Advertisement
ಅವರು ಮಂಗಳವಾರ ರಾತ್ರಿ ಮಂಗಳೂರಿನ ಸರ್ಕಿಟ್ ಹೌಸ್‌ನಲ್ಲಿ ವಾಸ್ತವ್ಯ ಮಾಡುತ್ತಿರುವುದು ವಿಶೇಷ. ರಾಹುಲ್ ಗಾಂಧಿ ನೇತೃತ್ವದಲ್ಲಿ ರಾಜ್ಯದಲ್ಲಿ ಮಾ. 20ರಿಂದ ಆರಂಭವಾಗುತ್ತಿರುವ 3ನೇ ಹಂತದ ಜನಾಶೀರ್ವಾದ ಯಾತ್ರೆ ಇದಾಗಿದೆ. ಎರಡು ದಿನಗಳ ಈ ಯಾತ್ರೆಯು ಉಡುಪಿ, ಮಂಗಳೂರು, ಚಿಕ್ಕಮಗಳೂರು ಹಾಗೂ ಹಾಸನ ಜಿಲ್ಲೆಗಳಲ್ಲಿ ನಡೆಯಲಿದೆ. ಉತ್ತರ ಕರ್ನಾಟಕದಲ್ಲಿ ರಾಹುಲ್ ಗಾಂಧಿ ಕೈಗೊಂಡಿದ್ದ ಜನಾಶೀರ್ವಾದ ಯಾತ್ರೆ ಪಕ್ಷದ ಕಾರ್ಯಕರ್ತರಲ್ಲಿ ಈಗಾಗಲೇ ಹುಮ್ಮಸ್ಸು ಮೂಡಿಸಿದೆ. ಯಾತ್ರೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿ ವಿರುದ್ಧ ತೀವ್ರ ಟೀಕಾ ಪ್ರಹಾರಗೈದಿದ್ದ ರಾಹುಲ್ ಗಾಂಧಿ ಕರಾವಳಿಯ ಯಾತ್ರೆಯಲ್ಲೂ ಇದೇ ರೀತಿಯ ವಾಗ್ಧಾಳಿ ಮುಂದುವರಿಸುವ ಮೂಲಕ ಬಿಜೆಪಿಗೆ ತಿರುಗೇಟು ನೀಡುವ ಲೆಕ್ಕಾಚಾರದಲ್ಲಿದೆ. ಫೆ. 19ರಿಂದ 21ರವರೆಗೆ ಕರಾವಳಿಯಲ್ಲಿ ಅಮಿತ್ ಶಾ ಅವರ ಮಿಂಚಿನ ಸಂಚಾರದ ಮೂಲಕ ಬಿಜೆಪಿ ಪರ ಸೃಷ್ಟಿಸಿರುವ ರಾಜಕೀಯ ಸಂಚಲನಕ್ಕೆ ಅದೇ ಮಾದರಿಯಲ್ಲಿ ಪ್ರತ್ಯುತ್ತರ ನೀಡಲು ರಾಹುಲ್ ಗಾಂಧಿಯವರ ಜನಾಶೀರ್ವಾದ ಯಾತ್ರೆಯನ್ನು ಬಳಸಿಕೊಳ್ಳಲು ಕಾಂಗ್ರೆಸ್ ಸ್ಥಳೀಯ ಮುಖಂಡರು ವೇದಿಕೆಯಾಗಿಸಿಕೊಂಡಿದ್ದಾರೆ.
