ನವದೆಹಲಿ:ಆರ್ಥಿಕ, ಹಿಂಜರಿತ, ನಿರುದ್ಯೋಗ, ಕೃಷಿ ಬಿಕ್ಕಟ್ಟು, ಪ್ರಸ್ತಾವಿತ ಆರ್‌ಸಿಇಪಿ ಒಪ್ಪಂದದ ಪ್ರತಿಕೂಲ ಪರಿಣಾಮಗಳು ಸೇರಿದಂತೆ ಕೇಂದ್ರದ ಮೋದಿ ನೇತೃತ್ವದ ಸರ್ಕಾರದ ನೀತಿಗಳ ವಿರುದ್ಧ ಬೀದಿಗಿಳಿಯಲು ಕಾಂಗ್ರೆಸ್ ಸಜ್ಜಾಗಿದೆ.
ಅದರಂತೆ, ನವೆಂಬರ್ 5ರಿಂದ 15ರವರೆಗೆ ದೇಶವ್ಯಾಪಿ ಪ್ರತಿಭಟನೆಗಳನ್ನು ನಡೆಸುವುದಾಗಿ ಕಾಂಗ್ರೆಸ್ ಘೋಷಿಸಿದೆ. ಆದರೆ, ಈ ಸಂದರ್ಭದಲ್ಲಿ ಪಕ್ಷದ ಪ್ರಮುಖ ನಾಯಕ ರಾಹುಲ್ ಗಾಂಧಿ ಮಾತ್ರ ವಿದೇಶದಲ್ಲಿ ಧ್ಯಾನಸ್ಥರಾಗಿರಲಿದ್ದಾರೆ!
ರಾಹುಲ್ ಅವರು ಈ ಹಿಂದೆಯೂ ಹಲವು ಬಾರಿ ಧ್ಯಾನ ಮಾಡಲೆಂದು ವಿದೇಶಕ್ಕೆ ತೆರಳಿದ್ದಾರೆ. ಈ ಬಾರಿಯೂ ಅವರು ಧ್ಯಾನಕ್ಕಾಗಿ ವಿದೇಶಕ್ಕೆ ತೆರಳಲಿದ್ದಾರೆ ಎಂದು ಪಕ್ಷ ತಿಳಿಸಿದೆ. ಆದರೆ, ಪಕ್ಷ ನಡೆಸಲಿರುವ ಇಡೀ ಕಾರ್ಯಕ್ರಮವನ್ನು ರಾಹುಲ್ ನಿರ್ದೇಶನ ಹಾಗೂ ಸಮಾಲೋಚನೆಯ ಮೇರೆಗೆ ರೂಪಿಸಲಾಗಿದೆ ಎಂದು ವಕ್ತಾರ ರಣದೀಪ್ ಸುಜೇìವಾಲಾ ತಿಳಿಸಿದ್ದಾರೆ.
ದೇಶಾದ್ಯಂತ 35 ಸುದ್ದಿಗೋಷ್ಠಿ
ನ.5ರಿಂದ 15ರವರೆಗೆ ಎಲ್ಲ ರಾಜ್ಯಗಳ ರಾಜಧಾನಿಗಳು ಹಾಗೂ ಜಿಲ್ಲಾ ಕೇಂದ್ರಗಳಲ್ಲಿ ಕೇಂದ್ರ ಸರ್ಕಾರದ ದುರಾಡಳಿತ ವಿರೋಧಿಸಿ ಪ್ರತಿಭಟನೆ ನಡೆಯಲಿದೆ. ದೇಶಾದ್ಯಂತ ಒಟ್ಟು 35 ಸುದ್ದಿಗೋಷ್ಠಿಗಳನ್ನೂ ಆಯೋಜಿಸಲಾಗುತ್ತದೆ ಎಂದು ಕಾಂಗ್ರೆಸ್ ನಾಯಕ ಕೆ.ಸಿ.ವೇಣುಗೋಪಾಲ್ ಹೇಳಿದ್ದಾರೆ.