ನವದೆಹಲಿ: ಮೋದಿ ಉಪನಾಮ ಟೀಕೆ ಪ್ರಕರಣಕ್ಕೆ ಸಂಬಂಧಿಸಿ ಸೂರತ್ ನ್ಯಾಯಾಲಯವು ಕಾಂಗ್ರೆಸ್ ಮುಖಂಡ ರಾಹುಲ್‌ಗಾಂಧಿ ಅವರಿಗೆ ವಿಧಿಸಿದ್ದ 2 ವರ್ಷಗಳ ಜೈಲು ಶಿಕ್ಷೆ ಪ್ರಕರಣಕ್ಕೆ ಸುಪ್ರಿಂಕೋರ್ಟ್ ತಡೆಯಾಜ್ಞೆ ವಿಧಿಸಿದ ಬೆನ್ನಲ್ಲೇ, ರಾಹುಲ್ ಗಾಂಧಿಯವರ ಸಂಸತ್ ಸದಸ್ಯತ್ವವನ್ನು ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಅವರು ಪುನಃಸ್ಥಾಪಿಸಿದ್ದಾರೆ.
ರಾಹುಲ್ ಗಾಂಧಿ ಅವರ ‘ಮೋದಿ ಉಪನಾಮ’ ಟೀಕೆಗಳಿಗಾಗಿ ಮಾನನಷ್ಟ ಮೊಕದ್ದಮೆಯಲ್ಲಿ ಗುಜರಾತ್ ನ್ಯಾಯಾಲಯವು ಅವರನ್ನು ದೋಷಿ ಎಂದು ಘೋಷಿಸಿದ ನಂತರ ಮಾರ್ಚ್ 23 ರಂದು ಲೋಕಸಭೆಯ ಸಂಸದರಾಗಿ ಅನರ್ಹಗೊಳಿಸಲಾಯಿತು ಮತ್ತು ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಲಾಯಿತು.
ಮಾನನಷ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್‍ನ ಸೂರತ್ ಮ್ಯಾಜಿಸ್ಟ್ರೇಟ್ ಕೋರ್ಟ್ ವಿಧಿಸಿದ್ದ ಶಿಕ್ಷೆಗೆ ತಡೆ ನೀಡಲು ನಿರಾಕರಿಸಿದ್ದ ಗುಜರಾತ್ ಹೈಕೋರ್ಟ್ ಆದೇಶ ಪ್ರಶ್ನಿಸಿ ರಾಹುಲ್ ಗಾಂಧಿ ಸುಪ್ರೀಂ ಕೋರ್ಟ್‍ಗೆ ಮೇಲ್ಮನವಿ ಸಲ್ಲಿಸಿದ್ದರು. ಆದೇಶದ ವಿರುದ್ಧ ಜು.15 ರಂದು ಸುಪ್ರೀಂಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮೂರ್ತಿಗಳಾದ ಬಿ.ಆರ್ ಗವಾಯಿ, ಪಿ.ಎಸ್ ನರಸಿಂಹ ಮತ್ತು ಸಂಜಯ್ ಕುಮಾರ್ ಅವರನ್ನೊಳಗೊಂಡ ಪೀಠವು ಪ್ರಕರಣದ ವಿಚಾರಣೆ ನಡೆಸಿತು. ಈ ವೇಳೆ ಸೂರತ್ ನ್ಯಾಯಾಲಯದ ಆದೇಶಕ್ಕೆ ತಡೆ ನೀಡಿತ್ತು.
ಸುಪ್ರೀಂ ಆದೇಶ ಬೆನ್ನಲ್ಲೇ ಸೋಮವಾರ ಲೋಕಸಭೆಯ ಸ್ಪೀಕರ್ ಸದಸ್ಯತ್ವವನ್ನ ಮರಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಅವರು ಲೋಕಸಭೆ ಅಧಿವೇಶನಕ್ಕೆ ಹಾಜರಾಗಬಹುದಾಗಿದೆ.
ಇದನ್ನು ಓದಿ: Spandana: ನಟ ವಿಜಯ್ ರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
ರಾಹುಲ್ ಅವರು 2019ರ ಏಪ್ರಿಲ್ 13 ರಂದು ಕೋಲಾರದಲ್ಲಿ ನಡೆದ ಲೋಕಸಭಾ ಚುಣಾವಣಾ ಪ್ರಚಾರ ಸಭೆಯಲ್ಲಿ ಭಾಷಣ ಮಾಡಿದ್ದ ವೇಳೆ ಎಲ್ಲಾ ಕಳ್ಳರಿಗೆ ಮೋದಿ ಎಂಬ ಉಪನಾಮ ಏಕಿದೆ ಎಂದು ಪ್ರಶ್ನಿಸಿದ್ದರು. ಈ ಹೇಳಿಕೆಗೆ ಸಂಬಂಧಿಸಿ ಗುಜರಾತ್ ಶಾಸಕ ಪೂರ್ಣೇಶ್ ಮೋದಿ ಅವರು, ರಾಹುಲ್ ಗಾಂಧಿ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲಿಸಿದ್ದರು.