ಧನೇರಾ, ಗುಜರಾತ್ : ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರು ಇಂದು ಶುಕ್ರವಾರ ಗುಜರಾತ್‌ನ ಬನಾಸ್‌ಕಾಂತಾ ಜಿಲ್ಲೆಯ ಪ್ರವಾಹ ಪೀಡಿತ ಪಟ್ಟಣ ಧನೇರಾ ಗೆ ಭೇಟಿ ನೀಡಿದ ಸಂದರ್ಭ ಜನರು ರಾಹುಲ್‌ಗೆ ಕರಿ ಪತಾಕೆ ತೋರಿಸಿ ಪ್ರಧಾನಿ ನರೇಂದ್ರ ಮೋದಿ ಪರ ಘೋಷಣೆಗಳನ್ನು ಕೂಗಿದರು.
ಇದರಿಂದ ಕುಪಿತರಾದ ರಾಹುಲ್ ಗಾಂಧಿ ಒಡನೆಯೇ ಅಲ್ಲಿಂದ ತೆರಳಿದರು. ಅವರು ಮರುಳುವ ಸಂದರ್ಭದಲ್ಲಿ ಅವರ ಕಾರಿಗೆ ಕಲ್ಲೆಸೆಯಲಾಗಿ ಕಾರಿನ ಕಿಟಕಿ ಗಾಜುಗಳಿಗೆ ಹಾನಿಯಾಯಿತು.
ರಾಜಸ್ಥಾನದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ಕೊಟ್ಟು ಅಲ್ಲಿಂದ ಗುಜರಾತ್‌ಗೆ ಹಾರಿ ಬಂದ ರಾಹುಲ್ ಧನೇರಾ ಪಟ್ಟಣಕ್ಕೆ ಭೇಟಿ ಕೊಟ್ಟರು. ಅದಕ್ಕೆ ಮುನ್ನ ಮನೋತ್ರಾ ಗ್ರಾಮಕ್ಕೆ ತೆರಳಿ ಅಲ್ಲಿ ಗ್ರಾಮಸ್ಥರನ್ನು ಉದ್ದೇಶಿಸಿ ಮಾತನಾಡಿದರು. ಬಳಿಕ ಕೃಷಿ ಮಾರುಕಟ್ಟೆ ಯಾರ್ಡಿಗೆ ಭೇಟಿ ನೀಡಿ ಅಲ್ಲಿದ್ದ ರೈತರನ್ನು ಹಾಗೂ ಕೃಷಿ ವ್ಯಾಪಾರಿಗಳನ್ನು ಭೇಟಿಯಾಗಿ ಅವರ ಕಷ್ಟ ಸುಖಗಳನ್ನು ಆಲಿಸಿದರು.
ಅದಾಗಿ ಧನೇರಾ ಪಟ್ಟಣದ ಲಾಲ್ ಚೌಕ್‌ಗೆ ಆಗಮಿಸಿದ ರಾಹುಲ್, ಅಲ್ಲಿ ಜಮಾಯಿಸಿದ್ದ ಜನರು ತಮಗೆ ಕರಿಪತಾಕೆಯನ್ನು ತೋರಿಸಿದಾಗ ಗೊಂದಲಕ್ಕೆ ಗುರಿಯಾದರು.
ರಾಹುಲ್‌ಗೆ ಕರಿಪತಾಕೆ ತೋರಿ ಪ್ರತಿಭಟಿಸಿದ ಜನರು, ಪ್ರಧಾನಿ ಮೋದಿ ಪರವಾಗಿ ಘೋಷಣೆಗಳನ್ನು ಕೂಗಿದರು. ಆಗ ರಾಹುಲ್ ಅಲ್ಲಿಂದ ಒಡನೆಯೇ ತೆರಳಿದರು. ಪೊಲೀಸರು ಲಾಠೀ ಚಾರ್ಜ್ ಮಾಡಿ ಜನರನ್ನು ಚದುರಿಸಿದರು.