ರಾಗಿಣಿ ಈ ಹಿಂದೆ “ತುಪ್ಪ ಬೇಕಾ ತುಪ್ಪ…’ ಅನ್ನೋ ಹಾಡಿಗೆ ಸ್ಟೆಪ್ ಹಾಕಿ ಸುದ್ದಿಯಾಗಿದ್ದು ಗೊತ್ತೇ ಇದೆ. ಇಂದಿಗೂ ಸಹ ಪಡ್ಡೆ ಹುಡುಗ್ರು ರಾಗಿಣಿ ಕಂಡರೆ ಸಾಕು, “ತುಪ್ಪದ ಹುಡುಗಿ..’ ಅಂತಾನೇ ಗುನುಗುವುದುಂಟು. ಈಗ ರಾಗಿಣಿ ಹೊಸ ವರ್ಷಕ್ಕೆ ಹೊಸ ವರ್ಷನ್‌ನಲ್ಲಿ ಕಾಣಿಸಿಕೊಂಡಿರುವುದು ವಿಶೇಷ. ವಿಷಯ ಏನೆಂದರೆ, ರಾಗಿಣಿ ಮತ್ತೂಂದು ಸ್ಪೆಷಲ್ ಹಾಡಿಗೆ ಪವರ್‌ಫುಲ್ ಸ್ಟೆಪ್ ಹಾಕಿದ್ದಾರೆ. ಹೌದು, ಇಮ್ರಾನ್ ಸರ್ದಾರಿಯ ನಿರ್ದೇಶನದ “ಉಪ್ಪು ಹುಳಿ ಖಾರ’ ಚಿತ್ರದಲ್ಲಿ ಬರುವ ವಿಶೇಷ ಹಾಡೊಂದರಲ್ಲಿ ರಾಗಿಣಿ ಈಗಾಗಲೇ ಕುಣಿದು ಕುಪ್ಪಳಿಸಿದ್ದಾರೆ.
ಅವರು ಚಿತ್ರದ ಹಾಡಲ್ಲಿ ಕಾಣಿಸಿಕೊಂಡಿರುವ ಹೊಸ ಲುಕ್ ನೋಡಿದರೆ, ಅದೊಂದು ಹೈ ಎನರ್ಜಿಟಿಕ್ ಸಾಂಗ್ ಅನ್ನೋದಂತೂ ನಿಜ. ರಾಗಿಣಿ ಆ ಹಾಡಲ್ಲಿ ಕಾಣಿಸಿಕೊಂಡ ಬಗ್ಗೆ ಹೇಳುವ ನಿರ್ದೇಶಕ ಇಮ್ರಾನ್ ಸರ್ದಾರಿಯಾ, “ತುಪ್ಪ ಬೇಕಾ ತುಪ್ಪ’, “ಯಕ್ಕಾ ನಿನ್ ಮಗಳು ನಂಗೆ ಚಿಕ್ಕಳಾಗಲ್ವಾ.. ಹಾಗೂ “ರಣಚಂಡಿ’ ಚಿತ್ರದ ಟ್ರಾಕ್ ಸಾಂಗ್ ಅನ್ನು ಸ್ವತಃ ನಾನೇ ನೃತ್ಯ ನಿರ್ದೇಶನ ಮಾಡಿದ್ದೆ. ನಮ್ಮ “ಉಪ್ಪು ಹುಳಿ ಖಾರ’ ಚಿತ್ರದಲ್ಲೂ ಸ್ಪೆಷಲ್ ಹಾಡೊಂದು ಇತ್ತು.
ಆ ಹಾಡಲ್ಲಿ ರಾಗಿಣಿ ಅವರೇ ಕಾಣಿಸಿಕೊಂಡರೆ ಚೆನ್ನಾಗಿರುತ್ತೆ ಅಂತ ಅವರನ್ನು ಕೇಳಿಕೊಂಡಾಗ, “ಸಾಂಗ್ ಯಾವ ರೀತಿಯದ್ದು, ಕಾಸ್ಟೂಮ್ ಹೇಗೆಲ್ಲಾ ಇರುತ್ತೆ’ ಅಂತ ರಾಗಿಣಿ ತಿಳಿದುಕೊಂಡರು. ರಾಗಿಣಿ ಅವರನ್ನು ಇದುವರೆಗೆ ಸ್ಪೆಷಲ್ ಸಾಂಗ್‌ನಲ್ಲಿ ಒಂದೇ ರೀತಿ ನೋಡಿರುವ ಜನರಿಗೆ ನಮ್ಮ ಚಿತ್ರದ ಹಾಡಿನ ಮೂಲಕ ಹೊಸ ರಾಗಿಣಿಯನ್ನು ತೋರಿಸಬೇಕು ಹಾಗಾಗಿ, ಹಾಡಲ್ಲೇ ಕ್ಯಾರೆಕ್ಟರ್ ಇಟ್ಟುಕೊಂಡು ಚಿತ್ರೀಕರಿಸುವ ಐಡಿಯಾ ಇದೆ.
