ಕೋಲಾರ: ತಾಲೂಕಿನ ಲಕ್ಷ್ಮೀಸಾಗರ ಕೆರೆಯ ಬಳಿ ಗಂಗಾಪೂಜೆ ನೆಪದಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧ ಶಕ್ತಿ ಪ್ರದರ್ಶನ ತೋರಿದ್ದವರೆಲ್ಲರೂ ಶನಿವಾರ ರಾಹುಲ್ ಗಾಂಧಿ ಪ್ರಚಾರ ವೇದಿಕೆಯಲ್ಲಿ ಕಾಣಿಸಿಕೊಳ್ಳುವ ಮೂಲಕ ಅಚ್ಚರಿ ಮೂಡಿಸಿದರು.
ಇತ್ತೀಚಿನ ದಿನಗಳಲ್ಲಿ ಕೆ.ಎಚ್.ಮುನಿಯಪ್ಪ ವಿರುದ್ಧ ನೇರವಾಗಿ ವಾಗ್ಧಾಳಿ ನಡೆಸುತ್ತಿರುವ ಹಾಗೂ ಕೇವಲ 24 ಗಂಟೆಗಳ ಹಿಂದಷ್ಟೇ ಕೆ.ಸಿ. ವ್ಯಾಲಿ ಯೋಜನೆಗೆ ಅಡ್ಡಗಾಲು ಹಾಕಲು ಕೆ.ಎಚ್. ಮುನಿಯಪ್ಪರೇ ಕಾರಣ ಎಂದು ನೇರ ಆರೋಪ ಮಾಡಿದ್ದ ಕೋಲಾರದ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ ರಾಹುಲ್ ಗಾಂಧಿ ಕಾರ್ಯಕ್ರಮಕ್ಕೆ ಕಾರ್ಯಕರ್ತರು ಆಗಮಿಸುವಂತೆ ಖುದ್ದು ಪತ್ರಿಕಾ ಕಚೇರಿಗಳಿಗೆ ದೂರವಾಣಿ ಕರೆ ಮಾಡಿ ಹೇಳಿಕೆ ನೀಡಿದರು.
ಶನಿವಾರ ವಿಶ್ವೇಶ್ವರಯ್ಯ ಕ್ರೀಡಾಂಗಣದ ವೇದಿಕೆಯ ಸಮೀಪ ಕಾಂಗ್ರೆಸ್ ಅಭ್ಯರ್ಥಿ ಕೆ.ಎಚ್. ಮುನಿಯಪ್ಪರ ಉಭಯಕುಶಲೋಪರಿ ವಿಚಾರಿಸಿದರು. ರಾಹುಲ್ ಗಾಂಧಿ ಆಗಮಿಸಿದಾಗ ಸ್ವಾಗತಿಸಿದರು. ಮುಖ್ಯಮಂತ್ರಿ ಕುಮಾರ ಸ್ವಾಮಿಗಾಗಿ ಕಾದು ಕುಳಿತ್ತಿದ್ದರು. ತಮ್ಮಲ್ಲಿ ಭೇದಭಾವವೇ ಇಲ್ಲವೆಂಬಂತೆ ವರ್ತಿಸಿ ಅಚ್ಚರಿ ಮೂಡಿಸಿದರು. ಇದೇರೀತಿ ಕೆ.ಎಚ್.ಮುನಿಯಪ್ಪ ವಿರೋಧಿ ಬಣದಲ್ಲಿ ಗುರುತಿಸಿಕೊಂಡು ಕಳೆದ ಆರೇಳು ತಿಂಗಳುಗಳಿಂದಲೂ ಭಿನ್ನಮತೀಯರಾಗಿದ್ದ ಶಿಡ್ಲಘಟ್ಟದ ವಿ.ಮುನಿಯಪ್ಪ, ಬಂಗಾರಪೇಟೆ ಎಸ್. ಎನ್.ನಾರಾಯಣಸ್ವಾಮಿ, ವಿಧಾನ ಪರಿಷತ್ ಸದಸ್ಯ ನಜೀರ್ ಅಹಮದ್ ಇತರರು ತಾವೆಲ್ಲ ಒಂದೇ ಮೈತ್ರಿಯಲ್ಲಿ ಒಗ್ಗಟ್ಟಿದೆ ಎಂಬ ಸಂದೇಶವನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಮತ್ತು ಮುಖ್ಯಮಂತ್ರಿ ಕುಮಾರಸ್ವಾಮಿ ಸಮ್ಮುಖದಿಂದ ರವಾನಿಸುವಲ್ಲಿ ಸಫಲರಾದರು. 24 ಗಂಟೆಗಳ ಹಿಂದಷ್ಟೇ ಇವರ ಆರ್ಭಟ ನೋಡಿದ್ದವರು ಅದು ಇವರೇನಾ ಎನ್ನುವಷ್ಟರ ಮಟ್ಟಿಗೆ ಪಕ್ಷಕ್ಕೆ ಕಟ್ಟುಬಿದ್ದಿದ್ದು ಅವರ ಬೆಂಬಲಿಗರಲ್ಲೂ ಅಶ್ಚರ್ಯ ಮೂಡುವಂತಾಯಿತು.
