Advertisement

ರಾಗಿಣಿ ಪ್ರಜ್ವಲ್‌ ಈಗ ಶ್ಯಾನುಭೋಗರ ಮಗಳು…

04:40 PM Sep 07, 2022 | Team Udayavani |

ನಟ ಪ್ರಜ್ವಲ್‌ ದೇವರಾಜ್‌ ಪತ್ನಿ ರಾಗಿಣಿ ಪ್ರಜ್ವಲ್‌ ಈಗ ಶ್ಯಾನುಭೋಗರ ಮಗಳಾಗಿ ಪ್ರೇಕ್ಷಕರ ಮುಂದೆ ಬರುವ ತಯಾರಿಯಲ್ಲಿದ್ದಾರೆ.

Advertisement

ಹೌದು, ರಾಗಿಣಿ ಪ್ರಜ್ವಲ್‌ ಅಭಿನಯಿಸುತ್ತಿರುವ ಹೊಸ ಸಿನಿಮಾಕ್ಕೆ “ಶ್ಯಾನುಭೋಗರ ಮಗಳು’ ಎಂದು ಹೆಸರಿಡಲಾಗಿದ್ದು, ಈ ಸಿನಿಮಾದಲ್ಲಿ ರಾಗಿಣಿ ಸ್ವತಂತ್ರ ಪೂರ್ವದಲ್ಲಿ ಬರುವ ಬ್ರಿಟೀಷರ ವಿರುದ್ದ ಹೋರಾಡುವ ಶ್ಯಾನುಭೋಗರ ಮಗಳ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.

ಶ್ರೀಮತಿ ಭಾಗ್ಯ ಕೃಷ್ಣಮೂರ್ತಿ ಅವರ ಕಾದಂಬರಿ ಆಧಾರಿತ “ಶ್ಯಾನುಭೋಗರ ಮಗಳು’ ಸಿನಿಮಾ ಸುಮಾರು 17-18ನೇ ಶತಮಾನದ ಕಥಾಹಂದರ ಹೊಂದಿದ್ದು, “ಭುವನ್‌  ಫಿಲಂಸ್‌’ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ಕನ್ನಡದಲ್ಲಿ ಅತೀ ಹೆಚ್ಚು ಕಾದಂಬರಿ ಆಧಾರಿತ ಸಿನಿಮಾಗಳನ್ನು ನಿರ್ದೇಶಿಸಿರುವ ನಿರ್ದೇಶಕರಲ್ಲಿ ಒಬ್ಬರಾದ, ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ಈ ಕಾದಂಬರಿ ಆಧಾರಿತ ಸಿನಿಮಾಕ್ಕೆ ಆ್ಯಕ್ಷನ್‌-ಕಟ್‌ ಹೇಳುತ್ತಿದ್ದಾರೆ.

ಇನ್ನು “ಶ್ಯಾನುಭೋಗರ ಮಗಳು’ ಸಿನಿಮಾದ ಬಗ್ಗೆ ಮಾತನಾಡುವ ನಿರ್ದೇಶಕ ಕೋಡ್ಲು ರಾಮಕೃಷ್ಣ, “ಇದೊಂದು ಸ್ವತಂತ್ರ್ಯ ಪೂರ್ವದ ಕಥಾಹಂದರ ಹೊಂದಿರುವ ಸಿನಿಮಾ. ಬ್ರಿಟೀಷರ ಕಾಲದಲ್ಲಿ ಶ್ಯಾನುಭೋಗರ ಮಗಳೊಬ್ಬಳು ಮದುವೆಯಾದ ಬಳಿಕ, ಬದಲಾದ ಸನ್ನಿವೇಶದಲ್ಲಿ ಬ್ರಿಟೀಷರ ವಿರುದ್ದ ಹೋರಾಡುವಂಥ ಕಥೆ ಸಿನಿಮಾದಲ್ಲಿದೆ. ಒಂದಷ್ಟು ಸಸ್ಪೆನ್ಸ್‌-ಥ್ರಿಲ್ಲಿಂಗ್‌ ಆಗಿರುವಂಥ ಹಲವು ಅಂಶಗಳು ಕಥೆಯಲ್ಲಿದ್ದು, ಸಿನಿಮಾ ಕೂಡ ರೋಚಕವಾಗಿರುವಂತೆ ತೆರೆಮೇಲೆ ಬರಲಿದೆ.

