ಹೊಸದಿಲ್ಲಿ: ಕೋವಿಡ್-19 ನಡುವೆಯೇ ‘ಜೈವಿಕ ಸುರಕ್ಷಾ ವಲಯ’ದಲ್ಲಿ ಕ್ರಿಕೆಟನ್ನು ಪುನರಾರಂಭಿಸಬೇಕೆಂಬುದು ಅವಾಸ್ತವಿಕ ಎಂಬುದಾಗಿ ಮಾಜಿ ಕ್ರಿಕೆಟಿಗ, ‘ಗೋಡೆ’ ಖ್ಯಾತಿಯ ರಾಹುಲ್ ದ್ರಾವಿಡ್ ಅಭಿಪ್ರಾಯಪಟ್ಟಿದ್ದಾರೆ.
ಅಕಸ್ಮಾತ್ ಎಲ್ಲ ಸುರಕ್ಷಾ ನಿಯಮವನ್ನು ಪಾಲಿಸಿಯೂ ಪಂದ್ಯದ ನಡುವೆ ಆಟಗಾರನೊಬ್ಬನಿಗೆ ‘ಪಾಸಿಟಿವ್’ ಬಂದರೆ ಇದಕ್ಕೆ ಹೊಣೆ ಯಾರು ಎಂಬ ಆತಂಕವನ್ನೂ ಅವರು ಹೊರಗೆಡಹಿದ್ದಾರೆ.
ಕೋವಿಡ್ ಸಂಪೂರ್ಣ ನಿರ್ಮೂಲನೆ ಆಗುವುದನ್ನು ಕಾಯದ ‘ಇಂಗ್ಲೆಂಡ್ ಮತ್ತು ವೇಲ್ಸ್ ಕ್ರಿಕೆಟ್ ಮಂಡಳಿ’ (ಇಸಿಬಿ) ಜುಲೈ ತಿಂಗಳಲ್ಲಿ, ಜೈವಿಕ ಸುರಕ್ಷಾ ಪರಿಸರದಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ ಸರಣಿಯನ್ನು ನಡೆಸಲು ಉದ್ದೇಶಿಸಿದ್ದನ್ನು ಪ್ರಶ್ನಿಸಿ ದ್ರಾವಿಡ್ ಈ ಹೇಳಿಕೆ ನೀಡಿದ್ದಾರೆ.
‘ಈ ಹಂತದಲ್ಲಿ ಇಸಿಬಿ ಇಂಥದೊಂದು ಯೋಜನೆಗೆ ಮುಂದಾಗಿರುವುದು ಸೂಕ್ತವಲ್ಲ. ಬೇರೆ ಕ್ರಿಕೆಟ್ ಇಲ್ಲದ ಕಾರಣ ಅವರು ಇಂಥದೊಂದು ಯೋಜನೆ ಹಾಕಿಕೊಂಡಿರಬಹುದು. ಇದು ಅವಾಸ್ತವಿಕ ಎಂದೇ ನನ್ನ ಅಭಿಪ್ರಾಯ’ ಎಂದು ದ್ರಾವಿಡ್ ವೆಬ್ ಕಾರ್ಯಕ್ರಮವೊಂದರಲ್ಲಿ ಹೇಳಿದರು.
‘ಈಗಿನ ಕ್ರಿಕೆಟ್ ಕ್ಯಾಲೆಂಡರ್‌ನಲ್ಲಿ ಇಂಥದೊಂದು ಕ್ರಿಕೆಟ್ ಯೋಜನೆಯನ್ನು ಹಮ್ಮಿಕೊಳ್ಳಲು ಎಲ್ಲರಿಗೂ ಸಾಧ್ಯವಾಗದು. ಇಲ್ಲಿ ಪ್ರಯಾಣ, ಪ್ರವಾಸ ನಡೆಸಬೇಕಾಗುತ್ತದೆ. ಬಹಳಷ್ಟು ಮಂದಿ ಸೇರುತ್ತಾರೆ. ಹೀಗಾಗಿ ಇದು ಅವಾಸ್ತವಿಕ ಎನಿಸಿಕೊಳ್ಳುತ್ತದೆ’ ಎಂದರು.
ಎಲ್ಲರಿಗೂ ಕ್ವಾರಂಟೈನ್!
ಇದೇ ಸಂದರ್ಭದಲ್ಲಿ ರಾಹುಲ್ ದ್ರಾವಿಡ್ ಸಂಭಾವ್ಯ ಆತಂಕವೊಂದರ ಕುರಿತೂ ಪ್ರಸ್ತಾವಿಸಿದರು. ‘ನೀವು ಎಲ್ಲ ಪರೀಕ್ಷೆ, ಕ್ವಾರಂಟೈನ್ ಮುಗಿಸಿ ಆಡಲಿಳಿಯುತ್ತೀರಿ. ಅಕಸ್ಮಾತ್ ಟೆಸ್ಟ್ ಪಂದ್ಯದ ಎರಡನೇ ದಿನ ಒಬ್ಬರಲ್ಲಿ ಪಾಸಿಟಿವ್ ಕಂಡುಬಂತು, ಆಗೇನು ಗತಿ? ಸಾರ್ವಜನಿಕ ಆರೋಗ್ಯ ಇಲಾಖೆಯವರು ಎಲ್ಲರನ್ನೂ ಕ್ವಾರಂಟೈನ್ ಮಾಡುತ್ತಾರೆ. ಟೆಸ್ಟ್ ಪಂದ್ಯ ಅಲ್ಲಿಗೇ ನಿಲ್ಲುತ್ತದೆ. ಆಗ ಇಡೀ ಸರಣಿ ನಿಲ್ಲದಂತೆ ಏನು ಮಾಡಬಹುದು ಎಂಬ ಪರಿಹಾರ ಹುಡುಕಬೇಕಾಗುತ್ತದೆ…’ ಎಂದರು.