Advertisement

ಮಹಿಳೆಯರ ಖಾತೆಗೆ “ನ್ಯಾಯ್‌’ಮೊತ್ತ ನೇರವಾಗಿ ಜಮೆ: ರಾಹುಲ್‌ ಆಶ್ವಾಸನೆ

09:48 AM Apr 05, 2019 | Team Udayavani |

ತೆಲಂಗಾಣದಲ್ಲಿ ಸೋಮವಾರ ರ್ಯಾಲಿ ನಡೆಸಿದ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ, “ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ಜಾರಿ ಮಾಡಲಾಗುವ ನ್ಯಾಯ್‌ ಯೋಜನೆಯಲ್ಲಿ ವಾರ್ಷಿಕ 72 ಸಾವಿರ ರೂ.ಗಳನ್ನು ಬಡ ಕುಟುಂಬಗಳ ಮಹಿಳೆಯರ ಖಾತೆಗೆ ನೇರವಾಗಿ ಜಮೆ ಮಾಡಲಾಗುವುದು’ ಎಂದು ಘೋಷಿಸಿದ್ದಾರೆ. ಅಲ್ಲದೆ, ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯ ವಿಧಾನಸಭೆಗಳಲ್ಲಿ ಮಹಿಳೆಯರಿಗೆ ಶೇ.33 ಮೀಸಲಾತಿ ಕಲ್ಪಿಸಲಾಗುವುದು. ಕೇಂದ್ರ ಸರ್ಕಾರಿ ಉದ್ಯೋಗದಲ್ಲೂ ಶೇ.33 ಅನ್ನು ಮಹಿಳೆಯರಿಗೆಂದೇ ಮೀಸಲಿಡಲಾಗುವುದು ಎಂದೂ ರಾಹುಲ್‌ ಹೇಳಿದ್ದಾರೆ. ಇದೇ ವೇಳೆ, ದೇಶದ ಜಿಡಿಪಿಯಲ್ಲಿ ಶೇ.6ರಷ್ಟನ್ನು ಶಿಕ್ಷಣ, ಹೊಸ ಕಾಲೇಜು, ವಿವಿಗಳ ನಿರ್ಮಾಣ ಹಾಗೂ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್‌ ನೀಡಲು ಬಳಸಲಾಗುವುದು ಎಂದೂ ಅವರು ಆಶ್ವಾಸನೆ ನೀಡಿದ್ದಾರೆ. ತೆಲಂಗಾಣದಲ್ಲಿ ಟಿಆರ್‌ಎಸ್‌ ಮತ್ತು ಬಿಜೆಪಿ ಪಾಲುದಾರ ಪಕ್ಷಗಳು. ನೀವು ಟಿಆರ್‌ಎಸ್‌ಗೆ ಮತ ಹಾಕಿದರೆ ನರೇಂದ್ರ ಮೋದಿ ಮತ್ತು ಆರೆಸ್ಸೆಸ್‌ಗೆ ಮತ ಹಾಕಿದಂತೆ ಎಂದೂ ಹೇಳಿದ್ದಾರೆ.

Advertisement

ದೇಶದ ಹಿತಾಸಕ್ತಿಯಿಂದ ಬಿಜೆಪಿಯನ್ನು ಸೋಲಿಸುವ ವಿಚಾರದಲ್ಲಿ ಪ್ರತಿಪಕ್ಷಗಳೆಲ್ಲ ಒಗ್ಗಟ್ಟಾಗಿವೆ. ಲೋಕಸಭೆ ಚುನಾವಣೆಯ ಬಳಿಕ ಚುನಾವಣೋತ್ತರ ಮೈತ್ರಿ ಖಂಡಿತಾ ಸಾಧ್ಯ. ಬಿಜೆಪಿಯನ್ನು ಸೋಲಿಸುವ ಮೂಲಕ ಪ್ರಜಾಪ್ರಭುತ್ವ ಮತ್ತು ಸಂವಿಧಾನವನ್ನು ರಕ್ಷಿಸುವುದೇ ನಮ್ಮ ಉದ್ದೇಶ.
ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧ್ಯಕ್ಷ