ಸ್ನೇಕ್ ಡ್ಯಾನ್ಸ್ ಮಾಡಬೇಕು ಅಂತ ಹೇಳಿದಾಗ, ರಾಗಿಣಿ ಮೊದಲು ಒಪ್ಪಲಿಲ್ಲ. ಸ್ನೇಕ್ ಸಾಂಗ್ ಮಾಡೋದಿಲ್ಲ. ಭಯ ಆಗುತ್ತೆ ಅಂತೆಲ್ಲಾ ಹೇಳಿದರೂ, ನಾನು, ನೀವು “ಕ್ವೀನ್‌ಕೋಬ್ರಾ’ ಆಗಿ ಕಾಣಿಸಿಕೊಳ್ಳುತ್ತಿದ್ದೀರಿ. ಅದೊಂದು ರೀತಿಯ ಮನರಂಜನಾತ್ಮಕ ಹಾಡಾಗಿರುತ್ತೆ. ಹೊಸದಾಗಿ ಕಾಣಿಸಿಕೊಳ್ಳುವ ಪಾತ್ರ ಕ್ಯಾರೆಕ್ಟರ್ ಆಗಿಯೂ ಅದು ಕನೆಕ್ಟ್ ಆಗುತ್ತೆ ಅಂದಾಗ, ಒಪ್ಪಿ ಸಾಂಗ್‌ನಲ್ಲಿ ಸ್ಟೆಪ್ ಹಾಕಿದ್ದಾರೆ. ತೆಳು,ಬೆಳ್ಳಗೆ ಇರುವ ರಾಗಿಣಿಗೆ ಸ್ನೇಕ್ ಕಣ್ಣುಗಳಂತಿರುವ ಸ್ಪೆಷಲ್ ಲೆನ್ಸ್ ಹಾಕಿರುವುದು ವಿಶೇಷ’ ಎಂದು ವಿವರ ಕೊಟ್ಟರು ನಿರ್ದೇಶಕ ಇಮ್ರಾನ್ ಸರ್ದಾರಿಯಾ.
ಆ ಹಾಡಿಗೆ ಎರಡು ದಿನಗಳ ಕಾಲ ರಿಹರ್ಸಲ್ ಮಾಡಲಾಗಿದೆ. ನಾಗೇಂದ್ರಪ್ರಸಾದ್ ಅವರು ಬರೆದಿರುವ “ಗಿನ್ ಗಿನ್ ಗಿನ್ ನಾಗಿನ್, ಚಾಚು ಚಾಚು ನಾಲಿಗೆನಾ, ದೋಚು ದೋಚು ನಶೆಯನ್ನಾ..’ ಎಂಬ ಕಲರ್‌ಫುಲ್ ಹಾಡಿಗೆ ರಾಗಿಣಿ ಸ್ಟೆಪ್ ಹಾಕಿದ್ದಾರೆ. ಶಶಾಂಕ್ ಹಾಗೂ ಹೊಸ ಗಾಯಕಿ ಶ್ರುತಿ ಈ ಹಾಡಿಗೆ ದನಿಯಾಗಿದ್ದಾರೆ. ಇನ್ನು, ಜ್ಯೂಡಾ ಸ್ಯಾಂಡಿ ಈ ಹಾಡಿಗೆ ಸಂಗೀತ ನೀಡಿದ್ದಾರೆ.
ಟೊರಿನಾ ಫ್ಯಾಕ್ಟರಿಯಲ್ಲಿ ಸೆಟ್ ಹಾಕಿ ಇತ್ತೀಚೆಗೆ ಈ ಹಾಡನ್ನು ಚಿತ್ರೀಕರಿಸಲಾಗಿದೆ. ಹಾಡಲ್ಲಿ 7 ಸಾವಿರ ಬಲ್ಬ್ಗಳನ್ನು ಬಳಸಿರುವುದು ವಿಶೇಷತೆಗಳಲ್ಲೊಂದು. ಇನ್ನೊಂದು ಹಾಡನ್ನು ಚಿತ್ರೀಕರಿಸಿದರೆ ಚಿತ್ರ ಪೂರ್ಣಗೊಳ್ಳಲಿದೆ. ಫೆಬ್ರವರಿಯಲ್ಲಿ ರಿಲೀಸ್ ಮಾಡುವ ಯೋಚನೆ ನಿರ್ಮಾಪಕ ರಮೇಶ್ ರೆಡ್ಡಿ ಅವರಿಗಿದೆ. ಈ ಚಿತ್ರದಲ್ಲಿ ಮಾಲಾಶ್ರೀ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಉಳಿದಂತೆ ಅನುಶ್ರೀ, ಧನು, ಶಶಿ, ಶರತ್, ಜಯಶ್ರೀ ನಟಿಸಿದ್ದಾರೆ. ನಿರಂಜನ್‌ಬಾಬು ಕ್ಯಾಮೆರಾ ಹಿಡಿದಿದ್ದಾರೆ.