Advertisement
ಲೋಕಸಭೆಯಲ್ಲಿ ಈ ವಿಚಾರ ಪ್ರಸ್ತಾವಿಸಿದ ಕಾಂಗ್ರೆಸ್ ನಾಯಕ ಅಧೀರ್ ರಂಜನ್ ಚೌಧರಿ, ಕರ್ನಾಟಕ ಮತ್ತು ಮಧ್ಯಪ್ರದೇಶದಲ್ಲಿ ಕಾಂಗ್ರೆಸ್ ನೇತೃತ್ವದ ಸರಕಾರವನ್ನು ಪತನಗೊಳಿಸಲು ಬಿಜೆಪಿ ನೇತೃತ್ವದ ಕೇಂದ್ರ ಸರಕಾರ ರಹಸ್ಯ ಸಂಚು ರೂಪಿಸಿದೆ. ನಮ್ಮ ಶಾಸಕರನ್ನು ಮುಂಬಯಿಯ ಹೊಟೇಲ್ಗೆ ಕರೆದೊಯ್ಯಲಾಗಿದೆ. ಶಾಸಕರು ರಾಜ್ಯಪಾಲರನ್ನು ಭೇಟಿಯಾದ ಮರುಕ್ಷಣವೇ ಅವರಿಗೆ ವಾಹನ, ವಿಮಾನ, ಹೊಟೇಲ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಆರೋಪಿಸಿದರು.
ಚೌಧರಿ ಆರೋಪಗಳಿಗೆ ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್, ಕರ್ನಾಟಕದ ಬೆಳವಣಿಗೆಗಳಿಗೂ ಬಿಜೆಪಿಗೂ ಸಂಬಂಧವಿಲ್ಲ. ನಾವು ಯಾವುದೇ ಶಾಸಕ ಅಥವಾ ಸಂಸದನಿಗೆ ಪಕ್ಷಾಂತರ ಮಾಡುವಂತೆ ಒತ್ತಡ ಹಾಕಿಲ್ಲ. ನಮ್ಮ ಸರಕಾರವು ಸಂಸತ್‌ನ ಪಾವಿತ್ರ್ಯವನ್ನು ರಕ್ಷಿಸುವಲ್ಲಿ ಬದ್ಧವಾಗಿದೆ ಎಂದರು. ಅಲ್ಲದೆ, ರಾಜೀನಾಮೆ ಪರ್ವಕ್ಕೆ ನಾಂದಿ ಹಾಡಿದ್ದೇ ರಾಹುಲ್ ಗಾಂಧಿ ಎಂದು ಹೇಳುವ ಮೂಲಕ ಲೇವಡಿ ಮಾಡಿದರು. ಇದರಿಂದ ಆಕ್ರೋಶಗೊಂಡ ಕಾಂಗ್ರೆಸ್ ಸದಸ್ಯರು ಪ್ರಜಾತಂತ್ರ ಉಳಿಸಿ ಎಂಬ ಫಲಕಗಳನ್ನು ಹಿಡಿದುಕೊಂಡು ಘೋಷಣೆ ಕೂಗತೊಡಗಿದರು. ಕರ್ನಾಟಕದಲ್ಲಿ ಏನು ನಡೆಯುತ್ತಿದೆಯೋ ಅದಕ್ಕೆ ಅದೇ ಪಕ್ಷಗಳ ಕೆಲವು ನಾಯಕರಲ್ಲಿನ ಮಹತ್ವಾಕಾಂಕ್ಷೆಗಳೇ ಕಾರಣ ಎಂಬುದು ಎಲ್ಲರಿಗೂ ಗೊತ್ತು. ನಾವು ಏನನ್ನೂ ಮಾಡುತ್ತಿಲ್ಲ. ಪರಿಸ್ಥಿತಿಯನ್ನು ಅವಲೋಕಿಸುತ್ತಿದ್ದೇವೆ ಅಷ್ಟೆ.
– ರಾಮ್‌ಮಾಧವ್ ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