ಲೇಖಕಿ ಭಾಗ್ಯ ಕೆ. ಮೂರ್ತಿ ಅವರ ಕಾದಂಬರಿ ಆಧಾರಿತ “ಶಾನುಭೋಗರ ಮಗಳು’ ಸಿನಿಮಾದ ಚಿತ್ರೀಕರಣ ಭರದಿಂದ ಸಾಗಿದೆ. “ಭುವನ್ ಫಿಲಂಸ್’ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ, ಕೋಡ್ಲು ರಾಮಕೃಷ್ಣ ನಿರ್ದೇಶನದ “ಶಾನುಭೋಗರ ಮಗಳು’ ಸಿನಿಮಾ ಸ್ವತಂತ್ರ ಪೂರ್ವ ಕಥಾಹಂದರ ಹೊಂದಿದೆ.
“ಶಾನುಭೋಗರ ಮಗಳು’ ಸಿನಿಮಾದಲ್ಲಿ ನಟಿ ರಾಗಿಣಿ ಪ್ರಜ್ವಲ್ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಶ್ರೀರಂಗಪಟ್ಟಣ, ಮೇಲುಕೋಟೆ, ಕುಂತಿ ಬೆಟ್ಟದ ಸುತ್ತಮುತ್ತ “ಶಾನುಭೋಗರ ಮಗಳು’ ಸಿನಿಮಾದ ಪ್ರಮುಖ ದೃಶ್ಯಗಳನ್ನು ಚಿತ್ರೀಕರಿಸಲಾಯಿತು.
ಈ ಚಿತ್ರೀಕರಣದಲ್ಲಿ ಶಾನುಭೋಗರ ಮಗಳ ಪಾತ್ರ ನಿರ್ವಹಿಸುತ್ತಿರುವ ರಾಗಿಣಿ ಪ್ರಜ್ವಲ್ ನಾಲ್ಕಾರು ಬ್ರಿಟಿಷರನ್ನು ಗುಂಡಿಟ್ಟು ಸಾಯಿಸುವ ದೃಶ್ಯವನ್ನು ಚಿತ್ರತಂಡ ಸೆರೆಹಿಡಿಯಿತು.
“ಶಾನುಭೋಗರ ಮಗಳು’ ಸಿನಿಮಾದಲ್ಲಿ ನಟಿ ರಾಗಿಣಿ ಪ್ರಜ್ವಲ್ ಅವರೊಂದಿಗೆ ಕಿಶೋರ್, ರಮೇಶ್ ಭಟ್, ಸುಧಾ ಬೆಳವಾಡಿ, ಪದ್ಮಾ ವಾಸಂತಿ, ವಾಣಿಶ್ರೀ, ಭಾಗ್ಯಶ್ರೀ, ಕುಮಾರಿ ಅನನ್ಯಾ, ಟಿ. ಎನ್. ಶ್ರೀನಿವಾಸ ಮೂರ್ತಿ, ನಿರಂಜನ ಶೆಟ್ಟಿ ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.
“ಶಾನುಭೋಗರ ಮಗಳು’ ಸಿನಿಮಾದ ಹಾಡುಗಳಿಗೆ ಡಾ. ಶಮಿತಾ ಮಲ್ನಾಡ್ ಸಂಗೀತ ಸಂಯೋಜಿಸುತ್ತಿದ್ದು, ಬಿ.ಎ.ಮಧು ಚಿತ್ರಕತೆ-ಸಂಭಾಷಣೆ ಬರೆದಿದ್ದಾರೆ. ಚಿತ್ರಕ್ಕೆ ಜೈ ಆನಂದ್ ಛಾಯಾಗ್ರಹಣ, ಕೆಂಪರಾಜ್ ಸಂಕಲನವಿದೆ. ಇದೇ ವರ್ಷದ ಕೊನೆಗೆ ಸಿನಿಮಾ ತೆರೆಗೆ ಬರುವ ಸಾಧ್ಯತೆಯಿದೆ.