ಈಗಾಗಲೇ “ಶ್ಯಾನುಭೋಗರ ಮಗಳು’ ಸಿನಿಮಾದ ಸ್ಕ್ರಿಪ್ಟ್ ಮತ್ತು ಪ್ರೀ-ಪ್ರೊಡಕ್ಷನ್‌ ಕೆಲಸಗಳು ಬಹುತೇಕ ಪೂರ್ಣಗೊಂಡಿದ್ದು, ಇದೇ ಸೆಪ್ಟೆಂಬರ್‌ ಕೊನೆಯವಾರ ದಿಂದ ಶೂಟಿಂಗ್‌ ಆರಂಭಿಸುವ ಯೋಚನೆಯಿದೆ’ ಎನ್ನುತ್ತಾರೆ. “ಶ್ಯಾನು ಭೋಗರ ಮಗಳು’ ಕೋಡ್ಲು ರಾಮಕೃಷ್ಣ ನಿರ್ದೇಶನದ 14ನೇ ಕಾದಂಬರಿ ಆಧಾರಿತ ಸಿನಿಮಾವಾಗಿದ್ದು, ಕಾದಂಬರಿಯ ಆಶಯವನ್ನು ದೃಶ್ಯರೂಪದಲ್ಲಿತೆರೆಗೆ ತರಲು ಕೋಡ್ಲು ರಾಮಕೃಷ್ಣ ಮತ್ತು ಚಿತ್ರತಂಡ ಸಿದ್ಧವಾಗಿದೆ.

Advertisement

“ಶ್ಯಾನುಭೋಗರ ಮಗಳು’ ಸಿನಿಮಾದಲ್ಲಿ ರಾಗಿಣಿ ಪ್ರಜ್ವಲ್‌ ಜೊತೆಗೆ ಮೇಘಶ್ರೀ, ನಿರಂಜನ್‌ ಕುಮಾರ್‌, ರಮೇಶ್‌ ಭಟ್‌, ಟೆನ್ನಿಸ್‌ ಕೃಷ್ಣ, ಶಂಕರ್‌ ಅಶ್ವಥ್ಥ್, ನೀನಾಸಂ ಅಶ್ವಥ್ಥ್ ಮುಂತಾದವರು ಇತರ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ.

“ಶ್ಯಾನುಭೋಗರ ಮಗಳು’ ಸಿನಿಮಾದ ಪ್ರಮುಖ ಘಟ್ಟದಲ್ಲಿ ಟಿಪ್ಪ  ಸುಲ್ತಾನ್‌ ಪಾತ್ರವೊಂದು ಬರಲಿದ್ದು, ಆ ಪಾತ್ರಕ್ಕಾಗಿ ಕನ್ನಡದ ಪ್ರಖ್ಯಾತ ನಟರೊಬ್ಬರನ್ನು ಕರೆತರುವ ಯೋಚನೆಯಲ್ಲಿದೆ ಚಿತ್ರತಂಡ. “ಶ್ಯಾನುಭೋಗರ ಮಗಳು’ ಚಿತ್ರಕ್ಕೆ ಬಿ. ಎ ಮಧು ಚಿತ್ರಕಥೆ ಹಾಗೂ ಸಂಭಾಷಣೆಯಿದ್ದು, ಜೈ ಆನಂದ್‌ ಛಾಯಾಗ್ರಹಣ ವಿದೆ. ಚಿತ್ರದ ಹಾಡುಗಳಿಗೆ ಶಮಿತಾ ಮಲ್ನಾಡ್‌ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರಕ್ಕೆ ವಸಂತ್‌ ರಾವ್‌ ಕುಲಕರ್ಣಿ ಕಲಾ ನಿರ್ದೇಶನವಿದೆ.

ಮೊದಲ ಹಂತದಲ್ಲಿ ಮೈಸೂರು, ಶ್ರೀರಂಗಪಟ್ಟಣ, ಮೇಲುಕೋಟೆ ಸುತ್ತಮುತ್ತ “ಶ್ಯಾನುಭೋಗರ ಮಗಳು’ ಸಿನಿಮಾದ ಚಿತ್ರೀಕರಣ ನಡೆಯಲಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಇದೇವರ್ಷಾಂತ್ಯಕ್ಕೆ ಅಥವಾ ಮುಂದಿನ ವರ್ಷದ ಆರಂಭದಲ್ಲಿ “ಶ್ಯಾನುಭೋಗರ ಮಗಳು’ ಪ್ರೇಕ್ಷಕರ ಮುಂದೆ ಬರಲಿದ್ದಾಳೆ.

Advertisement

Udayavani is now on Telegram. Click here to join our channel and stay updated with the latest news.

Next