ಗುರುವಾರದಿಂದ ಆರಂಭವಾಗಲಿರುವ ಭಾರತ ಮತ್ತು ವೆಸ್ಟ್ ಇಂಡೀಸ್ ಟೆಸ್ಟ್ ಸರಣಿಗೆ ವೆಸ್ಟ್ ಇಂಡೀಸ್ ದೈತ್ಯ ದೇಹಿ ಆಟಗಾರನೋರ್ವರನ್ನು ಆಯ್ಕೆ ಮಾಡಿದೆ. ಬರೋಬ್ಬರಿ 140 ಕೆಜಿ ತೂಗುವ ರಕೀಮ್ ಕಾರ್ನವಾಲ್ ಭಾರತ ವಿರುದ್ಧ ಟೆಸ್ಟ್ ಪದಾರ್ಪಣೆ ಮಾಡುವುದು ಬಹುತೇಕ ಖಚಿತವಾಗಿದೆ.
26ರ ಹರೆಯದ ಕಾರ್ನವಾಲ್ ಆಂಟಿಗುವಾ ಮೂಲದ ಆಟಗಾರ 2014ರಲ್ಲಿ ಪ್ರಥಮ ದರ್ಜೆ ಕ್ರಿಕೆಟ್ ಗೆ ಕಾಲಿರಿಸಿದ್ದರು. ಪ್ರಥಮ ದರ್ಜೆ ಕ್ರಿಕೆಟ್, ವೆಸ್ಟ್ ಇಂಡೀಸ್ ಎ ತಂಡ ಮತ್ತು ಕೆರಿಬಿಯನ್ ಪ್ರೀಮಿಯರ್ ಲೀಗ್ ನಲ್ಲಿ ಮಿಂಚು ಹರಿಸಿರುವ ಈ ವಿಂಡೀಸ್ ದೈತ್ಯ ಅಂತಾರಾಷ್ಟ್ರೀಯ ಕ್ರಿಕೆಟ್ ನಲ್ಲಿ ತನ್ನ ಛಾಪು ಮೂಡಿಸಲು ಅವಕಾಶಕ್ಕಾಗಿ ಕಾಯುತ್ತಿದ್ದಾರೆ.
ಬಲಗೈ ಬ್ಯಾಟಿಂಗ್ ಮತ್ತು ಬಲಗೈ ಆಫ್ ಸ್ಪಿನ್ನರ್ ಆಗಿರುವ ಕಾರ್ನವಾಲ್ ಉತ್ತಮ ಆಲ್ ರೌಂಡರ್. ಪ್ರಥಮ ದರ್ಜೆ ಕ್ರಿಕೆಟ್ ನಲ್ಲಿ 55 ಪಂದ್ಯವಾಡಿರುವ ಇವರು ಒಂದು ಶತಕ ಸೇರಿದಂತೆ 2224 ರನ್ ಗಳಿಸಿದ್ದಾರೆ. ಬೌಲಿಂಗ್ ನಲ್ಲಿ ಮಿಂಚು ಹರಿಸಿರುವ ಇವರು 17 ಐದು ವಿಕೆಟ್ ಗೊಂಚಲುಗಳ ಸಹಿತ 260 ವಿಕೆಟ್ ಪಡೆದಿದ್ದಾರೆ.
2016ರಲ್ಲಿ ಭಾರತ ವಿರುದ್ದ ವೆಸ್ಟ್ ಇಂಡೀಸ್ ಅಧ್ಯಕ್ಷರ ಇಲೆವೆನ್ ತಂಡದ ಪರವಾಗಿ ಆಡಿದ್ದ ಕಾರ್ನವಾಲ್ 41 ರನ್ ಮತ್ತು ಐದು ವಿಕೆಟ್ ಪಡೆದು ಮಿಂಚಿದ್ದರು. ಅದರಲ್ಲೂ ಚೇತೇಶ್ವರ ಪೂಜಾರ, ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ ವಿಕೆಟ್ ಪಡೆಯುವಲ್ಲಿ ಸಪಲರಾಗಿದ್ದರು.
ದಕ್ಷಿಣ ಆಫ್ರಿಕಾದ ಜ್ಯಾಕ್ ಕ್ಯಾಲಿಸ್ ಅವರು ತನ್ನ ನೆಚ್ಚಿನ ಆಟಗಾರ ಎನ್ನುವ ರಕೀಮ್, ಬಿಯಾನ್ ಲಾರಾ ಅವರ ಟೆಸ್ಟ್ 400 ರನ್ ಇನ್ನಿಂಗ್ಸ್ ನೋಡಿ ಪ್ರಭಾವಕ್ಕೊಳಗಾಗಿರುವುದು ಎನ್ನುತ್ತಾರೆ.