ದೇವದುರ್ಗ: ಫೆ.10ರಿಂದ 12ರವರೆಗೆ ರಾಜ್ಯ ಪ್ರವಾಸ ಕೈಗೊಳ್ಳಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಫೆ.12ರಂದು ದೇವದುರ್ಗದಲ್ಲಿ ಬಹಿರಂಗ ಸಭೆಯಲ್ಲಿ ಭಾಗವಹಿಸಿ ಮಾತನಾಡಲಿದ್ದಾರೆ ಎಂದು ಎಐಸಿಸಿ ಕಾರ್ಯದರ್ಶಿ ಹಾಗೂ ಉಸ್ತುವಾರಿ ಶೈಲಜನಾಥ ಶಾಖೆ ಮತ್ತು ಕೆಪಿಸಿಸಿ ಕಾರ್ಯದರ್ಶಿ ಜಿ.ಸಿ.ಚಂದ್ರಶೇಖರ ತಿಳಿಸಿದರು.
ರಾಹುಲ್ ಗಾಂಧಿ ಭೇಟಿ ಹಿನ್ನೆಲೆಯಲ್ಲಿ ಬಹಿರಂಗ ಸಭೆಗಾಗಿ ಪಟ್ಟಣದ ಬಸವ ಕಾಲೇಜು ಮೈದಾನದಲ್ಲಿ ಸ್ಥಳ ಪರಿಶೀಲಿಸಿ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು. ಫೆ.11ರಂದು ಹೊಸಪೇಟೆಯಲ್ಲಿ ತಂಗಲಿರುವ ರಾಹುಲ್ ಗಾಂಧಿ, ಫೆ.12ರಂದು ಕೊಪ್ಪಳ, ಸಿಂಧನೂರು, ಮಾನ್ವಿ ಮತ್ತು ರಾಯಚೂರು ನಗರಗಳಲ್ಲಿ ರೋಡ್ ಶೋ ನಡೆಸುವರು. ಬಳಿಕ ರಾಯಚೂರಿನಿಂದ ಬಸ್‌ನಲ್ಲಿ ದೇವದುರ್ಗಕ್ಕೆ ಆಗಮಿಸುವರು. ಜೇವರ್ಗಿಯಲ್ಲಿ ಬಹಿರಂಗ ಸಭೆ ಹಾಗೂ ಕಲಬುರಗಿಯಲ್ಲಿ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ವಿವರಿಸಿದರು.
ರಾಹುಲ್ ಗಾಂಧಿ ಯುವಕರೊಂದಿಗೆ ಚರ್ಚೆ ನಡೆಸುವರು. ರೈತರ ಸಮಸ್ಯೆ ಆಲಿಸುವರು. ಜೊತೆಗೆ ಹೈಕ ವ್ಯಾಪ್ತಿಯಲ್ಲಿ ಜಾರಿಗೊಂಡಿರುವ 371(ಜೆ) ಕಲಂ ತಿದ್ದುಪಡಿಯ ಸೌಲಭ್ಯಗಳ ಜಾರಿ ಹಾಗೂ ಅನುಷ್ಠಾನ ಕುರಿತು ಚರ್ಚಿಸಲಿದ್ದಾರೆ ಎಂದು ಹೇಳಿದರು.
371(ಜೆ) ಜಾರಿಯಿಂದ ಹೈದರಾಬಾದ್ ಕರ್ನಾಟಕ ಭಾಗದ ಯುವಕರಿಗೆ ಅನೇಕ ಅವಕಾಶಗಳು ದೊರಕಿವೆ. ಹಿಂದುಳಿದ ಪ್ರದೇಶದ ಅಭಿವೃದ್ಧಿಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ ಸಾವಿರಾರು ಕೋಟಿ ರೂ. ಅನುದಾನದ ಕಾಮಗಾರಿಗಳನ್ನು ಕೈಗೊಂಡಿದೆ. ಚುನಾವಣೆ ದೃಷ್ಟಿಯಿಂದ ಹೈಕ ಭಾಗ ಕಾಂಗ್ರೆಸ್ ಭದ್ರಕೋಟೆಯಾಗಿದ್ದು, ಈ ಬಾರಿ 40ಕ್ಕೂ ಹೆಚ್ಚು ಶಾಸಕರು ಜಯ ಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ವಿಧಾನ ಪರಿಷತ್ ಸದಸ್ಯ ಬಸವರಾಜ ಪಾಟೀಲ್ ಇಟಗಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ರಾಮಣ್ಣ ಇರಬಗೇರಾ, ಮಾಜಿ ಅಧ್ಯಕ್ಷ ಎ.ವಸಂತಕುಮಾರ, ತಾಲೂಕು ಅಧ್ಯಕ್ಷ ಭೀಮನಗೌಡ ನಾಗಡದಿನ್ನಿ ಇತರರು ಇದ್ದರು.