ಕೋಲ್ಕತ : ಪಶ್ಚಿಮ ಬಂಗಾಲದಲ್ಲಿನ ಹಿಂಸೆಗೆ ತೃಣಮೂಲ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಕಟುವಾಗಿ ಟೀಕಿಸಿರುವುದಕ್ಕೆ ಪ್ರತಿಯಾಗಿ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರು ರಾಹುಲ್ “ಒಬ್ಬ ಸಣ್ಣ ಹುಡುಗ; ಆತನ ಮಾತಿಗೆ ಪ್ರತಿಕ್ರಿಯೆ ಅಗತ್ಯವಿಲ್ಲ” ಎಂದು ಲೇವಡಿ ಮಾಡಿದ್ದಾರೆ.
ರಾಹುಲ್ ಮತ್ತು ಮಮತಾ ಬಹಳ ಹಿಂದೆ ಒಂದೇ ವೇದಿಕೆಯನ್ನು ಹಂಚಿಕೊಂಡಿದ್ದರಾದರೂ ಉಭಯ ನಾಯಕರ ನಡುವಿನ ಸರಸ-ವಿರಸ 2019ರ ಲೋಕಸಭಾ ಚುನಾವಣೆಯತ್ತ ಸಾಗುವಲ್ಲಿ ಕಡಿಮೆಯೇನೂ ಆಗಿಲ್ಲ.
ಈ ವರ್ಷ ಜನವರಿಯಲ್ಲಿ ಸಂಸದೆ ಮೌಸಮ್ ಬೇನಜೀರ್ ನೂರ್ ಅವರು ಕಾಂಗ್ರೆಸ್ ತೊರೆದು ಟಿಎಂಸಿ ಸೇರಿದ್ದರು. ರಾಹುಲ್ ಗೆ ಇದು ತೀರ ಅಪಥ್ಯವೆನಿಸಿ ಆಕೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಎಸಗಿದ್ದಾರೆ ಎಂದು ಆರೋಪಿಸಿದ್ದರು.
ಕಳೆದ ವಾರ ಚುನಾವಣಾ ರಾಲಿಯಲ್ಲಿ ರಾಹುಲ್ ಅವರು ಉತ್ತರ ಮಾಲ್ಡಾದ ದ್ರೋಹಿ, ಮಾಜಿ ಕಾಂಗ್ರೆಸ್ ಸಂಸದೆಯನ್ನು ಜನರು ಶಿಕ್ಷಿಸಬೇಕು ಎಂದು ಕರೆ ನೀಡಿದ್ದರಲ್ಲದೆ, ಸಿಎಂ ಮಮತಾ ಬ್ಯಾನರ್ಜಿ ಅವರು ಪ್ರಧಾನಿ ನರೇಂದ್ರ ಮೋದಿಯ ಹಾಗೆ ಎಲ್ಲರ ಮೇಲೂ ದಬ್ಟಾಳಿಕೆ ನಡೆಸುವ ಒಬ್ಬ ಸರ್ವಾಧಿಕಾರಿ; ಇವರಿಬ್ಬರೂ ತಮ್ಮ ಸರಕಾರ ನಡೆಸುವ ವಿಷಯದಲ್ಲಿ ಯಾರ ಜತೆಯೂ ಸಮಾಲೋಚಿಸುವುದಿಲ್ಲ, ಸಲಹೆ ಅಭಿಪ್ರಾಯಗಳನ್ನೂ ಕೇಳುವುದಿಲ್ಲ ಎಂದು ಟೀಕಿಸಿದ್ದರು.
ನಿನ್ನೆ ಬುಧವಾರ ಮಮತಾ ಬ್ಯಾನರ್ಜಿ ಅವರು ರಾಹುಲ್ ಟೀಕೆಗೆ ಚುಟುಕಿನ ಪ್ರತಿಕ್ರಿಯೆ ನೀಡುತ್ತಾ, ಆತನೊಬ್ಬ ಸಣ್ಣ ಹುಡುಗ; ಆತ ಏನೋ ಹೇಳಿದ್ದಾನೆ; ಅದಕ್ಕೆ ನಾನು ಪ್ರತಿಕ್ರಿಯೆ ನೀಡ ಬಯಸುವುದಿಲ್ಲ’ ಎಂದು ಕಟಕಿಯಾಡಿದರು.