ಮುದ್ದೇಬಿಹಾಳ: ಇಲ್ಲಿನ ಆನ್‌ಲೈನ್ ಗ್ರಾಹಕ ಸಿದ್ದರಾಜ ಹೊಳಿ ಎನ್ನುವವರಿಗೆ ಅವರು ಬುಕ್ ಮಾಡಿದ್ದ ಸೀರೆ ಬದಲು ಪಾರ್ಸಲ್‌ನಲ್ಲಿ ಚಿಂದಿಬಟ್ಟೆ ಇಟ್ಟು ವಂಚಿಸಿದ ಘಟನೆ ಶುಕ್ರವಾರ ಬೆಳಕಿಗೆ ಬಂದಿದ್ದು ಈ ಕುರಿತು ಸಿದ್ದರಾಜ ಅವರು ಇಲ್ಲಿನ ಪೊಲೀಸ್ ಠಾಣೆಯಲ್ಲಿ ಆನ್‌ಲೈನ್ ಕಂಪನಿ ವಿರುದ್ಧ ವಂಚನೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ.
ಸಿದ್ದರಾಜ ಅವರು ಜಯ ಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷರಾಗಿದ್ದು ವಾರದ ಹಿಂದೆ ಫೇಸ್‌ಬುಕ್ ನೋಡುತ್ತಿದ್ದಾಗ
ಸೀರೆ ಕುರಿತ ಜಾಹಿರಾತೊಂದು ಕಂಡು ಬಂದಿದೆ. ಅದರಲ್ಲಿ 1560 ರೂ. ಕಿಮ್ಮತ್ತಿನ ಸೀರೆಯನ್ನು 649 ರೂ.ಗೆ ಡಿಸ್ಕೌಂಟ್
ರೂಪದಲ್ಲಿ ಕೊಡುವುದಾಗಿ ತಿಳಿಸಲಾಗಿತ್ತು. ಇದರಿಂದಾಗ ಆಕರ್ಷಣೆಗೊಂಡ ಅವರು ತಮ್ಮ ಪತ್ನಿಗೆ ಕಾಣಿಕೆಯಾಗಿ ಕೊಡಲು ಸೀರೆಗೆ ಆರ್ಡರ್ ಮಾಡಿದ್ದರು. ಸೀರೆಯ ಪಾರ್ಸಲ್ ಕೈಸೇರಿದ ಮೇಲೆ ಹಣ ಕೊಡುವ (ಕ್ಯಾಶ್ ಆನ್ ಡೆಲಿವರಿ) ಕರಾರು ಆರ್ಡರ್ ಬುಕ್ ಮಾಡುವಾಗ ಮಾಡಿಕೊಂಡಿದ್ದರು.
ಗುರುವಾರ ಸಂಜೆ ಜಾನ್ವೆಕರ್ ರಿಲಯನ್ಸ್ ಪೆಟ್ರೋಲ್ ಬಂಕ್ ಪಕ್ಕದ ಕಾಂಪ್ಲೆಕ್ಸನಲ್ಲಿರುವ ಇ ಕಾಮರ್ಸ್‌ನ ಸ್ಥಳೀಯ ಕಚೇರಿಯ ಡೆಲಿವರಿ ವ್ಯಕ್ತಿಯೊಬ್ಬರು ಸಿದ್ದರಾಜ ಹೆಸರಲ್ಲಿ ಬಂದಿದ್ದ ಪಾರ್ಸಲ್ ನೀಡಿ ಹಣ ಪಡೆದುಕೊಳ್ಳಲು ಬಂದಿದ್ದರು. ಪಾರ್ಸಲ್ ನೋಡಿದ ಕೂಡಲೇ ಸಂಶಯಗೊಂಡು ನೈಜತೆ ಪರಿಶೀಲನೆಗೆ ಮುಂದಾದ ಸಿದ್ದರಾಜ ಅವರು ಡೆಲಿವರಿ ಕೊಡಲು ಬಂದಿದ್ದ ವ್ಯಕ್ತಿಯಿಂದಲೇ ವಿಡಿಯೋ ಮಾಡಿಸಿ ಅವರ ಎದುರಿಗೆ ಪಾರ್ಸಲ್ ಒಡೆದಾಗ ಅದರಲ್ಲಿ ಸೀರೆ ಬದಲು ಚಿಂದಿಬಟ್ಟೆ ಇರುವುದು ಕಂಡು ಬಂದು ತಾವು ಮೋಸ ಹೋಗಿ ವಂಚನೆಗೊಳಗಾಗಿದ್ದು ಗೊತ್ತಾಗಿದೆ.
ಕೂಡಲೇ ಡೆಲಿವರಿ ವ್ಯಕ್ತಿ ಮೂಲಕ ಸಂಬಂಧಿಸಿದ ಇ ಕಾಮರ್ಸ್ ಕಂಪನಿ ಹಾಗೂ ಪಾರ್ಸಲ್ ಮೇಲೆ ನೀಡಿದ್ದ ಸಂಖ್ಯೆಗಳಿಗೆ ಕರೆ ಮಾಡಿ ವಂಚನೆ ಗಮನಕ್ಕೆ ತಂದಿದ್ದಾರೆ. ಗುಜರಾತ್‌ನ ಅಯೋಧ್ಯಾದಲ್ಲಿರುವ ಬ್ಲೂ ಲೇಡಿ ಕಂಪನಿಯಿಂದ ಪಾರ್ಸಲ್ ಬಂದಿದೆ. ಆನ್‌ಲೈನ್ ಖರೀದಿಯಲ್ಲೂ ಗೋಲ್‌ಮಾಲ್ ನಡೆಯುತ್ತದೆ ಎನ್ನುವುದು ಸಾಬೀತಾದಂತಾಗಿದೆ. ಈ ವಂಚನೆ ಕುರಿತು ಇಲ್ಲಿನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸುವ ತಯಾರಿಯಲ್ಲಿದ್ದೇನೆ. ಆನ್‌ಲೈನ್‌ನಲ್ಲಿ ವ್ಯವಹರಿಸುವ ಗ್ರಾಹಕರು ಎಚ್ಚರಿಕೆಯಿಂದ ವ್ಯವಹಾರ ನಡೆಸುವುದು ಒಳಿತು ಎಂದು ಸಲಹೆ ನೀಡಿದ್ದಾರೆ.