ಮೂರ್ಖರ ದಿನ: ಟ್ವಿಟರಲ್ಲಿ ಪರಸ್ಪರ ಕಾಲೆಳೆದುಕೊಂಡ ಬಿಜೆಪಿ, ಕಾಂಗ್ರೆಸ್‌
ಚುನಾವಣೆಯಲ್ಲಿ ಪರಸ್ಪರ ಕಾಲೆಳೆ ಯುವುದರಲ್ಲಿ ನಿರತವಾಗಿರುವ ಬಿಜೆಪಿ, ಕಾಂಗ್ರೆಸ್‌, ಈ ಬಾರಿಯ ಏಪ್ರಿಲ್‌ ಫ‌ೂಲ್‌ ದಿನವನ್ನು (ಎ. 1) ಸಾಮಾಜಿಕ ಜಾಲತಾಣಗಳಲ್ಲಿ ಪ್ರಧಾನಿ ಮೋದಿ ಮತ್ತು ರಾಹುಲ್‌ ಗಾಂಧಿಯವರನ್ನು ಪರಸ್ಪರ ಅಪಹಾಸ್ಯ ಮಾಡಿದವು.

ಇಂಥ ಕುಚೋದ್ಯಕ್ಕೆ ಮೊದಲು ಕೈ ಹಾಕಿದ್ದು ಕಾಂಗ್ರೆಸ್‌. ಬಿಜೆಪಿಯ ಚುನಾವಣಾ ಪ್ರಣಾಳಿಕೆಯ ಅಂಶಗಳನ್ನು ತಮಾಷೆಯಾಗಿಸಿ ಟ್ವಿಟರ್‌ನಲ್ಲಿ ಬಿಡುಗಡೆ ಮಾಡಿತು. ಇಲ್ಲಿ ಬಳಸಲಾಗಿದ್ದ ಮೋದಿ ಮುಂತಾದ ಬಿಜೆಪಿ ನಾಯಕರ ಭಾವಚಿತ್ರಗಳ ಜತೆಗೆ, ತಲೆಕೆಳಗಾದ ಕಮಲದ ಚಿಹ್ನೆಯನ್ನು ಬಳಸಲಾಗಿತ್ತು. ಮೋದಿಯವರ ಏಕ್‌ ಭಾರತ್‌, ಶ್ರೇಷ್ಠ ಭಾರತ್‌ ಎಂಬ ಉಕ್ತಿಯನ್ನು ಏಕ್‌ ಭಾರತ್‌, ಬೇರೋಜಗಾರ್‌ ಭಾರತ್‌ (ಒಂದು ಭಾರತ, ನಿರುದ್ಯೋಗದ ಭಾರತ) ಎಂಬುದು ಸೇರಿದಂತೆ ಅನೇಕ ರೀತಿಯಲ್ಲಿ ಅಪಹಾಸ್ಯ ಮಾಡಲಾಯಿತು.

ಅತ್ತ, ಬಿಜೆಪಿ ಸಹ ಕಾಂಗ್ರೆಸ್‌ಗೆ ಸೆಡ್ಡು ಹೊಡೆದು, ರಾಹುಲ್‌ ಗಾಂಧಿಯವರನ್ನು ಪಪ್ಪು ಎಂದು ಜರಿಯಿತು. ಹೆಸರಾಂತ “ಪಾರ್ಲೆ-ಜಿ’ ಬಿಸ್ಕೇಟ್‌ ಪೊಟ್ಟಣದ ಪೋಸ್ಟರ್‌ ತಯಾರಿಸಿ “ಪಾರ್ಲೆ - ಜಿ’ ಪೊಟ್ಟಣದ ಮೇಲೆ ಸಾಮಾನ್ಯವಾಗಿ ಇರುವ ಮಗುವಿನ ಚಿತ್ರದ ಮುಖಕ್ಕೆ ರಾಹುಲ್‌ ಗಾಂಧಿ ಮುಖವನ್ನು ಅಂಟಿಸಿ, ಬಿಸ್ಕೇಟ್‌ ಪೊಟ್ಟಣವನ್ನು “ಪಪ್ಪು – ಜಿ’ ಎಂದು ಕರೆಯಿತು. ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಅಮುಲ್‌ ಬೆಣ್ಣೆಯ ಪ್ಯಾಕೆಟ್ಟಿನ ಚಿತ್ರದಲ್ಲಿದ್ದ ಅಮುಲ್‌ ಬೇಬಿಯ ಬದಲಿಗೆ ರಾಹುಲ್‌ ಅವರ ಫೋಟೋ ಬಳಸಿತು. ಜತೆಗೆ, “ಪಪ್ಪು ದಿವಸ್‌’ ಎಂಬ ಹ್ಯಾಷ್‌ಟ್ಯಾಗ್‌ ಕೂಡ ಟ್ರೆಂಡಿಂಗ್‌ ಆಯಿತು.

