Advertisement

ಭರ್ಜರಿ ಜಯದೊಂದಿಗೆ ರಾಹುಲ್-ರೋಹಿತ್ ಯುಗದ ಶುಭಾರಂಭ

08:45 AM Nov 18, 2021 | Team Udayavani |

ಜೈಪುರ: ಪ್ರವಾಸಿ ನ್ಯೂಜಿಲ್ಯಾಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನು ಗೆಲ್ಲುವ ಮೂಲಕ ಕೊಚ್ ರಾಹುಲ್ ದ್ರಾವಿಡ್ ಮತ್ತು ನಾಯಕ ರೋಹಿತ್ ಶರ್ಮಾ ಯುಗದ ಶುಭಾರಂಭವಾಗಿದೆ.

Advertisement

ಬ್ಯಾಟಿಂಗಿಗೆ ಇಳಿಸಲ್ಪಟ್ಟ ನ್ಯೂಜಿಲ್ಯಾಂಡ್‌ ಮಾರ್ಟಿನ್‌ ಗಪ್ಟಿಲ್‌, ಮಾರ್ಕ್‌ ಚಾಪ್‌ಮನ್‌ ಅವರ ಅರ್ಧ ಶತಕಗಳ ನೆರವಿನಿಂದ 6 ವಿಕೆಟಿಗೆ 164 ರನ್‌ ಗಳಿಸಿತು. ಗುರಿ ಬೆನ್ನತ್ತಿದ ಭಾರತ 19.4 ಓವರ್‌ಗಳಲ್ಲಿ 5 ವಿಕೆಟಿಗೆ 166 ರನ್‌ ಬಾರಿಸಿತು.

ಕಿವೀಸ್‌ ಆರಂಭ ಆಘಾತಕಾರಿಯಾಗಿತ್ತು. ಟಿ20 ವಿಶ್ವಕಪ್‌ ಸೆಮಿಫೈನಲ್‌ ಹೀರೋ ಡ್ಯಾರಿಲ್‌ ಮಿಚೆಲ್‌ “ಗೋಲ್ಡನ್‌ ಡಕ್‌’ ಸಂಕಟಕ್ಕೆ ಸಿಲುಕಿದರು. ಭುವನೇಶ್ವರ್‌ ಕುಮಾರ್‌ ಪಂದ್ಯದ ಮೊದಲ ಓವರಿನ 3ನೇ ಎಸೆತದಲ್ಲೇ ಆವರನ್ನು ಕ್ಲೀನ್‌ಬೌಲ್ಡ್‌ ಮಾಡಿದರು. ಒನ್‌ಡೌನ್‌ ಬ್ಯಾಟ್ಸ್‌ಮನ್‌ ಮಾರ್ಕ್‌ ಚಾಪ್‌ಮನ್‌ ತಂಡವನ್ನು ಮೇಲೆತ್ತುವ ಪ್ರಯತ್ನದಲ್ಲಿ ಧಾರಾಳ ಯಶಸ್ಸು ಕಾಣತೊಡಗಿದರು. ಪವರ್‌ ಪ್ಲೇ ಅವಧಿಯ ಬಹುತೇಕ ಎಸೆತಗಳನ್ನು ಎದುರಿಸಿ ಬಿರುಸಿನ ಆಟವಾಡಿದರು. ಮೊದಲ 6 ಓವರ್‌ಗಳಲ್ಲಿ ಕಿವೀಸ್‌ 41 ರನ್‌ ಮಾಡಿತು. ಇದರಲ್ಲಿ ಚಾಪ್‌ಮನ್‌ ಪಾಲೇ 30 ರನ್‌ ಆಗಿತ್ತು. ಗಪ್ಟಿಲ್‌ ಇನ್ನೊಂದೆಡೆ ನಿಂತು ಆಡುತ್ತ ಜತೆಗಾರನಿಗೆ ಉತ್ತಮ ಬೆಂಬಲ ನೀಡತೊಡಗಿದರು. ಭಾರತದ ಬೌಲರ್‌ಗಳ ಮೇಲೆ ಒತ್ತಡ ಹೆಚ್ಚುತ್ತ ಹೋಯಿತು. 10 ಓವರ್‌ ಮುಗಿಯುವಾಗ ಕಿವೀಸ್‌ ಸ್ಕೋರ್‌ ಒಂದೇ ವಿಕೆಟಿಗೆ 65ಕ್ಕೆ ಏರಿತ್ತು.

ಅಕ್ಷರ್‌ ಪಟೇಲ್‌ ಎಸೆತವನ್ನು ಸಿಕ್ಸರ್‌ಗೆ ಬಡಿದಟ್ಟುವ ಮೂಲಕ ಮಾರ್ಕ್‌ ಚಾಪ್‌ಮನ್‌ ನ್ಯೂಜಿಲ್ಯಾಂಡ್‌ ಪರ ತಮ್ಮ ಚೊಚ್ಚಲ ಅರ್ಧ ಶತಕ ಪೂರ್ತಿಗೊಳಿಸಿದರು. ಅವರ ಇನ್ನೊಂದು ಟಿ20 ಫಿಫ್ಟಿ ಹಾಂಕಾಂಗ್‌ ಪರ ದಾಖಲಾಗಿತ್ತು.

