಕೊಳ್ಳುವುದು ರಾಜಕೀಯವಾಗಿಯೂ ಅನಿವಾರ್ಯವಾದ ಕ್ರಮವೇ. 2024ರ ಲೋಕಸಭೆ ಚುನಾವಣೆ ವೇಳೆಗೆ ಪಕ್ಷವನ್ನು ಬಲಪಡಿಸಲೇಬೇಕಾದ ಅನಿವಾರ್ಯತೆ ರಾಹುಲ್ ಗಾಂಧಿ ಅವರ ಮುಂದಿದೆ. ಇತ್ತೀಚೆಗೆ ಪಶ್ಚಿಮ ಬಂಗಾಲದ ಮಮತಾ ಬ್ಯಾನರ್ಜಿ ಅವರ ಟಿಎಂಸಿ, ರಾಹುಲ್ ಅವರ ನಾಯಕತ್ವ ಒಪ್ಪಲು ಸಾಧ್ಯವಿಲ್ಲವೆಂಬಂತೆ ಮಾತನಾಡಿತ್ತು. ಅಷ್ಟೇ ಅಲ್ಲ, ತಮಿಳುನಾಡು ಸೇರಿದಂತೆ ಹಲವಾರು ರಾಜ್ಯಗಳಲ್ಲಿ ಕಾಂಗ್ರೆಸ್ ಕಿರಿಯ ಪಾಲುದಾರನಾಗಿ ಕಾರ್ಯ ನಿರ್ವಹಿಸುತ್ತಿದೆ. ಪಶ್ಚಿಮ ಬಂಗಾಲದಲ್ಲಂತೂ ಪಕ್ಷ ಅಸ್ತಿತ್ವದಲ್ಲೇಇಲ್ಲದ ರೀತಿಯಲ್ಲಿ ಇದೆ. ಇದನ್ನು ತಪ್ಪಿಸಬೇಕು ಮತ್ತು ಈಗಿನ ಕೇಂದ್ರ ಸರಕಾರಕ್ಕೆ ಪ್ರಬಲ ವಿಪಕ್ಷವಾಗಿ ಗುರುತಿಸಿಕೊಳ್ಳಬೇಕು ಎಂದಾದರೆ ಪಕ್ಷ 2024ರ ವೇಳೆಗೆ ಸದೃಢವಾಗಲೇಬೇಕು. ಮೇಲೆ ಹೇಳಿದಂತೆ ಎಐಸಿಸಿ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿರುವುದು ಸೆಪ್ಟಂಬರ್ ವೇಳೆಗೆ. ಈ ಅವಧಿ ವೇಳೆಗೆ ಉತ್ತರ ಪ್ರದೇಶ, ಪಂಜಾಬ್, ಗೋವಾ, ಉತ್ತರಾಖಂಡ ಮತ್ತು ಮಣಿಪುರ ರಾಜ್ಯಗಳ ವಿಧಾನಸಭೆ ಚುನಾವಣೆ ಮುಗಿಯಲಿದೆ. ಪಂಜಾಬ್‌ನಲ್ಲಿ ಮಾತ್ರ ಕಾಂಗ್ರೆಸ್ ಅಧಿಕಾರದಲ್ಲಿದ್ದು, ಉಳಿದೆಲ್ಲ ರಾಜ್ಯಗಳಲ್ಲಿ ಬಿಜೆಪಿ ಮತ್ತದರ ಮೈತ್ರಿಕೂಟಗಳು ಅಧಿಕಾರದಲ್ಲಿವೆ. ಈ ಎಲ್ಲ ರಾಜ್ಯಗಳಲ್ಲಿ ಅತ್ಯಂತ ಪ್ರಮುಖವಾದದ್ದು ಉತ್ತರ ಪ್ರದೇಶದ ವಿಧಾನಸಭೆ ಚುನಾವಣೆ. ಈ ಬಾರಿ ಎಸ್‌ಪಿಯಾಗಲಿ ಅಥವಾ ಬಿಎಸ್‌ಪಿಯಾಗಲಿ ಕಾಂಗ್ರೆಸ್ ಜತೆಗೆ ಕೈಜೋಡಿಸಲು ತಯಾರಿಲ್ಲ. ಹೀಗಾಗಿ ಪ್ರಿಯಾಂಕಾ ವಾದ್ರಾ ಅವರ ನೇತೃತ್ವದಲ್ಲಿಯೇ ಈ ಬಾರಿ ಉತ್ತರ ಪ್ರದೇಶ ಚುನಾವಣೆಯನ್ನು ಎದುರಿಸುವ ಸಾಧ್ಯತೆ ಇದೆ. ಈ ಚುನಾವಣೆಗಾಗಿ ಈಗಿನಿಂದಲೇ ಪ್ರಿಯಾಂಕಾ ಮತ್ತು ರಾಹುಲ್ ಗಾಂಧಿ ಸಿದ್ಧತೆಯನ್ನೂ ನಡೆಸಿದ್ದಾರೆ. ಇಲ್ಲಿ ಅಧಿಕಾರಕ್ಕೆ ಬರುವಷ್ಟು ಸ್ಥಾನ ಗೆಲ್ಲದಿದ್ದರೂ ಎರಡಂಕಿ ಸ್ಥಾನಗಳನ್ನಾದರೂ ಗೆದ್ದು, ಮತ್ತೆ ಕಾಂಗ್ರೆಸ್ ಅನ್ನು ಪುನಃಸ್ಥಾಪಿಸಬೇಕಿದೆ. ಹಾಗೆಯೇ ಪಂಜಾಬ್ ಕೂಡ ರಾಹುಲ್ ಗಾಂಧಿ ಪಾಲಿಗೆ ಪ್ರಮುಖವಾದ ರಾಜ್ಯ. ಇಲ್ಲಿ ಕಾಂಗ್ರೆಸೇ ಆಡಳಿತದಲ್ಲಿದ್ದು, ಮಾಜಿ ಸಿಎಂ ಕ್ಯಾಪ್ಟನ್ ಅಮರೀಂದರ್ ಸಿಂಗ್ ಪಕ್ಷ ಬಿಟ್ಟು ಹೋಗುವ ಬಗ್ಗೆ ಘೋಷಿಸಿದ್ದಾರೆ. ಹೊಸ ಸಿಎಂ, ಸಿಧು ಅಧ್ಯಕ್ಷತೆ ಹಾಗೂ ರಾಹುಲ್, ಪ್ರಿಯಾಂಕಾ ಅವರ ಶ್ರಮದ ಮೇರೆಗೆ ಚುನಾವಣೆಗೆ ಹೋಗಬೇಕು. ಹಾಗೆಯೇ ಇಲ್ಲೂ ಗೆಲ್ಲಬೇಕು. ಇದರ ಜತೆಗೆ, ಉತ್ತರಾಖಂಡದಲ್ಲಿ ಬಿಜೆಪಿ ಆಡಳಿತವಿದ್ದರೂ ಈಗಾಗಲೇ ಆರು ತಿಂಗಳಲ್ಲಿ ಮೂವರು ಸಿಎಂಗಳನ್ನು ಬದಲಾವಣೆ ಮಾಡಿದೆ. ಇಲ್ಲಿ ಆಡಳಿತ ವಿರೋಧಿ ಅಲೆಯನ್ನು ಬಳಸಿಕೊಂಡು ಅಧಿಕಾರಕ್ಕೆ ಬರುವ ಸಾಧ್ಯತೆಗಳೂ ಕಾಂಗ್ರೆಸ್ ಮುಂದಿವೆ. ಈ ಚುನಾವಣೆಗಳಲ್ಲಿ ಸೋನಿಯಾ ಜತೆಗೆ ರಾಹುಲ್ ಮತ್ತು ಪ್ರಿಯಾಂಕಾ ಅವರಿಗೂ ನಿರ್ಧಾರ ತೆಗೆದುಕೊಳ್ಳುವ ಅಧಿಕಾರ ಇದ್ದೇ ಇರುತ್ತದೆ. ಇಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿದರೆ, ಎಐಸಿಸಿ ಅಧ್ಯಕ್ಷ ಸ್ಥಾನ ಸಲೀಸಾಗಿಯೇ ರಾಹುಲ್ ಮಡಿಲಿಗೆ ಬೀಳುತ್ತದೆ. ಹಾಗೆಯೇ ಜಿ23 ಟೀಕಾಕಾರರೂ ಸುಮ್ಮನಾಗುತ್ತಾರೆ. ಇತ್ತೀಚಿನ ದಿನಗಳಲ್ಲಿ ರಾಹುಲ್ ಕೂಡ ಬದಲಾದಂತೆ ಕಾಣುತ್ತಿದ್ದಾರೆ. ಸಮಯ ಸಿಕ್ಕಾಗಲೆಲ್ಲ ಕೇಂದ್ರ ಸರಕಾರದ ವಿರುದ್ಧ ಮುಗಿಬೀಳುವ ಮೂಲಕ ಬಿಸಿ ಮುಟ್ಟಿಸುತ್ತಿದ್ದಾರೆ. ಆದರೆ ಚುನಾವಣ ಸಮರದಲ್ಲಿನ ಹಿಂದಿನ ವೈಫಲ್ಯಗಳು ರಾಹುಲ್ ಬೆನ್ನಿಗೇ ಇವೆ. ಇವೆಲ್ಲವನ್ನೂ ಮೀರಿದಾಗ ಮಾತ್ರ ರಾಹುಲ್ ಸಮರ್ಥವಾಗಿ ಎಐಸಿಸಿ ನಿರ್ವಹಣೆ ಮಾಡಲು ಸಾಧ್ಯವಾಗುತ್ತದೆ. ಅಲ್ಲದೆ ರಾಹುಲ್ ಅಧ್ಯಕ್ಷರಾದ ಮೇಲೆಯೂ ಸವಾಲುಗಳು ಬೆಟ್ಟದಷ್ಟಿವೆ. ಪ್ರತೀ ಬಾರಿಯೂ ಗೆದ್ದರೆ ನಾನೇ ಕಾರಣ ಎನ್ನುವ ನೂರು ಮಂದಿ, ಸೋತರೆ ನಾವ್ಯಾರೂ ಕಾರಣರಲ್ಲ, ಪಕ್ಷದ ಹೊಣೆ ಹೊತ್ತವರೇ ಕಾರಣ ಎಂಬ ಸ್ಥಿತಿ ಕಾಂಗ್ರೆಸ್‌ನಲ್ಲಿ ಇದೆ. ಹೀಗಾಗಿ 2024ರ ಲೋಕಸಭೆ ಚುನಾವಣೆಗೆ ರಾಹುಲ್ ಗಾಂಧಿ ಬಲಿಷ್ಠ ತಂಡವನ್ನೇ ಕಟ್ಟಬೇಕಿದೆ. ಈ ಹಿಂದೆ ಯುವಜನರ ತಂಡ ಕಟ್ಟಲು ಹೋಗಿ ಕೈಸುಟ್ಟುಕೊಂಡಿದ್ದರು. ಇದೇ ಜಗಳದಲ್ಲಿ ಮಧ್ಯ ಪ್ರದೇಶದಲ್ಲಿ ಪ್ರಭಾವಿ ಕಾಂಗ್ರೆಸ್ ನಾಯಕರಾಗಿದ್ದ ಜ್ಯೋತಿರಾದಿತ್ಯ ಸಿಂಧಿಯಾ ಪಕ್ಷ ಬಿಟ್ಟು ಬಿಜೆಪಿ ಸೇರಿದರು. ಜತೆಗೆ ಸಚಿನ್ ಪೈಲಟ್ ಕೂಡ ರಾಜಸ್ಥಾನದಲ್ಲಿ ಅಶೋಕ್ ಗೆಹ್ಲೋಟ್ ಜತೆಗೆ ಮುಸುಕಿನ ಗುದ್ದಾಟದಲ್ಲಿದ್ದಾರೆ. ಈ ಎಲ್ಲ ಸಮಸ್ಯೆಗಳನ್ನು ಹೋಗಲಾಡಿಸಿ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗುವ ಸವಾಲು ರಾಹುಲ್ ಮುಂದಿದೆ. ಆದರೆ ಕಾಂಗ್ರೆಸ್ ಸಂಸ್ಕೃತಿಯಲ್ಲಿ ರಾಹುಲ್ ಎಷ್ಟು ಪರಿಣಾಮಕಾರಿಯಾಗಿ ಹೊಸತನ ತರಬಲ್ಲರು ಎಂಬುದೇ ದೊಡ್ಡ ಪ್ರಶ್ನೆ.