Advertisement

ಯಾರನ್ನೂ ಮುಕ್ತಗೊಳಿಸಲು ನಾವಂತೂ ಬಯಸುವುದಿಲ್ಲ

07:10 AM Dec 12, 2018 | Team Udayavani |

ನವದೆಹಲಿ: ಹಲವು ರಾಜ್ಯಗಳ ವಿಧಾನಸಭೆ ಚುನಾವಣೆಯಲ್ಲಿ ಸೋಲುಣ್ಣುವ ಮೂಲಕ ಪತನದಂಚಿಗೆ ತಲುಪಿದ್ದ ಕಾಂಗ್ರೆಸ್‌ ಈ ಬಾರಿಯ ಪಂಚರಾಜ್ಯಗಳ ಚುನಾವಣೆಯಲ್ಲಿ ಉತ್ತಮ ಸಾಧನೆಯನ್ನು ತೋರಿರುವುದನ್ನು ಪಕ್ಷದ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ‘ಬದಲಾವಣೆಯ ಗಾಳಿ’ ಎಂದು ಬಣ್ಣಿಸಿದ್ದಾರೆ. ಅಲ್ಲದೆ, ಇದು ಪಕ್ಷದ ಕಾರ್ಯಕರ್ತರು, ರೈತರು, ಯುವಕರಿಗೆ ಸಂದ ಜಯ ಎಂದೂ ಹೇಳಿದ್ದಾರೆ.

Advertisement

ಫ‌ಲಿತಾಂಶದ ಬಳಿಕ ಪಕ್ಷದ ಪ್ರಧಾನ ಕಚೇರಿಯಲ್ಲಿ ಸುದ್ದಿಗಾರರನ್ನು ಉದ್ದೇಶಿಸಿ ಮಾತನಾಡಿದ ರಾಹುಲ್‌ ಗಾಂಧಿ, ‘ಪ್ರಧಾನಿ ಮೋದಿಗೆ ಜನರು ಅಭೂತಪೂರ್ವ ಜಯ ತಂದುಕೊಟ್ಟಿದ್ದರು. ಆದರೆ, ಮೋದಿ ಅವರು ದೇಶದ ಹೃದಯಬಡಿತವನ್ನು ಅರ್ಥಮಾಡಿಕೊಳ್ಳುವಲ್ಲಿ ವಿಫ‌ಲರಾದರು’ ಎಂದಿದ್ದಾರೆ. ಬಿಜೆಪಿಯ ‘ಕಾಂಗ್ರೆಸ್‌ ಮುಕ್ತ ಭಾರತ’ದ ಕನಸಿನ ಬಗೆಗಿನ ಪ್ರಶ್ನೆಗೆ ಉತ್ತರಿಸಿದ ರಾಹುಲ್‌, ‘ಬಿಜೆಪಿ ಹೊಂದಿರುವ ನಿರ್ದಿಷ್ಟ ಸಿದ್ಧಾಂತದ ವಿರುದ್ಧ ನಾವು ಹೋರಾಡುತ್ತೇವೆ. ಆದರೆ, ನಾವೂ ಯಾರನ್ನೂ ‘ಮುಕ್ತ’ಗೊಳಿಸಲು ಇಚ್ಛಿಸುವುದಿಲ್ಲ’ ಎಂದಿದ್ದಾರೆ.

‘ಪ್ರಧಾನಿ ಮೋದಿ ನೇತೃತ್ವದ ಸರ್ಕಾರವು ಜನರಿಗೆ ನೀಡಿದ್ದ ಆಶ್ವಾಸನೆಗಳನ್ನು ಈಡೇರಿಸಿರಲಿಲ್ಲ. ಹಾಗಾಗಿ, ಜನರು ಬದಲಾವಣೆ ಬಯಸಿದರು. ಈಗ ನಮ್ಮ ಮೇಲೆ ದೊಡ್ಡ ಜವಾಬ್ದಾರಿಯೊಂದಿದೆ. ನಾವು ಏನನ್ನು ಮಾಡಬಾರದು ಎಂಬುದನ್ನು ಪ್ರಧಾನಿ ಮೋದಿ ನಮಗೆ ಕಲಿಸಿಕೊಟ್ಟಿದ್ದಾರೆ. ಆದ್ದರಿಂದ, ನಾವು ನೀಡಿರುವ ಎಲ್ಲ ಆಶ್ವಾಸನೆಯನ್ನು ಈಡೇರಿಸುತ್ತೇವೆ’ ಎಂದಿದ್ದಾರೆ. 2019ರ ಲೋಕಸಭೆ ಚುನಾವಣೆಯಲ್ಲೂ ನಾವೇ ಗೆಲ್ಲುತ್ತೇವೆ ಎಂಬ ವಿಶ್ವಾಸವನ್ನೂ ವ್ಯಕ್ತಪಡಿಸಿದ್ದಾರೆ.