ಇದನ್ನೂ ಓದಿ:365 ದಿನಗಳಲ್ಲಿ 32 ಕೋಟಿ ಸ್ಮಾರ್ಟ್‌ಫೋನ್‌ ಬಳಕೆದಾರರು ಸೇರ್ಪಡೆ!

Advertisement

10ನೇ ಓವರ್‌ ಬಳಿಕ ಗಪ್ಟಿಲ್‌ ಕೂಡ ಮುನ್ನುಗ್ಗಿ ಬೀಸತೊಡಗಿದರು. 18ನೇ ಓವರ್‌ ತನಕ ಕ್ರೀಸ್‌ ಆಕ್ರಮಿಸಿಕೊಂಡ ಅವರು 42 ಎಸೆತಗಳಿಂದ 70 ರನ್‌ ಬಾರಿಸಿದರು. ಸಿಡಿಸಿದ್ದು 4 ಸಿಕ್ಸರ್‌ ಹಾಗೂ 3 ಫೋರ್‌. ಗಪ್ಟಿಲ್‌-ಚಾಮ್‌ಮನ್‌ ಜೋಡಿಯಿಂದ 2ನೇ ವಿಕೆಟಿಗೆ 109 ರನ್‌ ಹರಿದು ಬಂತು. ಇದು ಎಲ್ಲ ವಿಕೆಟ್‌ಗಳಿಗೂ ಅನ್ವಯವಾಗುವಂತೆ ಭಾರತದ ವಿರುದ್ಧ ನ್ಯೂಜಿಲ್ಯಾಂಡ್‌ ದಾಖಲಿಸಿದ ಅತೀ ದೊಡ್ಡ ಜತೆಯಾಟವಾಗಿದೆ. ಅಂತಿಮವಾಗಿ ಕಿವೀಸ್ 20 ಓವರ್ ನಲ್ಲಿ ಆರು ವಿಕೆಟ್ ಗೆ 164 ರನ್ ಗಳಿಸಿತು.

ಸಿಡಿದ ಸೂರ್ಯಕುಮಾರ್‌: ಮೂರನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಅವರ ಸ್ಫೋಟಕ ಬ್ಯಾಟಿಂಗ್‌ ಭಾರತದ ಸರದಿಯ ಆಕರ್ಷಣೆ ಎನಿಸಿತು. 40 ಎಸೆತ ಎದುರಿಸಿದ ಸೂರ್ಯ 6 ಬೌಂಡರಿ ಹಾಗೂ 3 ಸಿಕ್ಸರ್‌ ನೆರವಿನಿಂದ 62 ರನ್‌ ಚಚ್ಚಿದರು. ನಾಯಕ ರೋಹಿತ್‌ ಶರ್ಮ 36 ಎಸೆತಗಳಿಂದ 48 ರನ್‌ ಹೊಡೆದರು (5 ಬೌಂಡರಿ, 2 ಸಿಕ್ಸರ್‌). ಕೆ.ಎಲ್. ರಾಹುಲ್‌ ಗಳಿಕೆ 15 ರನ್‌.

ರಾಹುಲ್‌ ಅವರೊಂದಿಗೆ ಮೊದಲ ವಿಕೆಟಿಗೆ 5.1 ಓವರ್‌ಗಳಿಂದ 50 ರನ್‌ ಪೇರಿಸಿದ ರೋಹಿತ್‌, ದ್ವಿತೀಯ ವಿಕೆಟಿಗೆ ಸೂರ್ಯಕುಮಾರ್‌ ಜತೆಗೂಡಿ 59 ರನ್‌ ಹೊಡೆದರು. ಟ್ರೆಂಟ್‌ ಬೌಲ್ಟ್ ಈ ಜೋಡಿಯನ್ನು ಬೇರ್ಪಡಿಸಿದರು.

ಅಂತಿಮ ಓವರ್‌ನಲ್ಲಿ 10 ರನ್‌ ತೆಗೆಯುವ ಸವಾಲು ಭಾರತಕ್ಕೆ ಎದುರಾಯಿತು. ಡ್ಯಾರಿಲ್‌ ಮಿಚೆಲ್‌ ಅವರ ಈ ಓವರ್‌ನ ಆರಂಭದಲ್ಲಿ ವೆಂಕಟೇಶ್‌ ಅಯ್ಯರ್‌ ಹಾಗೂ ಕೊನೆಯಲ್ಲಿ ರಿಷಭ್‌ ಪಂತ್‌ ಬೌಂಡರಿ ಬಾರಿಸಿ ತಂಡದ ಗೆಲುವನ್ನು ಸಾರಿದರು.

ಸೂರ್ಯಕುಮಾರ್ ಯಾದವ್ ಅವರು ಪಂದ್ಯಶ್ರೇಷ್ಠ ಪ್ರಶಸ್ತಿ ಪಡೆದರು. ಸರಣಿಯ 2ನೇ ಪಂದ್ಯ ಶುಕ್ರವಾರ ರಾಂಚಿಯಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next