ಹೊಸದಿಲ್ಲಿ : ಇದು ಈಗ ಅಧಿಕೃತ. ಇದೇ ಡಿ.16ರಂದು ರಾಹುಲ್ ಗಾಂಧಿ ಅವರು ಕಾಂಗ್ರೆಸ್ ಅಧ್ಯಕ್ಷರಾಗಿ ಪದಗ್ರಹಣ ಮಾಡಲಿದ್ದಾರೆ.
ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಎಂ ರಾಮಚಂದ್ರನ್ ಅವರು ಇಂದು ಸೋಮವಾರ ಮಧ್ಯಾಹ್ನ ಈ ಘೋಷಣೆಯನ್ನು ಮಾಡಿದ್ದಾರೆ.
“ಒಟ್ಟು 89 ನಾಮಪತ್ರ ಪ್ರಸ್ತಾವನೆಗಳು ಸ್ವೀಕೃತವಾಗಿವೆ; ಅವೆಲ್ಲವೂ ಕ್ರಮಬದ್ಧವಾಗಿವೆ. ಕೇವಲ ಒಬ್ಬನೇ ಅಭ್ಯರ್ಥಿ ಇರುವುದರಿಂದ, ರಾಹುಲ್ ಗಾಂಧಿ ಅವರು ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನ ಅಧ್ಯಕ್ಷರಾಗಿ ಚುನಾಯಿತರಾಗಿದ್ದಾರೆ ಎಂದು ನಾನು ಈ ಮೂಲಕ ಘೋಷಿಸ ಬಯಸುತ್ತೇನೆ’ ಎಂದವರು ಪ್ರಕಟಿಸಿದರು.
ರಾಹುಲ್ ಗಾಂಧಿ ಅವರು ತನ್ನ ತಾಯಿ ಸೋನಿಯಾ ಗಾಂಧಿ ಅವರ ಉತ್ತರಾಧಿಕಾರಿಯಾಗಿ ಕಾಂಗ್ರೆಸ್ ಅಧ್ಯಕ್ಷರಾಗಿದ್ದಾರೆ. 2013ರಲ್ಲಿ ರಾಹುಲ್ ಗಾಂಧಿ ಅವರನ್ನು ಪಕ್ಷದ ಉಪಾಧ್ಯಕ್ಷರನ್ನಾಗಿ ಮಾಡಲಾಗಿತ್ತು.
ಸೋನಿಯಾ ಗಾಂಧಿ ಅವರ ಮುಂದುವರಿದ ಅನಾರೋಗ್ಯದಿಂದಾಗಿ ಕಾಂಗ್ರೆಸ್ ಪದಭಾರವು ಈಗ ನೆಹರೂ-ಗಾಂಧಿ ಕುಟಂಬದ ಇನ್ನೊಂದು ಕುಡಿಯಾಗಿ ರಾಹುಲ್ ಗಾಂಧಿ ಅವರ ಹೆಗಲಿಗೇರಿದೆ.
ರಾಹುಲ್ ಗಾಂಧಿ ಅವರು ಸ್ವಾತಂತ್ರ್ಯದ ಬಳಿಕದಲ್ಲಿ ಭಾರತೀಯ ಕಾಂಗ್ರೆಸ್‌ನ ಹದಿನಾರನೇ ಅಧ್ಯಕ್ಷರಾಗಿದ್ದಾರೆ. ಈ ಹುದ್ದೆಯನ್ನು ಹೊಂದುವ ಅವರ ಕುಟುಂಬದ ಐದನೇ ಸದಸ್ಯರಾಗಿದ್ದಾರೆ (ದೇಶಕ್ಕೆ ಸ್ವಾತಂತ್ರ್ಯ ದೊರಕಿದ ಬಳಿಕದ 4ನೇ ಸದಸ್ಯ).