ಬದಿಯಡ್ಕ: ದೇಶಾದ್ಯಂತ ಅಲೆಯೆಬ್ಬಿಸುವ ಆಟಗಳಲ್ಲಿ ಕೇರಳದ ಸಂತೋಷ್ ಟ್ರೋಫಿ ಫುಟ್ಬಾಲ್ ಟೂರ್ನಮೆಂಟ್ ಕೂಡ ಒಂದು. ಕಾಲ್ಚೆಂಡಾಟದ ಮೇಲೆ ಯುವಜನರ ಆಸಕ್ತಿ ಹೆಚ್ಚಾಗುತ್ತಿದ್ದಂತೆ ಈ ಆಟದ ಖ್ಯಾತಿಯೂ ದೇಶ ವಿದೇಶಗಳಲ್ಲಿ ವಿಜೃಂಭಿಸುತ್ತಿರುವುದು ಕಂಡುಬರುತ್ತದೆ. ಈಗ ತಾನೇ ಕೊನೆಗೊಂಡ ಸಂತೋಷ್ ಟ್ರೋಫಿ ಮ್ಯಾಚನ್ನು ಗೆದ್ದ ಸಂಭ್ರಮ ಸಡಗರ ಕೇರಳ ತಂಡದ ಪಾಲಾಗಿದೆ. ಈ ತಂಡದಲ್ಲಿ ಗಡಿನಾಡಿನ ಆಟಗಾರನೂ ಸೇರಿರುವುದು ಮಾತ್ರವಲ್ಲದೆ ತಮ್ಮ ಅತ್ಯುತ್ತಮ ಆಟದ ಮೂಲಕ ಮಾದರಿಯಾಗಿರುವುದು ಹೆಮ್ಮೆ ಪಡುವಂತಹ ವಿಷಯ.
ಸಂತೋಷ್ ಟ್ರೋಫಿ ಪಡೆದ ವಿಜಯೋತ್ಸವದಲ್ಲಿ ಅಭಿಮಾನ ಪಡುವಂತಹ ನಿಮಿಷಗಳನ್ನು ನೀಡಿದ ತಂಡದ ಆಟಗಾರ ಚೆರ್ವತ್ತೂರಿನ ಕೆ.ಪಿ.ರಾಹುಲ್ ಅವರ ಸಾಧನೆ ಅಭಿನಂದನೀಯ.
ಸಂತೋಷ್ ಟ್ರೋಫಿ ಫುಟ್ಬಾಲ್‌ನ ಫೈನಲ್‌ನಲ್ಲಿ ಬಂಗಾಳವನ್ನು ಸೋಲಿಸಿ ಚಾಂಪಿಯನ್‌ಶಿಪ್ ಪಡೆಯುವಲ್ಲಿ ಕೆ.ಪಿ.ರಾಹುಲ್ ತೋರಿದ ಸಾಹಸ ಜಿಲ್ಲೆಗೆ ಮಾತ್ರವಲ್ಲ ರಾಜ್ಯಕ್ಕೆ ಹೆಮ್ಮೆಯ ವಿಷಯವಾಗಿದೆ.
ಕೇರಳ ತಂಡದ ಆಟಗಾರ ಕಾಸರಗೋಡು ಚೆರ್ವತ್ತೂರು ಪಿಲಿಕೋಕೋಡ್‌ನ ಕೆ.ಪಿ.ರಾಹುಲ್ ಈ ಬಾರಿಯ ಸಂತೋಷ್ ಟ್ರೋಫಿ ಗೆಲುವಿಗೆ ನಿರ್ಣಾಯಕ ಪಾತ್ರವಹಿಸಿದ ಕೇರಳದ ತಂಡದ ಸದಸ್ಯರಾಗಿದ್ದಾರೆ. ಬಾಡಿಗೆಮನೆಯಲ್ಲಿ ವಾಸವಾಗಿದ್ದು, ಬಡತನದ ಸೋಗಿನಲ್ಲೂ ತನ್ನ ಆಟದ ಬಗ್ಗೆ ಬಹಳಷ್ಟು ಕಾಳಜಿ ವಹಿಸಿರುವ ಈತ ಕೇರಳದ ಆರನೇ ಸಂತೋಷ್ ಟ್ರೋಫಿಯಲ್ಲಿ ಆಡಿದ್ದಾರೆ. ಈ ಮೂಲಕ ಪಿಲಿಕ್ಕೋಡಿನ ಹೆಮ್ಮೆಯ ಪುತ್ರನಾಗಿದ್ದಾರೆ. ಆರ್ಥಿಕವಾಗಿ ಹಿಂದುಳಿದ ಕುಟುಂಬದಿಂದ ಬಂದ ರಾಹುಲ್‌ಗೆ ತನ್ನ ನಾಲ್ಕನೇ ತರಗತಿ ತನಕ ಕಲಿತ ಸಹಪಾಠಿಗಳೇ ಪ್ರೋತ್ಸಾಹ ನೀಡಿದರು.
