ಪಣಜಿ: ‘ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮತ್ತು ತೃಣಮೂಲ ಕಾಂಗ್ರೆಸ್ ಮುಖ್ಯಸ್ಥೆ ಮಮತಾ ಬ್ಯಾನರ್ಜಿ ಅವರು ‘ರಾಜಕೀಯ ಪ್ರವಾಸೋದ್ಯಮ’ದ ಭಾಗವಾಗಿ ಗೋವಾಕ್ಕೆ ಭೇಟಿ ನೀಡುತ್ತಿದ್ದಾರೆ ಎಂದು ಬಿಜೆಪಿ ಸಂಸದ, ಯುವ ಮೋರ್ಚಾ ರಾಷ್ಟ್ರೀಯ ಅಧ್ಯಕ್ಷ ತೇಜಸ್ವಿ ಸೂರ್ಯ ಶನಿವಾರ ಹೇಳಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ತೇಜಸ್ವಿ ಸೂರ್ಯ,”ಕೋವಿಡ್ ಸಾಂಕ್ರಾಮಿಕ ರೋಗದಿಂದಾಗಿ ಕಳೆದ ಒಂದೂವರೆ ವರ್ಷಗಳಿಂದ ಪ್ರವಾಸೋದ್ಯಮ ಕೇಂದ್ರವಾದ ಥೈಲ್ಯಾಂಡ್ ಅನ್ನು ಮುಚ್ಚಲಾಗಿರುವುದರಿಂದ ರಾಹುಲ್ ಗಾಂಧಿ ಗೋವಾಕ್ಕೆ ಭೇಟಿ ನೀಡುತ್ತಿದ್ದಾರೆ” ಎಂದು ಲೇವಡಿ ಮಾಡಿದರು.
‘ರಾಜ್ಯಕ್ಕೆ ಟಿಎಂಸಿ ಮತ್ತು ಆಮ್ ಆದ್ಮಿ ಪಕ್ಷ ಕಾಲಿಡುತ್ತಿದೆ ಆದರೆ ಜನರು ಆಡಳಿತಾರೂಢ ಬಿಜೆಪಿ ಏನೆಂದು ತಿಳಿದಿದ್ದಾರೆ’ ಎಂದರು.
‘ಜನರು 2012 ಮತ್ತು 2017ರಲ್ಲಿ ಎರಡು ಬಾರಿ ಬಿಜೆಪಿಯ ಮೇಲೆ ನಂಬಿಕೆ ಇಟ್ಟಿದ್ದಾರೆ. ಯಾವ ರಾಜಕೀಯ ಪ್ರವಾಸಿಗರೂ ಗೋವಾದಲ್ಲಿ ಬಿಜೆಪಿಯ ಜನಪ್ರಿಯತೆಯನ್ನು ಕುಗ್ಗಿಸಲು ಸಾಧ್ಯವಾಗುವುದಿಲ್ಲ. ನಮ್ಮ ಪಕ್ಷ ಮೂರನೇ ಅವಧಿಗೆ 2022 ರಲ್ಲಿ ಅಧಿಕಾರಕ್ಕೆ ಬರಲಿದೆ’ ಎಂದು ಸೂರ್ಯ ಹೇಳಿದರು.