Advertisement

ಕೈ ಭಿನ್ನ ಮತಕ್ಕೆ ರಾಹುಲ್‌ ಬ್ರೇಕ್‌ ಹಾಕ್ತಾರ?

11:23 AM Apr 11, 2019 | keerthan |

ಕೋಲಾರ: ಜಿಲ್ಲಾ ಕಾಂಗ್ರೆಸ್‌ನಲ್ಲಿ ಭುಗಿಲ್ಲೆದ್ದಿರುವ ಭಿನ್ನಮತಕ್ಕೆ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಬ್ರೇಕ್‌ ಹಾಕುವರೇ, ಇಂತದ್ದೊಂದು ನಿರೀಕ್ಷೆ ಕಾಂಗ್ರೆಸ್‌ ಅಭ್ಯರ್ಥಿ ಕೆ.ಎಚ್‌.ಮುನಿಯಪ್ಪ ಇಟ್ಟುಕೊಂಡಿದ್ದಾರೆ.

Advertisement

ಈ ಬಾರಿಯ ಲೋಕಸಭಾ ಚುನಾವಣೆ ಕೆ.ಎಚ್‌. ಮುನಿಯಪ್ಪ ಹಾಗೂ ವಿರೋಧಿಗಳ ನಡುವೆ ನಡೆಯುತ್ತಿದೆ. ಪಕ್ಷಾತೀತವಾಗಿ ಕೆಎಚ್‌ಎಂ ವಿರೋಧಿಗಳು ಒಗ್ಗೂಡಿದ್ದು, ಈ ಬಾರಿಬದಲಾವಣೆ ಖಚಿತ ಎನ್ನುತ್ತಿದ್ದಾರೆ.
ಅದರಲ್ಲೂ, ಕಾಂಗ್ರೆಸ್‌ ಪಕ್ಷದ ಶಾಸಕ, ಮುಖಂಡರೇ ಮುನಿಯಪ್ಪ ವಿರುದ್ಧ ತಿರುಗಿ ಬಿದ್ದಿದ್ದು, ಶತಾಯಗತಾಯ ಸೋಲಿಸಲೇ ಬೇಕೆಂದು ಪಣ ತೊಟ್ಟಿದ್ದಾರೆ. ಈ ಎಲ್ಲಾ ಭಿನ್ನಮತವೂ ತಮಗೆ ಟಿಕೆಟ್‌ ಘೋಷಣೆಯಾದ ನಂತರ ಶಮನವಾಗಲಿದೆ ಎಂದು ಕೆ. ಎಚ್‌.ಮುನಿಯಪ್ಪ ಭಾವಿಸಿದ್ದು, ಹುಸಿಯಾಗತೊಡಗಿದೆ.

ಪ್ರಮುಖರೇ ಗೈರು: ನಾಮಪತ್ರ ಸಲ್ಲಿಕೆ ವೇಳೆಯಲ್ಲಿಯೂ ಕಾಂಗ್ರೆಸ್‌ ಶಾಸಕರಾದ ವಿ.ಮುನಿಯಪ್ಪ, ಎಸ್‌.ಎನ್‌.ನಾರಾಯಣಸ್ವಾಮಿ, ಸ್ಪೀಕರ್‌ ರಮೇಶ್‌ ಕುಮಾರ್‌ ಮತ್ತವರ ಬೆಂಬಲಿಗರು, ಕಾಂಗ್ರೆಸ್‌ ಬೆಂಬಲಿತ ಶಾಸಕ ಎಚ್‌.ನಾಗೇಶ್‌, ಕೋಲಾರದ ಜೆಡಿಎಸ್‌ ಶಾಸಕ ಕೆ.ಶ್ರೀನಿವಾಸಗೌಡ, ವಿಧಾನ ಪರಿಷತ್‌ ಸದಸ್ಯ ನಜೀರ್‌ ಅಹಮದ್‌ ಇತರರು ಗೈರಾಗುವ ಮೂಲಕ ತಮ್ಮ ವಿರೋಧ ಖಚಿತಪಡಿಸಿದ್ದರು.