Related Articles
Advertisement
ಸರ್ವಧರ್ಮ ಧಾರ್ಮಿಕ ಕೇಂದ್ರಗಳಿಗೆ ಭೇಟಿಈ ಹಿಂದೆ ಉತ್ತರ ಕರ್ನಾಟಕ ಭಾಗದಲ್ಲಿ ನಡೆಸಿದ್ದ ಜನಾಶೀರ್ವಾದ ಯಾತ್ರೆ ಸಂದರ್ಭಗಳ ಮಾದರಿಯಲ್ಲೇ ದ.ಕ. ಜಿಲ್ಲೆಯಲ್ಲೂ ಮೂರು ಪ್ರಮುಖ ಧಾರ್ಮಿಕ ಕೇಂದ್ರಗಳಿಗೆ ರಾಹುಲ್ ಗಾಂಧಿ ಭೇಟಿ ನೀಡುವ ಕಾರ್ಯಕ್ರಮವಿದೆ. ನೆಹರೂ ಮೈದಾನದಲ್ಲಿ ಕಾರ್ಯಕರ್ತರ ಸಭೆಯ ಬಳಿಕ ಮಂಗಳವಾರ ರಾತ್ರಿ 7.30ರಿಂದ 9ರ ವರೆಗೆ ಮಂಗಳೂರಿನಲ್ಲಿ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಾಲಯ, ರೊಸಾರಿಯೋ ಕೆಥೆಡ್ರಲ್ ಹಾಗೂ ಉಳ್ಳಾಲದ ಪ್ರಸಿದ್ಧ ದರ್ಗಾಕ್ಕೂ ಭೇಟಿ ನೀಡುವುದು ಅವರ ಕಾರ್ಯಕ್ರಮಗಳ ಪಟ್ಟಿಯಲ್ಲಿದೆ. ಸರ್ಕಿಟ್ ಹೌಸ್‌ನಲ್ಲಿ ವಾಸ್ತವ್ಯ
ರಾಹುಲ್ ಗಾಂಧಿಯವರು ಮಾ. 20ರಂದು ರಾತ್ರಿ ವಾಸ್ತವ್ಯ ಹೂಡುವ ಮಂಗಳೂರಿನ ಸರ್ಕಿಟ್ ಹೌಸ್‌ನಲ್ಲಿ ಸರ್ವ ಸಿದ್ಧತೆ ನಡೆಸಲಾಗಿದೆ. ಸರ್ಕಿಟ್ ಹೌಸ್‌ನ ಸೂಟ್ ನಂ. 1ರಲ್ಲಿ ಅವರು ವಾಸ್ತವ್ಯ ಹೂಡುವರು. ಪ್ರಧಾನಿ ನರೇಂದ್ರ ಮೋದಿಯವರು ಲಕ್ಷದ್ವೀಪಕ್ಕೆ ತೆರಳುವ ಹಾದಿಯಲ್ಲಿ ಕೂಡ ರಾತ್ರಿ ಇದೇ ಸೂಟ್‌ನಲ್ಲಿ ಉಳಿದುಕೊಂಡಿದ್ದರು. ಎಸ್‌ಪಿಜಿ ಪಡೆ ಸರ್ಕಿಟ್ ಹೌಸ್‌ಗೆ ಆಗಮಿಸಿ ಭದ್ರತೆ ವ್ಯವಸೆœಗಳ ಬಗ್ಗೆ ಪರಿಶೀಲಿಸಿದೆ. ಭಾವನಾತ್ಮಕ ಬೆಸೆಯುವಿಕೆ
ರಾಹುಲ್ ಗಾಂಧಿಯವರ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ನಡೆಸಿದ ಜನಾಶೀರ್ವಾದ ಯಾತ್ರೆಯಲ್ಲಿ ಆ ಭಾಗದ ಜನಜೀವನದ ಜತೆಗೆ ಭಾವನಾತ್ಮಕವಾಗಿ ಬೆಸೆಯುವ ತಂತ್ರವನ್ನು ಅನುಸರಿಸಿದ್ದರು. ಹಳ್ಳಿಗಳ ಪೆಟ್ಟಿಗೆ ಅಂಗಡಿಗಳಲ್ಲಿ, ಚಹಾ ಅಂಗಡಿಗಳಲ್ಲಿ ಕುಳಿತು ಸ್ಥಳೀಯ ಖಾದ್ಯಗಳಾದ ಬಜ್ಜಿ, ಬೋಂಡ, ಮಂಡಕ್ಕಿ, ಚಹಾ ಸವಿದಿದ್ದರು. ಇದು ರಾಷ್ಟ್ರ ಮಟ್ಟದ ಸುದ್ದಿಯಾಗಿತ್ತು. ದ.