Advertisement

ಸತ್ಯ V/S ಅಸತ್ಯ : ರಾಹುಲ್‌ ಗಾಂಧಿ ಪ್ರಚಾರ ಭಾಷಣ

09:56 AM Apr 14, 2019 | Team Udayavani |

ಕೆ.ಆರ್‌.ನಗರ/ಕೋಲಾರ/ಚಿತ್ರದುರ್ಗ: ನ್ಯಾಯ-ಅನ್ಯಾಯ, ಸತ್ಯ-ಅಸತ್ಯದ ನಡುವೆ ನಡೆಯುತ್ತಿರುವ ಹೋರಾಟ ಈ ಚುನಾವಣೆ. ನಾವೆಲ್ಲರೂ ಸತ್ಯದ ಪರ ನಿಂತಿದ್ದೇವೆ. ಕಾಂಗ್ರೆಸ್‌-ಜೆಡಿಎಸ್‌ ಒಟ್ಟಾಗಿ ಮೋದಿ, ಬಿಜೆಪಿ, ಆರ್‌ಎಸ್‌ಎಸ್‌ ವಿರುದ್ಧ ಹೋರಾಟ ನಡೆಸುತ್ತಿದ್ದೇವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಹೇಳಿದರು.

Advertisement

ಮಂಡ್ಯ ಲೋಕಸಭೆ ಕ್ಷೇತ್ರ ವ್ಯಾಪ್ತಿಯಲ್ಲಿರುವ ಕೆ.ಆರ್‌. ನಗರದಲ್ಲಿ ಶನಿವಾರ ಏರ್ಪಡಿಸಿದ್ದ ಕಾಂಗ್ರೆಸ್‌-ಜೆಡಿಎಸ್‌ ಮೈತ್ರಿ ಪರ್ವದ ಪರಿವರ್ತನ ಸಮಾವೇಶವನ್ನು ಉದ್ದೇಶಿಸಿ ಅವರು ಮಾತನಾಡಿದರು. 2019ರ ಲೋಕ ಸಭಾ ಚುನಾವಣೆ ಎರಡು ವಿಚಾರಧಾರೆಗಳ ಮೇಲೆ ನಡೆಯಲಿದೆ. ಒಂದು ಸುಳ್ಳು, ದ್ವೇಷ, ಹಿಂಸೆ, ಕೋಮುವಾದ. ಎರಡನೆಯದು ಪ್ರೀತಿ, ವಿಶ್ವಾಸ, ಸಚ್ಚಾರಿತ್ರ್ಯ.

ಪ್ರಧಾನಿ ನರೇಂದ್ರ ಮೋದಿ ಪ್ರತೀ ಚುನಾವಣೆಗೊಂದು ಹೊಸ ಸುಳ್ಳು ಹೇಳುತ್ತಿದ್ದಾರೆ. 2014ರಲ್ಲಿ ವರ್ಷಕ್ಕೆ 2 ಕೋಟಿ ಉದ್ಯೋಗ ಸೃಷ್ಟಿ, ದೇಶದ ಪ್ರತಿಯೊಬ್ಬರ ಖಾತೆಗೆ 15 ಲಕ್ಷ ರೂ. ಹಾಕುವುದಾಗಿ ಭರವಸೆ ನೀಡಿ ದ್ದರು. ಈ ಐದು ವರ್ಷಗಳಲ್ಲಿ ಕೊಟ್ಟಿದ್ದ ಭರವಸೆ ಈಡೇರಿಸದ ಪ್ರಧಾನಿ ಈಗ ಚೌಕಿದಾರ್‌ ಎಂದು ಹೊರಟಿದ್ದಾರೆ. ಈ ಚೌಕಿದಾರ್‌ ದೇಶದ ರೈತರು, ಸಣ್ಣ ಉದ್ದಿಮೆದಾರರು, ಯುವಜನರ ಮನೆಯ ಮುಂದೆ ಕಾಣಿಸಲ್ಲ. ಬದಲಿಗೆ ಅಂಬಾನಿ ಮನೆ ಮುಂದೆ ಕಾಣುತ್ತಾರೆ. ಈ ಒಬ್ಬ ಚೌಕಿದಾರ್‌ ಹಿಂದೂಸ್ಥಾನದ ಎಲ್ಲ ಚೌಕಿದಾರರ ಹೆಸರು ಕೆಡಿಸಿದ್ದಾರೆ ಎಂದು ಲೇವಡಿ ಮಾಡಿದರು.

ನ್ಯಾಯ್‌ಗೆ ಕಳ್ಳರ ಜೇಬಿನಿಂದ ಹಣ
ಕೋಲಾರದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಕೇಂದ್ರದಲ್ಲಿ ಕಾಂಗ್ರೆಸ್‌ ಮತ್ತು ಮೈತ್ರಿ ಪಕ್ಷಗಳು ಅಧಿ ಕಾರಕ್ಕೆ ಬಂದರೆ ನ್ಯಾಯ್‌ ಯೋಜನೆಯಲ್ಲಿ ಬಡ ಕುಟುಂಬಗಳ ಖಾತೆಗಳಿಗೆ ವಾರ್ಷಿಕ 72 ಸಾವಿರ ರೂ. ಹಾಕುವುದಾಗಿ ಭರವಸೆ ನೀಡಿದರು. ಮೋದಿ ಮತ್ತವರ ಪಕ್ಷದ ಸದಸ್ಯರು ನ್ಯಾಯ್‌ ಯೋಜನೆ ಬಗ್ಗೆ ಟೀಕೆ ಮಾಡುತ್ತಾರೆ. ಎಲ್ಲಿಂದ 72 ಸಾವಿರ ರೂ. ತರುತ್ತಾರೆ ಎಂದು ವ್ಯಂಗ್ಯವಾಡುತ್ತಾರೆ. ಮೋದಿ ಇದರ ಬಗ್ಗೆ ತಲೆಕೆಡಿಸಿಕೊಳ್ಳಬೇಕಿಲ್ಲ. ಅವರ ಅನಿಲ್‌ ಅಂಬಾನಿಯಂಥ ಕಳ್ಳ ಸ್ನೇಹಿತರ ಜೇಬಿನಿಂದಲೇ ವಸೂಲು ಮಾಡುವುದಾಗಿ ರಾಹುಲ್‌ ಗಾಂಧಿ  ಸವಾಲು ಹಾಕಿದರು.