ಕೆಎಚ್‌ಎಂ ವಿರುದ್ಧ ಘೋಷಣೆ: ಇದಾದ ನಂತರ ತಾಲೂಕು ಮಟ್ಟದಲ್ಲಿ ಕಾಂಗ್ರೆಸ್‌ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಗಳಿಗೂ ಈ ಶಾಸಕರು ಭಾಗವಹಿಸಿರಲಿಲ್ಲ. ಪೂರ್ವಭಾವಿ ಸಭೆಗಳಲ್ಲಿ ಕೆ.ಎಚ್‌.ಮುನಿಯಪ್ಪ ಬೆಂಬಲಿತ ಮುಖಂಡರ ಮೇಲೆ ಕೈ ಮಾಡುವಂತಹ ಘಟನೆ ಶ್ರೀನಿವಾಸಪುರದಲ್ಲಿ ನಡೆಯಿತು. ಕೋಲಾರ, ಮುಳಬಾಗಿಲು ಸಭೆಗಳಲ್ಲಿಯೂ ಕೆ.ಎಚ್‌.ಮುನಿಯಪ್ಪ ವಿರುದ್ಧ ಘೋಷಣೆಗಳು ಮೊಳಗಿದವು. ಕಾಂಗ್ರೆಸ್‌
ಸಭೆಗಳಲ್ಲಿ ಕಾರ್ಯಕರ್ತರು, ಮುಖಂಡರು ಯಾವುದೇ ಮುಜುಗರವಿಲ್ಲದೆ ಮೋದಿ ಘೋಷಣೆಗಳನ್ನುಕೂಗಿದರು.

ಭಿನ್ನಮತ ಶಮನವಾಗುತ್ತಿಲ್ಲ: ಕಾಂಗ್ರೆಸ್ಸಿಗರ ಭಿನ್ನಮತ ಕೈ ಮೀರಿ ಹೋಗುತ್ತಿರುವುದನ್ನು ಅರಿತ ಕೆ.ಎಚ್‌.ಮುನಿಯಪ್ಪ ಇದನ್ನು ಶಮನಗೊಳಿಸಲು ಕೆಪಿಸಿಸಿ ಅಧ್ಯಕ್ಷರಿಂದ ಹಲವು ಮುಖಂಡರಿಗೆ ದೂರವಾಣಿ ಕರೆ ಮಾಡಿಸಿದರು. ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ ಕೂಡ ಇದೇ ಪ್ರಯತ್ನ ಮಾಡಿದರು. ಕೆಲವರಿಗೆ ರಾಜ್ಯ ಕಾಂಗ್ರೆಸ್‌ ಉಸ್ತುವಾರಿ ವೇಣುಗೋಪಾಲ್‌ರಿಂದಲೂ ಕರೆ ಬಂದಿತ್ತು. ಬುಧವಾರ ಡಿ.ಕೆ. ಶಿವಕುಮಾರ್‌ ಇದೇ ಪ್ರಯತ್ನ ನಡೆಸಿ ಹೋದರು. ಆದರೂ, ಭಿನ್ನಮತ ಶಮನವಾಗುವ ವಾತಾವರಣ ಗೋಚರಿಸುತ್ತಲೇ ಇಲ್ಲ.