ಕ., ಉಡುಪಿ ಪಾದಯಾತ್ರೆ ಸಂದರ್ಭದಲ್ಲಿ ಹಾದಿಯಲ್ಲಿ ಜನರ ಮಧ್ಯೆ ಹೋಗಿ ಕುಶಲೋಪರಿ ವಿಚಾರಿಸಿದ್ದರು. ಇದೆ ಈ ರೀತಿಯ ತಂತ್ರವನ್ನು ಕರಾವಳಿಯ ಯಾತ್ರೆಯಲ್ಲೂ ರಾಹುಲ್ ಅನುಸರಿಸುವ ಸಾಧ್ಯತೆಗಳಿವೆ ಎನ್ನಲಾಗಿದೆ. ಪ್ರಥಮ ರಾಜಕೀಯ ಬಹಿರಂಗ ಸಭೆ
ರಾಹುಲ್ ಕಾಂಗ್ರೆಸ್‌ನ ರಾಷ್ಟ್ರೀಯ ಅಧ್ಯಕ್ಷರಾದ ಬಳಿಕ ದ.ಕ. ಮತ್ತು ಉಡುಪಿ ಜಿಲ್ಲೆಗಳಲ್ಲಿ ಬಹಿರಂಗ ರಾಜಕೀಯ ಸಭೆಗಳಲ್ಲಿ ಭಾಗವಹಿಸುವುದು ಇದು ಪ್ರಥಮ. ಹಿಂದೆ ಎಐಸಿಸಿ ಉಪಾಧ್ಯಕ್ಷರಾಗಿ ಜಿಲ್ಲೆಯಲ್ಲಿ ಪಕ್ಷದ ವತಿಯಿಂದ ನಡೆದಿದ್ದ ಬಹಿರಂಗ ಸಭೆಗಳಲ್ಲಿ ಭಾಗವಹಿಸಿದ್ದರು. ರಾಹುಲ್ ಗಾಂಧಿ ಪ್ರವಾಸ : ಪಡುಬಿದ್ರಿ ಸಭೆಗೆ 15,000 ಮಂದಿ: ಸೊರಕೆ
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು ಮಾ. 20ರ ಮಧ್ಯಾಹ್ನ 1.45ಕ್ಕೆ ಪಡುಬಿದ್ರಿ ಪೇಟೆಯಲ್ಲಿ ಸಾರ್ವಜನಿಕ ಸಭೆಯನ್ನುದ್ದೇಶಿಸಿ ಮಾತನಾಡಲಿದ್ದು, ಸಭೆಯಲ್ಲಿ 15,000 ಮಂದಿ ಪಾಲ್ಗೊಳ್ಳುವ ನಿರೀಕ್ಷೆ ಇದೆ ಎಂದು ಶಾಸಕ ವಿನಯ ಕುಮಾರ್ ಸೊರಕೆ ತಿಳಿಸಿದ್ದಾರೆ. ರಾಹುಲ್ ಮಧ್ಯಾಹ್ನ 12.45ಕ್ಕೆ ತೆಂಕ ಎರ್ಮಾಳಿನಲ್ಲಿ ಸೇವಾದಳದ ತರಬೇತಿ ಕೇಂದ್ರ ಉದ್ಘಾಟಿಸಲಿದ್ದಾರೆ. ಬಳಿಕ ಪಡುಬಿದ್ರಿವರೆಗೆ ರೋಡ್ ಶೋ ನಡೆಯಲಿದೆ ಎಂದರು. 