ಕೇಂದ್ರ ಸರಕಾರಿ ನೌಕರಿಗಳಲ್ಲಿ ಶೇ. 33ರಷ್ಟು ಮಹಿಳಾ ಮೀಸಲಾತಿ, 2020ರೊಳಗೆ ಕೇಂದ್ರದಲ್ಲಿ ಖಾಲಿಯಿರುವ 24 ಲಕ್ಷ ಸರಕಾರಿ ಹುದ್ದೆಗಳ ಭರ್ತಿ, ಪ್ರತ್ಯೇಕ ಕೃಷಿ ಬಜೆಟ್‌ ಮಂಡನೆ, ಹೊಸ ಉದ್ಯಮಗಳಿಗೆ ಮೊದಲ ಮೂರು ವರ್ಷ ಯಾವುದೇ ಪರವಾನಿಗೆಯ ಆವಶ್ಯಕತೆಯಿಲ್ಲದೆ ಉದ್ಯಮ ನಡೆಸುವ, ನರೇಗಾ ಯೋಜನೆಯಡಿ 150 ದಿನಗಳ ಉದ್ಯೋಗ ಖಾತರಿಯನ್ನು ಅನುಷ್ಠಾನಕ್ಕೆ ತರಲಾಗುವುದು.

Advertisement

ಕೇಂದ್ರದಲ್ಲಿ ನನೆಗುದಿಗೆ ಬಿದ್ದಿರುವ ಶೇ. 33ರ ಮಹಿಳಾ ಮೀಸಲಾತಿ ಅನುಷ್ಠಾನಗೊಳಿಸಿ ರಾಜ್ಯಸಭೆ, ವಿಧಾನಸಭೆ, ಲೋಕಸಭೆ ಚುನಾವಣೆ ಗಳಲ್ಲಿ ಮೀಸಲಾತಿ ನೀಡಲಾಗುವುದು ಎಂದು ರಾಹುಲ್‌ ಆಶ್ವಾಸನೆ ನೀಡಿದರು.

ಬಡತನದ ಮೇಲೆ ಸರ್ಜಿಕಲ್‌ ಸ್ಟ್ರೈಕ್‌
ಚಿತ್ರದುರ್ಗದಲ್ಲಿ ಮಾತನಾಡಿದ ರಾಹುಲ್‌ ಗಾಂಧಿ, ಕಾಂಗ್ರೆಸ್‌ ಅಧಿಕಾರಕ್ಕೆ ಬಂದರೆ ದೇಶದ ಬಡತನ ನಿರ್ಮೂಲನೆಗೆ ಸರ್ಜಿಕಲ್‌ ಸ್ಟೈÅಕ್‌ ನಡೆಸಲಾಗುವುದು ಎಂದು ಹೇಳಿದರು. ರಫೇಲ್‌ ವಿಮಾನ ಖರೀದಿಯಲ್ಲಿ 30 ಸಾವಿರ ಕೋಟಿ ರೂ. ಲೂಟಿ ಆಗಿದೆ. ಲೂಟಿ ಮಾಡಿದ ಅನಿಲ್‌ ಅಂಬಾನಿಗೆ ನೋಟಿಸ್‌-ಜೈಲು ಇಲ್ಲ. ಆದರೆ ಕಾಂಗ್ರೆಸ್‌ ಅಧಿಕಾರಕ್ಕೆ ಬಂದಲ್ಲಿ ರೈತರು ಸಾಲ ಕಟ್ಟಲು ಸಾಧ್ಯವಾಗದಿದ್ದಲ್ಲಿ ಜೈಲಿಗೆ ಹೋಗದಂತಹ ಮತ್ತು ಕ್ರಿಮಿನಲ್‌ ಕೇಸ್‌ ದಾಖಲಾಗದಂತಹ ಕಾನೂನು ಜಾರಿಗೆ ತರಲಾಗುವುದು. ಅಲ್ಲದೆ ಉದ್ಯಮಿ ಅನಿಲ್‌ ಅಂಬಾನಿಯ ಹಣವನ್ನು ಕಿತ್ತು ಜನಸಾಮಾನ್ಯರ ಜೇಬಿಗೆ ಹಾಕುವುದಾಗಿ ಭರವಸೆ ನೀಡಿದರು.

ರಾಜ್ಯದಲ್ಲಿ ಸಾಲ ಮನ್ನಾ ಮಾಡುವುದಾಗಿ ಭರವಸೆ ನೀಡಿದ್ದೇವು. ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌ ಸರಕಾರ ಇದ್ದಾಗ 8 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದರು. ಸಮ್ಮಿಶ್ರ ಸರಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ 48 ಸಾವಿರ ಕೋಟಿ ರೂ. ಮನ್ನಾ ಮಾಡಿದ್ದಾರೆ. ಕಾಂಗ್ರೆಸ್‌ ಸರಕಾರ ಯಾವ ರಾಜ್ಯಗಳಲ್ಲಿ ಇದೆಯೋ ಅಲ್ಲೆಲ್ಲ ರೈತರ ಸಾಲ ಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next