Advertisement

ಬಂಗಾರಪೇಟೆ ಶಾಸಕ ಎಸ್‌.ಎನ್‌.ನಾರಾಯಣ ಸ್ವಾಮಿಯೊಂದಿಗಿನ ವೈಮನಸ್ಯವನ್ನು ಮಾತುಕತೆಯ ಮೂಲಕ ಬಗೆಹರಿಸಿ ಕೊಂಡಿರುವುದಷ್ಟೇ ಸದ್ಯಕ್ಕೆ ಕೆ. ಎಚ್‌ .ಮುನಿಯಪ್ಪರಿಗೆ ದಕ್ಕಿರುವ ಸಮಾಧಾನವಾಗಿದೆ. ಆದರೂ, ಬಂಗಾರಪೇಟೆಯ ಕಾಂಗ್ರೆಸ್‌ ಕಾರ್ಯಕರ್ತರ ಮಟ್ಟದ ಕೆ.ಎಚ್‌.ಮುನಿಯಪ್ಪ ವಿರೋಧಿ ಭಾವನೆ ಕಡಿಮೆಯಾಗುತ್ತಿಲ್ಲ. ಬುಧವಾರ ಸಭೆಯನ್ನು ಆಯೋಜಿ ಸಿದ್ದ ಶಾಸಕ ಎಸ್‌.ಎನ್‌.ನಾರಾಯಣಸ್ವಾಮಿ, ಕೋಲಾರದಲ್ಲಿ ನಡೆಯುವ ರಾಹುಲ್‌ ಗಾಂಧಿ ಕಾರ್ಯಕ್ರಮಕ್ಕೆ ಪ್ರತಿ ಹಳ್ಳಿಯಿಂದ ಕನಿಷ್ಠ ಒಂದು ವಾಹನದಲ್ಲಾದರೂ ಕಾರ್ಯಕರ್ತರು ಕಡ್ಡಾಯವಾಗಿ ಆಗಮಿಸಬೇಕು ಎಂದು ಸಲಹೆ ನೀಡಿರುವುದು ಕೆ.ಎಚ್‌. ಮುನಿಯಪ್ಪರಿಗೆ ರಿಲೀಫ್ ನೀಡುವಂತಾಗಿದೆ. ಉಳಿದಂತೆ ಮುನಿಸಿಕೊಂಡಿರುವ ಶಾಸಕರ ಯಾವ ವಿಧಾನಸಭಾ ಕ್ಷೇತ್ರದಿಂದಲೂ ಇಂತ ಪ್ರತಿಕ್ರಿಯೆ ನಿರೀಕ್ಷಿಸಲು ಸಾಧ್ಯವಾಗುತ್ತಿಲ್ಲ.

ಕಾಂಗ್ರೆಸ್‌ ರಾಜ್ಯ ಹಿರಿಯ ಮುಖಂಡರ ದೂರವಾಣಿ ಕರೆಗೂ ಜಗ್ಗದ ಮುಳಬಾಗಿಲು ಮಾಜಿ ಶಾಸಕ ಕೊತ್ತೂರು ಮಂಜುನಾಥ್‌ ನೇರ ಬಿಜೆಪಿ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಕಾಂಗ್ರೆಸ್‌ ನಾಯಕತ್ವಕ್ಕೆ ಸವಾಲು ಎಸೆದಿದ್ದಾದರೆ. ಕೆ.ಎಚ್‌.ಮುನಿಯಪ್ಪ ಪರ ಕೆಲಸ ಮಾಡು ಎಂದು ಕುರುಡುಮಲೆ ಗಣಪತಿ, ಮುಳಬಾಗಿಲು ಆಂಜನೇಯಸ್ವಾಮಿ ಬಂದು ಹೇಳಿದರೂ ಕೇಳುವುದಿಲ್ಲ ಎಂದುಘೋಷಿಸಿದ್ದಾರೆ. ಕೆ. ಎಚ್‌. ಮುನಿಯಪ್ಪರನ್ನು ಬೆಂಬಲಿಸುವವರು ತಮ್ಮ ಬೆಂಬಲಿಗರಾಗಬೇಕಾಗಿಲ್ಲ, ಅಂತವರು ತಮ್ಮಿಂದ ದೂರ ಹೋಗುವುದು ಉತ್ತಮ ಎಂದು ಬಹಿರಂಗ ಸಭೆಯಲ್ಲಿ ಪ್ರಕಟಿಸಿಬಿಟ್ಟಿದ್ದಾರೆ. ಜೊತೆಗೆ ಕೋಲಾರ, ಮುಳಬಾಗಿಲು,ಕೆಜಿಎಫ್ ಕ್ಷೇತ್ರಗಳಲ್ಲಿ ಕೆ.ಎಚ್‌.ಮುನಿ ಯಪ್ಪ ವಿರುದ್ಧವಾಗಿ ಬಿಜೆಪಿ ಪರ ಕೆಲಸ ಮಾಡುವಜವಾಬ್ದಾರಿಯನ್ನು ತಾವೇ ತೆಗೆದುಕೊಂಡು ಕಾರ್ಯೋನ್ಮುಖರಾಗಿದ್ದಾರೆ. ಇವೆಲ್ಲಾ ಘಟನಾವಳಿಗಳು ಕಾಂಗ್ರೆಸ್‌ ಅಭ್ಯರ್ಥಿ
ಕೆ.ಎಚ್‌.ಮುನಿಯಪ್ಪರನ್ನು ಚಿಂತಾಕ್ರಾಂತರನ್ನಾಗಿಸಿದೆ.ಇದರಿಂದ ಕಾಂಗ್ರೆಸ್‌ ಪಕ್ಷದ ಪ್ರಚಾರವು ಕ್ಷೇತ್ರದಲ್ಲಿ ಇನ್ನು ಟೇಕಾಫ್ ಆಗಿರುವ ಭಾವನೆ ಹುಟ್ಟಿಸುತ್ತಿಲ್ಲ. ತಮ್ಮದೇಪಕ್ಷದ ಶಾಸಕರು, ಮುಖಂಡರನ್ನು ಸರಿ ಮಾಡಿಕೊಳ್ಳುವ ಎಲ್ಲಾ ಪ್ರಯತ್ನಗಳು ವಿಫ‌ಲವಾಗಿವೆ. ಆದ್ದರಿಂದ ಸದ್ಯಕ್ಕೆ
ಜೆಡಿಎಸ್‌ ಮುಖಂಡರನ್ನು ಅವಲಂಬಿಸಿ ಪ್ರಚಾರಕ್ಕೆ ಸಿದ್ಧತೆ ನಡೆಸುತ್ತಿದ್ದಾರೆ.