130 ಕೋ. ರೂ.: ಕಳೆದೊಂದು ವರ್ಷದಲ್ಲಿ ಕಾಪು ಕ್ಷೇತ್ರಕ್ಕೆ 130 ಕೋ. ರೂ. ಅನುದಾನ ಬಂದಿದೆ. ರಸ್ತೆ ಅಭಿವೃದ್ಧಿ, ಸೇತುವೆ ನಿರ್ಮಾಣ ನಡೆದಿದೆ. ಮುಂದೆ ಎಂಜಿನಿಯರಿಂಗ್ ಹಾಗೂ ವೈದ್ಯಕೀಯ ಕಾಲೇಜುಗಳನ್ನು ಸ್ಥಾಪಿಸಲಾಗುವುದು. ಶಿರ್ವ, ಪಡುಬಿದ್ರಿ ಮತ್ತು ಹಿರಿಯಡಕಗಳಲ್ಲಿ ನಾಡಕಚೇರಿ ಆರಂಭವಾಗಲಿದೆ ಎಂದರು. ಕಾಪು ತಾಲೂಕು ಸೇರ್ಪಡೆಗೆ ಬೆಳ್ಳೆ ಗ್ರಾಮಸ್ಥರು ವಿರೋಧ ವ್ಯಕ್ತಪಡಿಸಿರುವ ಕುರಿತಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಶಿರ್ವ ನಾಡ ಕಚೇರಿ ಸ್ಥಾಪನೆಯ ಅನಂತರ ಬೆಳ್ಳೆ ಜನರಿಗೆ ಅನುಕೂಲವಾಗಲಿದೆ ಎಂದರು. ಪ್ರಮೋದ್ ಅಭ್ಯರ್ಥಿ: ಪ್ರಮೋದ್ ಮಧ್ವರಾಜ್ ಅವರ ಬಿಜೆಪಿ ಸೇರ್ಪಡೆ ಕುರಿತ ಊಹಾಪೋಹಗಳ ಕುರಿತು ಪ್ರತಿಕ್ರಿಯಿಸಿದ ಸೊರಕೆ ಅವರು, ಉಡುಪಿ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಗಿ ಪ್ರಮೋದ್ ಮಧ್ವರಾಜ್ ಅವರ ಹೆಸರನ್ನು ಮಾತ್ರ ಚುನಾವಣಾ ಸಮಿತಿ ಸಭೆಯಲ್ಲಿ ಸೂಚಿಸಲಾಗಿದೆ. ಅವರನ್ನು ಸಭೆಯಲ್ಲಿ ಅವಿರೋಧವಾಗಿ ಆಯ್ಕೆ ಮಾಡಲಾಗಿದೆ ಎಂದು ಹೇಳಿದರು. ಜಿಲ್ಲಾಧ್ಯಕ್ಷ ಜನಾರ್ದನ ತೋನ್ಸೆ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್‌ಚಂದ್ರ ಶೆಟ್ಟಿ, ದಿವಾಕರ ಶೆಟ್ಟಿ, ದೀಪಕ್ ಎರ್ಮಾಳ್, ಮಹಾಬಲ ಕುಂದರ್ ಉಪಸ್ಥಿತರಿದ್ದರು. ರಾಹುಲ್ ಗಾಂಧಿ ಅವರು ಕೇಂದ್ರದ ಎಸ್‌ಪಿಜಿ ಭದ್ರತೆಯಲ್ಲಿರುತ್ತಾರೆ. ಎಸ್‌ಪಿಜಿಯೊಂದಿಗೆ ನಮ್ಮ ಪೊಲೀಸರು ಜಂಟಿಯಾಗಿ ಭದ್ರತಾ ಕಾರ್ಯದಲ್ಲಿ ತೊಡಗಿಕೊಳ್ಳಲಿದ್ದಾರೆ.
– ಲಕ್ಷ್ಮಣ ಬ. ನಿಂಬರಗಿ, ಉಡುಪಿ ಎಸ್ಪಿ