ಒಟ್ಟಾರೆ ಅಭಿವೃದ್ಧಿಯೇ ನಮ್ಮ ಧ್ಯೇಯ: ರಾಜಸ್ಥಾನ, ಛತ್ತೀಸ್‌ಗಡ, ಮಧ್ಯಪ್ರದೇಶಗಳನ್ನು ಪ್ರಗತಿಯ ಪಥದತ್ತ ಒಯ್ಯಲಿದ್ದೇವೆ ಎಂದು ಹೇಳಿರುವ ರಾಹುಲ್‌, ಈ ರಾಜ್ಯಗಳಲ್ಲಿ ಕಾಂಗ್ರೆಸ್‌ನ ಸಾಧನೆಗೆ ಪಕ್ಷದ ಕಾರ್ಯಕರ್ತರು ಹಾಗೂ ಜನರೇ ಕಾರಣ. ಅವರ ಪರಿಶ್ರಮಕ್ಕೆ ಫ‌ಲ ಸಿಕ್ಕಿದೆ ಎಂದಿದ್ದಾರೆ. ಎಲ್ಲ ರೀತಿಯ ಕಷ್ಟಗಳು, ಅಡೆತಡೆಗಳನ್ನು ಎದುರಿಸಿ ಪಕ್ಷದ ಗೆಲುವಿಗೆ ಶ್ರಮಿಸಿದ ಕಾರ್ಯಕರ್ತರಿಗೆ ನಾನು ಧನ್ಯವಾದ ಹೇಳಬಯ ಸುತ್ತೇನೆ ಎಂದಿರುವ ರಾಹುಲ್‌, ಪಕ್ಷದ ಕಾರ್ಯಕರ್ತರನ್ನು ‘ಬಬ್ಬರ್‌ ಶೇರ್‌’ (ಸಿಂಹಗಳು) ಎಂದು ಕರೆದಿದ್ದಾರೆ.

ಪ್ರೀತಿ ಆರಿಸಿದ್ದಕ್ಕೆ ಧನ್ಯವಾದ
ಪಂಚರಾಜ್ಯಗಳ ಚುನಾವಣೆಯಲ್ಲಿ ಮಿಜೋರಾಂ, ತೆಲಂಗಾಣ ಹೊರತುಪಡಿಸಿ ಉಳಿದ ಮೂರು ರಾಜ್ಯಗಳಲ್ಲಿ ಅಚ್ಚರಿಯ ಸಾಧನೆ ಮಾಡಿರುವ ಕಾಂಗ್ರೆಸ್‌, ಮತದಾರರಿಗೆ ಟ್ವೀಟ್‌ ಮೂಲಕ ಧನ್ಯವಾದ ಸಲ್ಲಿಸಿದೆ. ತನ್ನ ಅಧಿಕೃತ ಟ್ವಿಟರ್‌ ಖಾತೆಯಿಂದ ಟ್ವೀಟ್‌ ಮಾಡಿರುವ ಕಾಂಗ್ರೆಸ್‌, ‘ಪ್ರಜಾಸತ್ತೆಯು ಗೆದ್ದಿದೆ. ದ್ವೇಷದ ಬದಲಿಗೆ ಪ್ರೀತಿಯನ್ನು, ಹಿಂಸೆಯ ಬದಲಿಗೆ ಶಾಂತಿಯನ್ನು ಹಾಗೂ ಸುಳ್ಳಿನ ಬದಲಿಗೆ ಸತ್ಯವನ್ನು ಆಯ್ಕೆ ಮಾಡಿದ್ದಕ್ಕೆ ಭಾರತೀಯರಿಗೆ ಧನ್ಯವಾದಗಳು. ಇಂದು ನೀವೇ ಗೆದ್ದಿದ್ದೀರಿ’ ಎಂದು ಹೇಳಿದೆ.

Advertisement
Advertisement

Udayavani is now on Telegram. Click here to join our channel and stay updated with the latest news.

Next