Advertisement

ರಾಗಿಣಿ ಈಗ ಟೆರರಿಸ್ಟ್‌!

10:45 AM Nov 21, 2017 | Team Udayavani |

ಈ ಹಿಂದೆ ನಿರ್ದೇಶಕ ಪಿ.ಸಿ.ಶೇಖರ್‌ ರಾಗಿಣಿಗೊಂದು ಸಿನಿಮಾ ಮಾಡುವುದಾಗಿ ಹೇಳಿಕೊಂಡಿದ್ದರು. ಆಗ ಆ ಚಿತ್ರಕ್ಕೆ ಇನ್ನೂ ನಾಮಕರಣ ಮಾಡಿರಲಿಲ್ಲ. ಈಗ ಆ ಚಿತ್ರಕ್ಕೊಂದು ಹೆಸರಿಟ್ಟಿದ್ದಾರೆ ಶೇಖರ್‌. ಈ ಚಿತ್ರಕ್ಕೆ ಪಿ.ಸಿ.ಶೇಖರ್‌ ಇಟ್ಟ ಹೆಸರು “ದಿ ಟೆರರಿಸ್ಟ್‌’. ಇದೊಂದು ಭಯೋತ್ಪಾದನೆ ಹಿನ್ನೆಲೆಯಲ್ಲಿ ಸಾಗುವ ಚಿತ್ರವಾದ್ದರಿಂದ ಈ ಶೀರ್ಷಿಕೆ ಇಟ್ಟಿದ್ದಾರಂತೆ. ಮೊದಲೇ ಹೇಳಿದಂತೆ ಈ ಚಿತ್ರದಲ್ಲಿ ಹೀರೋ ಇಲ್ಲ.

Advertisement

ಏಕೆಂದರೆ, ಇದೊಂದು ಮಹಿಳಾ ಪ್ರಧಾನ ಚಿತ್ರ. ರಾಗಿಣಿ ಈ ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಈ ಹಿಂದೆ ಶೇಖರ್‌ ನಿರ್ದೇಶನದ “ನಾಯಕ’ ಚಿತ್ರದಲ್ಲಿ ರಾಗಿಣಿ ನಾಯಕಿಯಾಗಿ ಅಭಿನಯಿಸಿದ್ದರು. ಈಗ ನಾಯಕಿ ಪ್ರಧಾನ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ವಾಣಿಜ್ಯ ಮಂಡಳಿಯಲ್ಲಿ ಈ ಶೀರ್ಷಿಕೆ ಕೊಡುವ ಮುನ್ನ ಬೇರೆ ಬ್ಯಾನರ್‌ನಲ್ಲಿದ್ದ “ಟೆರರ್‌’ ಎಂಬ ಶೀರ್ಷಿಕೆ ಅಡ್ಡಿಯಾಗಿತ್ತಂತೆ.

ಕೊನೆಗೆ ನಿರ್ದೇಶಕ ಶೇಖರ್‌, ಆ ಚಿತ್ರತಂಡದವರ ಜತೆ ಮಾತನಾಡಿ, ಅಂತಿಮವಾಗಿ “ದಿ ಟೆರರಿಸ್ಟ್‌’ ಎಂಬ ಶೀರ್ಷಿಕೆ ಇಟ್ಟುಕೊಂಡಿದ್ದಾರೆ. ಅಂದಹಾಗೆ, ಈ ಚಿತ್ರದಲ್ಲಿ ಪ್ರಚಲಿತ ಸಮಸ್ಯೆಗಳನ್ನಿಟ್ಟುಕೊಂಡು, ಈ ಕಥೆ ಮಾಡಿದ್ದಾರಂತೆ. “ದಿನ ಬೆಳಗಾದರೆ ಚಾನಲ್‌ಗ‌ಳಲ್ಲಿ, ಪತ್ರಿಕೆಗಳಲ್ಲಿ ಭಯೋತ್ಪಾದನೆ ಕುರಿತ ಸುದ್ದಿಗಳನ್ನು ಓದುತ್ತಿರುತ್ತೀವಿ. ಇಂಥದ್ದಕ್ಕೆಲ್ಲಾ ಕೊನೆಯೇ ಇಲ್ಲವಾ? ಪರಿಹಾರವೇನು ಎಂಬಂತಹ ಪ್ರಶ್ನೆಗಳು ಎಲ್ಲರಿಗೂ ಬರುವುದು ಸಹಜ.