ಲಕ್ಕಿಸ್ಟಾರ್ ಕ್ಲಬ್ ಪಿಲಿಕ್ಕೋಡು ಮೂಲಕ ಫುಟ್ಬಾಲ್ ಆಟದಲ್ಲಿ ತೊಡಗಿಸಿಕೊಂಡಿದ್ದ ರಾಹುಲ್‌ಸುಬ್ರತೋ ಕಪ್‌ಗಾಗಿ ಬ್ರೆಸಿಲ್ಸ್‌ಗಾಗಿ ಆಟವಾಡಿದಲ್ಲದೆ, ಸ್ವೀಡನ್‌ನಲ್ಲಿ ನಡೆದ ಅಂಡರ್ 19 ಫುಟ್ಬಾಲ್ ಚಾಂಪಿಯನ್‌ಶಿಪ್‌ನಲ್ಲಿ ಡೆಲ್ಲಿ ಡಯಾನೋಮಿಕ್ಸ್‌ಗಾಗಿ ಆಡಿದ್ದರು. ಸಂತೋಷ್ ಟ್ರೋಫಿಯಲ್ಲಿ ಚಾಂಪಿಯನ್ ಆಗುವ ನಿರೀಕ್ಷೆಯನ್ನು ಇಟ್ಟುಕೊಂಡಿದ್ದರು.
ಸಂತೋಷ್ ಟ್ರೋಫಿ ಕೇರಳದಾಗಿಸಿದ ಬಳಿಕ ಅಪೂರ್ಣಗೊಂಡ ಮನೆಯನ್ನು ಪೂರ್ತಿಗೊಳಿಸುವ ಗುರಿಯನ್ನು ಇಟ್ಟುಕೊಂಡಿರುವ ರಾಹುಲ್ ಪಿಲಿಕ್ಕೋಡು ಕೆ.ಪಿ.ರಮೇಶನ್ ಹಾಗೂ ತಂಗಮಣಿ ದಂಪತಿಯ ಪುತ್ರ. ಸಹೋದರಿ ರಸ್ನಾ ಚಿಮೇನಿ ಹೈಯರ್ ಸೆಕೆಂಡರಿ ಶಾಲೆಯ ಪ್ಲಸ್‌ಟು ವಿದ್ಯಾರ್ಥಿನಿಯಾಗಿದ್ದಾಳೆ. ತಂದೆ ರಮೇಶನ್ ಮರದ ಕೆಲಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಶಾಲಾ ದಿನಗಳಲ್ಲಿ ಮುಂಜಾನೆ ಮನೆ ಮನೆಗೆ ಪತ್ರಿಕೆ ಹಾಕಿದ ಬಳಿಕ ಫುಟ್ಬಾಲ್ ತರಬೇತಿಗೆ ತೆರಳುತ್ತಿದ್ದ ರಾಹುಲ್ ಈಗ ಫುಟ್ಬಾಲ್ ಚಾಂಪಿಯನ್‌ಶಿಪ್ ಬಳಿಕ ಕೆಎಸ್‌ಇಬಿಯಲ್ಲಿ ಉದ್ಯೋಗ ಲಭಿಸುವ ನಿರೀಕ್ಷೆಯಲ್ಲಿದ್ದಾರೆ. ಬಹುಮಾನ ಮೊತ್ತದಿಂದ ಮೊಟಕುಗೊಂಡ ಮನೆಯನ್ನು ಪೂರ್ತಿಗೊಳಿಸುವ ಯೋಜನೆಯನ್ನು ಹಾಕಿಕೊಂಡಿದ್ದಾರೆ.
ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿ
ಪಿಲಿಕ್ಕೋಡು ಸರಕಾರಿ ಯುಪಿ ಶಾಲೆಯಲ್ಲಿರುವಾಗಲೇ ತರಬೇತಿಯನ್ನು ಪಡೆದು ಕೊಂಡು, ಕ್ರೀಡಾಧ್ಯಾಪಕರಾಗಿದ್ದ ದಿ. ಉದಿನೂರು ಟಿ.ವಿ. ಕೃಷ್ಣನ್ ಮಾರ್ಗದಶನ ಹಾಗೂ ಪ್ರೋತ್ಸಾಹದಲ್ಲಿ ತನ್ನ ಐದನೇ ತರಗತಿಯಲ್ಲಿಯೇ ಅಂಡರ್ 13 ವಿಭಾಗದಲ್ಲಿ ಜಿಲ್ಲಾ ತಂಡದಲ್ಲಿ ಆಟವಾಡಿದ್ದರು. ಮಲಪ್ಪುರ ಎಂಎಸ್‌ಪಿ ನ್ಪೋರ್ಟ್ಸ್ನ ಹಾಸ್ಟೆಲ್‌ನಲ್ಲಿದ್ದಾಗಲೂ ತನ್ನ ಅಪ್ರತಿಮ ಸಾಧನೆಯನ್ನು ಮೆರೆದಿದ್ದು , ಈಗ ಕೊಟ್ಟಯಂ ಬೆಸಿಲಿಯಾಸ್ ಕಾಲೇಜಿನ ದ್ವಿತೀಯ ವರ್ಷದ ಪದವಿ ವಿದ್ಯಾರ್ಥಿಯಾಗಿದ್ದಾರೆ.