ನವದೆಹಲಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಶುಕ್ರವಾರದ ಗಣರಾಜ್ಯ ದಿನ ಕಾರ್ಯಕ್ರಮದಲ್ಲಿ ಆರನೇ ಸಾಲಿನಲ್ಲಿ ಆಸನ ನಿಗದಿ ಮಾಡಿರುವ ಬಗ್ಗೆ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ವಾಗ್ವಾದ ಬಿರುಸಾಗಿದೆ.
ಶನಿವಾರ ಮಾತನಾಡಿದ ಬಿಜೆಪಿ ವಕ್ತಾರ ಜಿ.ವಿ.ಎಲ್.ನರಸಿಂಹ ರಾವ್, ಕಾಂಗ್ರೆಸ್ ಅಧ್ಯಕ್ಷರು ತನ್ನನ್ನು ಸೂಪರ್ ವಿವಿಐಪಿ ಎಂದು ತಿಳಿದು ಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.
“ಶಿಷ್ಟಾಚಾರ ಪ್ರಕಾರವೇ ಕೇಂದ್ರದ ವತಿಯಿಂದ ಆಸನ ನಿಗದಿ ಮಾಡಲಾಗಿದೆ. ಕಾಂಗ್ರೆಸ್ ನೇತೃತ್ವದ ಸರ್ಕಾರ ಇದ್ದಾಗ ರಾಜನಾಥ್ ಸಿಂಗ್ ಸೇರಿದಂತೆ ಬಿಜೆಪಿಯ ಹಿರಿಯ ನಾಯಕರನ್ನು ಅವಗಣನೆ ಮಾಡಲಾಗಿತ್ತುೆ’ ಎಂದು ರಾವ್ ದೂರಿದ್ದಾರೆ.
“133 ವರ್ಷಗಳ ಭವ್ಯ ಇತಿಹಾಸ ಇದೆ ಎಂದು ಹೇಳಿಕೊಳ್ಳುವ ಕಾಂಗ್ರೆಸ್ ಇನ್ನೂ ಕೂಡ ಉನ್ನತ ಸ್ತರದ ಯೋಚನೆಯಲ್ಲಿ ಮುಳುಗಿದೆಯೇ ಹೊರತು, ಆ ಪಕ್ಷಕ್ಕೆ ಪ್ರಜಾಪ್ರಭುತ್ವದಲ್ಲಿ ನಂಬಿಕೆಯಿಲ್ಲ. ಇದೊಂದು ಕೀಳು ಮಟ್ಟದ ನಿಲುವು’ ಬಿಜೆಪಿ ವಕ್ತಾರ ಹೇಳಿದ್ದಾರೆ.
ಬಿಜೆಪಿಗೆ ತಿರುಗೇಟು ನೀಡಿರುವ ಕಾಂಗ್ರೆಸ್‌ನ ರಾಜ್ಯಸಭಾ ಸದಸ್ಯ ಬಿ.ಕೆ.ಹರಿಪ್ರಸಾದ್, ಪ್ರಧಾನಿ ನರೇಂದ್ರ ಮೋದಿ ಹೊಂದಿರುವ ದರ್ಪವೇ ಬಿಜೆಪಿ ನಾಯಕರನ್ನು ಮಾತನಾಡಿಸುತ್ತಿದೆ ಎಂದಿದ್ದಾರೆ.