ನವದೆಹಲಿ: ಸಾಮಾನ್ಯ ಪಾಸ್‌ಪೋರ್ಟ್’ ಪಡೆಯಲು ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿಗೆ ಮೂರು ವರ್ಷಗಳ ಕಾಲ ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ)ವನ್ನು ದೆಹಲಿ ನ್ಯಾಯಾಲಯ ಶುಕ್ರವಾರ ನೀಡಿದೆ.
ಸಂಸದ ಸ್ಥಾನದಿಂದ ಅನರ್ಹ ಆಗಿರುವ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಅವರು ತಮಗಿದ್ದ ವಿಶೇಷ ಸವಲತ್ತುಗಳನ್ನು ಕಳೆದುಕೊಂಡಿದ್ದಾರೆ.
ರಾಹುಲ್ ಗಾಂಧಿ ಅವರು ತಮ್ಮ ಅನರ್ಹತೆಯ ನಂತರ ತಮ್ಮ ರಾಜತಾಂತ್ರಿಕ ಪಾಸ್ಪೋರ್ಟ್ನ್ನು ಸರ್ಕಾರಕ್ಕೆ ಒಪ್ಪಿಸಿದ ನಂತರ ಅವರು ನಿರಾಕ್ಷೇಪಣಾ ಪ್ರಮಾಣಪತ್ರ (ಎನ್‌ಒಸಿ) ಗಾಗಿ ನ್ಯಾಯಾಲಯಕ್ಕೆ ಮನವಿ ಮಾಡಿದ್ದಾರೆ. ನ್ಯಾಯಲಯಕ್ಕೆ 10 ವರ್ಷಗಳ ಅನುಮತಿ ನೀಡಬೇಕು ಎಂದು ಮನವಿ ಮಾಡಿದ ರಾಹುಲ್ , ಇದಕ್ಕೆ ಒಪ್ಪದ ನ್ಯಾಯಲಯ 3 ವರ್ಷಗಳ ಕಾಲ ಅನುಮತಿ ನೀಡಿದೆ.
ರಾಹುಲ್ ಗಾಂಧಿ ಅವರು ನ್ಯಾಷನಲ್ ಹೆರಾಲ್ಡ್ ಪ್ರಕರಣದ ಆರೋಪಿಯಾಗಿದ್ದಾರೆ. ಅಕ್ರಮ ಹಣ ವರ್ಗಾವಣೆ ಪ್ರಕರಣ ಹಾಗೂ ಹಣಕಾಸು ದುರ್ಬಳಕೆ ಆರೋಪಗಳು ರಾಹುಲ್ ಗಾಂಧಿ ಅವರ ಮೇಲಿದೆ. ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿ ಅವರು ರಾಹುಲ್ ವಿರುದ್ಧ ಪ್ರಕರಣ ದಾಖಲಿಸಿದ್ದರು.
ನಿರಾಕ್ಷೇಪಣಾ ಪ್ರಮಾಣಪತ್ರವನ್ನು ಕೋರಿ ರಾಹುಲ್ ಗಾಂಧಿಯವರ ಮನವಿಗೆ ಶುಕ್ರವಾರದೊಳಗೆ ಉತ್ತರವನ್ನು ಸಲ್ಲಿಸುವಂತೆ ನ್ಯಾಯಾಲಯವು ಬುಧವಾರದಂದು ಬಿಜೆಪಿ ನಾಯಕ ಸುಬ್ರಹ್ಮಣ್ಯನ್ ಸ್ವಾಮಿಯವರಿಗೆ ಸೂಚಿಸಿತ್ತು.
ಶುಕ್ರವಾರದ ವಿಚಾರಣೆ ವೇಳೆ ಮೆಟ್ರೋಪಾಲಿಟನ್ ನ್ಯಾಯಾಲಯದ ಹೆಚ್ಚುವರಿ ಮುಖ್ಯ ನ್ಯಾಯಮೂರ್ತಿ ವೈಭವ್ ಮೆಹ್ತಾ ಅವರು ರಾಹುಲ್ ಗಾಂಧಿ ಅವರಿಗೆ ಪ್ರಯಾಣ ಮಾಡುವ ಮೂಲಭೂತ ಹಕ್ಕು ಇದೆ ಎಂದು ಅಭಿಪ್ರಾಯಪಟ್ಟರು. ಇದಕ್ಕೆ ನಾವು ನಿರ್ಬಂಧ ಹೇರಲು ಸಾಧ್ಯವಿಲ್ಲ ಎಂದು ಹೇಳಿದ ನ್ಯಾಯಮೂರ್ತಿಗಳು ತೀರ್ಪು ಪ್ರಕಟಿಸಿದ್ದಾರೆ.