ಈ ವಿಷಯವನ್ನಿಟ್ಟುಕೊಂಡು ಈ ಚಿತ್ರ ಮಾಡುತ್ತಿದ್ದೇವೆ. ಸಾಮಾನ್ಯವಾಗಿ ಇಂತಹ ಘಟನೆಗಳು ನಡೆದಾಗ ಎರಡು ದಿನಗಳ ಕಾಲ ಸುದ್ದಿಯಾಗುತ್ತದೆ. ಆ ನಂತರ ಏನಾಗುತ್ತದೆ ಎಂದು ಯಾರೂ ಯೋಚಿಸುವುದಿಲ್ಲ. ಒಂದು ಭಯೋತ್ಪಾದನೆ ಚಟುವಟಿಕೆ ಹೇಗೆ ರಾಜಕೀಯವಾಗಿ, ಧಾರ್ಮಿಕವಾಗಿ ಏನೆಲ್ಲಾ ಸಮಸ್ಯೆಗಳಾಗುತ್ತದೆ ಮತ್ತು ಒಬ್ಬ ಮಹಿಳೆಗೆ ಇದರಿಂದ ಸಮಸ್ಯೆಯಾದರೆ, ಏನು ಮಾಡುತ್ತಾಳೆ ಎನ್ನುವುದು ಈ ಚಿತ್ರದ ಕಥೆ.

ಇನ್ನೊಂದು ವಿಶೇಷವೆಂದರೆ, ಭಯೋತ್ಪಾದನೆ ಕುರಿತ ಚಿತ್ರದಲ್ಲಿ ಈವರೆಗೆ ಕಾಣಿಸಿರೋದೆಲ್ಲಾ ಪುರುಷರೇ. ಆದರೆ, ” ದಿ ಟೆರರಿಸ್ಟ್‌’ ಚಿತ್ರ ಮಹಿಳೆ ಮೇಲೆ ರೂಪುಗೊಂಡಿದೆ. ಹಾಂಗ್‌ಕಾಂಗ್‌ನಲ್ಲಿ ನೆಲೆಸಿರುವ ಅನಿವಾಸಿ ಭಾರತೀಯರಾದ ಅಲಂಕಾರ್‌ ಸಂತಾನಂ ಈ ಚಿತ್ರ ನಿರ್ಮಿಸುತ್ತಿದ್ದಾರೆ. ಇದರ ಮತ್ತೂಂದು ವಿಶೇಷವೆಂದರೆ, ಅಟ್‌ಮಾಸ್‌ ಎಂಬ ಕಂಪೆನಿ ಮೊದಲ ಬಾರಿಗೆ ಚಿತ್ರದೊಂದಿಗೆ ಬೆರೆತಿದೆ. ಅದು ಇಡೀ ಚಿತ್ರದ ಸೌಂಡ್‌ ಡಿಸೈನ್‌ ಮಾಡುವ ಹೊಣೆ ಹೊತ್ತಿದೆ.

Advertisement

ಈ ಚಿತ್ರ ಕಮರ್ಷಿಯಲ್‌ ಜತೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲೂ ಪಾಲ್ಗೊಳ್ಳಬೇಕೆಂಬ ಉದ್ದೇಶ ನಿರ್ಮಾಪಕರದ್ದು. ಆ ನಿಟ್ಟಿನಲ್ಲಿ ಹೊಸತನ ಇಟ್ಟುಕೊಂಡು ಒಂದಷ್ಟು ಮಾಹಿತಿ ಕಲೆಹಾಕಿ ಚಿತ್ರ ಮಾಡಲಾಗುತ್ತಿದೆ. ಚಿತ್ರಕ್ಕೆ ಛಾಯಾಗ್ರಾಹಕ ವೈದಿ ಅವರ ಸಹಾಯಕ ಅಶೋಕ್‌ ಇಲ್ಲಿ ಕ್ಯಾಮೆರಾ ಹಿಡಿದರೆ, ಸಚಿನ್‌ ಸಂಭಾಷಣೆ ಬರೆಯುತ್ತಿದ್ದಾರೆ. ಡಿಸೆಂಬರ್‌ 7 ರಂದು ಚಿತ್ರೀಕರಣ ಶುರುವಾಗಲಿದೆ. ಜನವರಿ 7 ರಂದು ಪೂರ್ಣಗೊಳ್ಳಲಿದೆ ಎನ್ನುತ್ತಾರೆ ಶೇಖರ್‌.

Advertisement

Udayavani is now on Telegram. Click here to join our channel and stay updated with the latest news.

Next