Advertisement

ವಯನಾಡ್‌ನ‌ಲ್ಲಿ “ದೇಶಾಭಿಮಾನಿ’ ವಿವಾದ
ಕೇರಳದ ವಯನಾಡ್‌ನಿಂದ ರಾಹುಲ್‌ ಗಾಂಧಿ ಸ್ಪರ್ಧಿಸುತ್ತಾರೆ ಎಂದು ಘೋಷಣೆಯಾದೊಡನೆ ಎಡಪಕ್ಷಗಳು ಕೆಂಡಾಮಂಡಲವಾಗಿದ್ದು ಗೊತ್ತೇ ಇದೆ. ಈ ಆಕ್ರೋಶದ ಭರದಲ್ಲಿ ರಾಹುಲ್‌ರನ್ನು “ಪಪ್ಪು’ ಎಂದು ಸಂಬೋಧಿಸುವ ಮೂಲಕ ಸಿಪಿಎಂ ಮುಖವಾಣಿಯಾದ “ದೇಶಾಭಿಮಾನಿ’ ವಿವಾದದ ಕಿಡಿ ಹೊತ್ತಿಸಿದೆ. ಅಮೇಠಿಯಲ್ಲಿ ಸೋಲುವ ಭಯದಿಂದ ರಾಹುಲ್‌ ವಯನಾಡ್‌ನಿಂದ ಸ್ಪರ್ಧಿಸುತ್ತಿದ್ದಾರೆ ಎಂದು ಸಂಪಾದಕೀಯ ಬರೆಯಲಾಗಿದ್ದು, ಅದರ ಶೀರ್ಷಿಕೆಯಲ್ಲೇ ರಾಹುಲ್‌ರನ್ನು “ಪಪ್ಪು’ ಎಂದು ಬರೆಯಲಾಗಿದೆ. ಈ ಬಗ್ಗೆ ಕಾಂಗ್ರೆಸ್‌ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದು, ಸಿಪಿಎಂ ವಿರುದ್ಧ ಕೈ ನಾಯಕರು ಕಿಡಿಕಾರಿದ್ದಾರೆ. ವಿವಾದ ಉಂಟಾದ ಬಳಿಕ ಸ್ಪಷ್ಟನೆ ನೀಡಿರುವ ಸಿಪಿಎಂ, “ಉದ್ದೇಶಪೂರ್ವಕವಲ್ಲದೇ ಆಗಿರುವ ಪ್ರಮಾದ’ ಎಂದು ಹೇಳಿ ಕೈತೊಳೆದುಕೊಂಡಿದೆ.

ಬಿರುಸಿನ ಚಟುವಟಿಕೆ: ಇನ್ನೊಂದೆಡೆ, ರಾಹುಲ್‌ ಸ್ಪರ್ಧೆ ಘೋಷಣೆ ಬೆನ್ನಲ್ಲೇ ವಯನಾಡ್‌ನ‌ಲ್ಲಿ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. ಸಿಪಿಎಂ ಅಂತೂ ಪ್ರಚಾರ ತೀವ್ರಗೊಳಿಸಿದ್ದು, ರಾಹುಲ್‌ರನ್ನು ಸೋಲಿಸಲು ಪಣತೊಟ್ಟಿದೆ. ಪಕ್ಷದ ಪ್ರಮುಖ ನಾಯಕರಾದ ಪ್ರಕಾಶ್‌ ಕಾರಟ್‌ ಹಾಗೂ ರಾಜಾ ಎ.3ರಂದು ರಾಜ್ಯಕ್ಕೆ ಬಂದು ಸರಣಿ ಸಭೆ ನಡೆಸಲಿದ್ದಾರೆ. ಇದೇ ವೇಳೆ, ಬಿಜೆಪಿ ಮಿತ್ರಪಕ್ಷ ಭಾರತ್‌ ಧರ್ಮ ಜನ ಸೇನಾ ಮುಖ್ಯಸ್ಥ ತುಷಾರ್‌ ವೆಲ್ಲಪಳ್ಳಿ ಅವರು ಇಲ್ಲಿ ರಾಹುಲ್‌ ವಿರುದ್ಧ ಸ್ಪರ್ಧಿಸಲಿದ್ದಾರೆ ಎಂದು ಬಿಜೆಪಿ ಅಧ್ಯಕ್ಷ ಅಮಿತ್‌ ಶಾ ಘೋಷಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next