ಹೊಸದಿಲ್ಲಿ: ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಚುನಾವಣ ರಾಜಕೀಯ ಪದಾರ್ಪಣೆಗೆ ವೇದಿಕೆ ಸಿದ್ದವಾಗಿದ್ದು ಸಹೋದರ ರಾಹುಲ್ ಗಾಂಧಿ ಅವರು ವಯನಾಡು ಲೋಕಸಭಾ ಕ್ಷೇತ್ರದ ಸಂಸದ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಸೋಮವಾರ ಸಂಜೆ ಘೋಷಿಸಿದ್ದಾರೆ.
ಮಲ್ಲಿಕಾರ್ಜುನ ಖರ್ಗೆ ಅವರ ನಿವಾಸದಲ್ಲಿ ನಡೆದ ಕಾಂಗ್ರೆಸ್ ನಾಯಕರ ಉನ್ನತ ಮಟ್ಟದ ಸಭೆಯ ನಂತರ ಸುದ್ದಿಗೋಷ್ಠಿ ನಡೆಸಿ ಕಾಂಗ್ರೆಸ್ ಪಕ್ಷ ಈ ನಿರ್ಧಾರ ಪ್ರಕಟಿಸಿದೆ.
ಕಾಂಗ್ರೆಸ್ ಭದ್ರ ಕೋಟೆ ರಾಯ್ ಬರೇಲಿಯಿಂದ ಮೊದಲ ಬಾರಿ ಮತ್ತು ವಯನಾಡು ಕ್ಷೇತ್ರದಿಂದ ರಾಹುಲ್ ಗಾಂಧಿ ಅವರು ಸತತ ಎರಡನೇ ಬಾರಿ ಜಯ ಸಾಧಿಸಿದ್ದರು.52 ರ ಹರೆಯದ ಪ್ರಿಯಾಂಕಾ ವಾದ್ರಾ ಕೇರಳದ ವಯನಾಡಿನಿಂದ ಉಪಚುನಾವಣೆಯಲ್ಲಿ ಕಣಕ್ಕಿಳಿದು ಸಂಸತ್ ಪ್ರವೇಶಿಸಲು ಮುಂದಾಗಿದ್ದಾರೆ.
ಪ್ರಿಯಾಂಕಾ ಮಾತನಾಡಿ ‘ನನಗೆ ವಯನಾಡು ಕ್ಷೇತ್ರವನ್ನು ಪ್ರತಿನಿಧಿಸಲು ಅವಕಾಶ ಸಿಕ್ಕಿರುವುದು ಹೆಮ್ಮೆ ಎನಿಸುತ್ತಿದೆ. ಅಲ್ಲಿಯ ಜನರಿಗೆ ರಾಹುಲ್ ಅನುಪಸ್ಥಿತಿ ಕಂಡು ಬರದಂತೆ ನೋಡಿಕೊಳ್ಳುತ್ತೇನೆ. ಕಠಿನ ಕೆಲಸ ಮಾಡಿ ಎಲ್ಲರನ್ನೂ ಖುಷಿಯಾಗಿರಿಸಿ ಉತ್ತಮ ಜನಪ್ರತಿನಿಧಿ ಎನಿಸಿಕೊಳ್ಳುತ್ತೇನೆ. ರಾಯ್ ಬರೇಲಿ ಮತ್ತು ಅಮೇಥಿ ನಡುವಿನ ಸಂಬಂಧಗಳನ್ನು ಮುರಿಯಲು ಸಾಧ್ಯವಿಲ್ಲ. ವಯನಾಡು ಮತ್ತು ರಾಯ್ ಬರೇಲಿ ಎರಡೂ ಕ್ಷೇತ್ರಗಳ ಪ್ರತಿನಿಷಿಯಾಗಿ ಸಹೋದರನಿಗೆ ಸಹಕಾರ ನೀಡಿ ಕೆಲಸ ಮಾಡುತ್ತೇನೆ ಎಂದು ಹೇಳಿದರು.
ರಾಹುಲ್ ಗಾಂಧಿ ಮಾತನಾಡಿ ‘ ನನಗೆ ವಯನಾಡು ಮತ್ತು ರಾಯ್ ಬರೇಲಿ ಜನರೊಧಿಗೆ ಭಾವನಾತ್ಮಕ ಸಂಬಂಧವಿದೆ. ವಯನಾಡಿನಲ್ಲಿ 5 ವರ್ಷಗಳಿಂದ ಸಂಸದನಾಗಿದ್ದೇನೆ. ಅಲ್ಲಿನ ಜನರ ಪ್ರೀತಿ ಮತ್ತು ಸಹಕಾರಕ್ಕಾಗಿ ಧನ್ಯವಾದ ಹೇಳುತ್ತೇನೆ. ಆಗ್ಗಾಗ್ಗೆ ವಯನಾದಿಗೆ ಭೇಟಿ ನೀಡುತ್ತಿರುತ್ತೇನೆ. ನನಗೆ ರಾಯ್ ಬರೇಲಿಯಲ್ಲಿ ಹಳೆಯ ಸಂಬಂಧವಿದ್ದು ಕ್ಷೇತ್ರವನ್ನು ಮತ್ತೊಮ್ಮೆ ಪ್ರತಿನಿಧಿಸುವ ಅವಕಾಶ ಸಿಕ್ಕಿರುವುದು ಸಂಭ್ರಮ ತಂದಿದೆ. ವಯನಾಡು ಕ್ಷೇತ್ರ ತೊರೆಯುತ್ತಿರುವುದು ಕಠಿನ ನಿರ್ಧಾರ. ನನ್ನ ಮನೆಯ ಬಾಗಿಲು ವಯನಾಡಿನ ಜನರಿಗಾಗಿ ಸದಾ ತೆರೆದಿರುತ್ತದೆ. ಅಲ್ಲಿನ ಪ್ರತಿಯೊಬ್ಬ ಪ್ರಜೆಯನ್ನೂ ನಾನು ಪ್ರೀತಿಸುತ್ತೇನೆ’ ಎಂದು ಹೇಳಿದರು.