ಎಚ್.ನಾಗೇಶ್ ಗೈರು: ಜೆಡಿಎಸ್ ಕಾಂಗ್ರೆಸ್ ಮೈತ್ರಿ ಪರಿವರ್ತಾನಾ ರ್ಯಾಲಿಯಲ್ಲಿ ಕೋಲಾರದ ಜೆಡಿಎಸ್ ಶಾಸಕ ಕೆ.ಶ್ರೀನಿವಾಸಗೌಡ, ಬಂಗಾರಪೇಟೆಯ ಎಸ್. ಎನ್.ನಾರಾಯಣಸ್ವಾಮಿ, ಮಾಲೂರಿನ
ಕೆ.ವೈ.ನಂಜೇಗೌಡ, ಕೆಜಿಎಫ್ನ ರೂಪಕಲಾ ಶಶಿಧರ್, ಚಿಂತಾಮಣಿಯ ಜೆ.ಕೆ.ಕೃಷ್ಣಾರೆಡ್ಡಿ, ಶಿಡ್ಲಘಟ್ಟ ಶಾಸಕ ವಿ.ಮುನಿಯಪ್ಪ ಹಾಜರಿದ್ದರು. ಶ್ರೀನಿವಾಸಪುರದ ಶಾಸಕ ಸ್ಪೀಕರ್ ರಮೇಶ್‌ಕುಮಾರ್ ಕಾರಣಕ್ಕಾಗಿ ವೇದಿಕೆಗೆ ಬರಲಿಲ್ಲ. ಪಕ್ಷೇತರರಾಗಿ ತಿಂಗಳಿಗೊಂದು ಪಕ್ಷದಲ್ಲಿ ಗುರುತಿಸಿಕೊಳ್ಳುವುದನ್ನು ಅಭ್ಯಾಸ ಮಾಡಿಕೊಂಡಿರುವ ಮುಳಬಾಗಿಲು ಶಾಸಕ ಎಚ್ .ನಾಗೇಶ್ ಕಾರ್ಯಕ್ರಮದಲ್ಲಿ ಕಾಣಿಸಿಕೊಳ್ಳದೆ ಗೈರು ಹಾಜರಾಗಿದ್ದರು.
ಬೆಳಗ್ಗೆಯಿಂದಲೇ ಬಿಗಿ ಬಂದೋಬಸ್ತ್: ರಾಹುಲ್ ಗಾಂಧಿ ಪ್ರಚಾರ ಕಾರ್ಯಕ್ರಮದ ಬಂದೋಬಸ್ತ್ಗಾಗಿಯೇ ಪೊಲೀಸ್ ಇಲಾಖೆ ಎರಡು ಸಾವಿರ
ಮಂದಿಯನ್ನು ನಿಯೋಜಿಸಿತ್ತು. ಕಾರ್ಯಕ್ರಮ ನಡೆಯುವ ಕ್ರೀಡಾಂಗಣವನ್ನು ಸುತ್ತುವರಿದಿದ್ದಲ್ಲದೆ, ನಗರದ ಆಯಕಟ್ಟಿನ ಜಾಗಗಳಲ್ಲಿಯೂ ಬಿಗಿ ಬಂದೋಬಸ್ತ್ ಮಾಡಲಾಗಿತ್ತು. ಕ್ರೀಡಾಂಗಣಕ್ಕೆ ತೆರಳುವ ಅಂತರಗಂಗೆ ರಸ್ತೆಯಲ್ಲಿ ಬೆಳಿಗ್ಗೆಯಿಂದಲೇ ವಾಹನಗಳ ನಿಲುಗಡೆಗೂ ಅವಕಾಶ ನೀಡಲಿಲ್ಲ.
ಆದರೂ, ಬೆಳಿಗ್ಗೆ 10 ಗಂಟೆಯಿಂದಲೇ ಕ್ರೀಡಾಂಗಣಕ್ಕೆ ವಾಹನಗಳ ಆಗಮನ ಶುರುವಾಗಿದ್ದರಿಂದ ಅಂತರಗಂಗೆ ರಸ್ತೆ ಮಧ್ಯಾಹ್ನದವರೆವಿಗೂ ಕಿಷ್ಕಿಂಧೆಯಾಗಿತ್ತು.