ರಾಹುಲ್‌ ಭೇಟಿಯೇ ದಾರಿ: ತಮ್ಮ ವಿರುದ್ಧ ಭಿನ್ನಮತದ ಹಾದಿ ತುಳಿದಿರುವ ಕ್ಷೇತ್ರದ ಕಾಂಗ್ರೆಸ್‌ಶಾಸಕರು, ಮುಖಂಡರು ರಾಹುಲ್‌ ಗಾಂಧಿ ಪ್ರಚಾರ ಸಭೆಗೆ ಆಗಮಿಸಲೇಬೇಕು. ಆಗ, ಕಾಂಗ್ರೆಸ್ಸಿಗರೆಲ್ಲರೂ ಒಗ್ಗೂಡಿದ್ದಾರೆ ಎಂಬ ಭಾವನೆ ಮತದಾರರಲ್ಲಿ ಹುಟ್ಟಿಸಲು ಸಾಧ್ಯವಿದೆ. ಸಾಧ್ಯವಾದರೆ, ರಾಹುಲ್‌ ಗಾಂಧಿಯವರ ಕೋಲಾರ ಭೇಟಿ ಸಂದರ್ಭದಲ್ಲಿ ಬಿನ್ನಮತೀಯರಿಗೆ ಬುದ್ಧಿವಾದ ಹೇಳಿಸಬೇಕೆಂಬ ಆಲೋಚನೆಯೂ ಕೆ.ಎಚ್‌.ಮುನಿಯಪ್ಪರಿಗಿದೆ.
ಆದ್ದರಿಂದಲೇ ಏ.13 ರಂದು ಕೋಲಾರದ ವಿಶ್ವೇಶ್ವರಯ್ಯ ಕ್ರೀಡಾಂಗಣಕ್ಕೆ ಆಗಮಿಸುತ್ತಿರುವ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಕಾರ್ಯಕ್ರಮ ಕುರಿತುಕಾಂಗ್ರೆಸ್ಸಿಗರಲ್ಲಿಯೇ ಕುತೂಹಲ ಹೆಚ್ಚುವಂತೆ ಮಾಡಿದೆ. ರಾಹುಲ್‌ ಗಾಂಧಿ ಕಾರ್ಯಕ್ರಮದ ಮೂಲಕವಾದರೂ, ಕೋಲಾರ ಕ್ಷೇತ್ರದ ಕಾಂಗ್ರೆಸ್ಸಿಗರು ಕೆ.ಎಚ್‌.ಮುನಿಯಪ್ಪ ವಿರೋಧಿ ಭಾವನೆಯಿಂದ ಹೊರ ಬರುತ್ತಾರೆಯೇ ಎನ್ನುವುದು ಸಾರ್ವಜನಿಕರ ಚರ್ಚೆಗೂ ಕಾರಣವಾಗಿದೆ

Advertisement

Udayavani is now on Telegram. Click here to join our channel and stay updated with the latest news.

Next