ಪ್ರಜ್ವಲ್ ದೇವರಾಜ್ ಪತ್ನಿ ರಾಗಿಣಿ ರಾಮಚಂದ್ರನ್ ಮಾಡೆಲಿಂಗ್ ಫೀಲ್ಡ್ನಿಂದ ಬಂದವರು. ಸಾಕಷ್ಟು ಜಾಹೀರಾತುಗಳಲ್ಲೂ ರಾಗಿಣಿ ಕಾಣಿಸಿಕೊಂಡಿದ್ದಾರೆ. ಸಹಜವಾಗಿಯೇ ಅವರಿಗೆ ಎದುರಾಗುತ್ತಿದ್ದ ಪ್ರಶ್ನೆ ಸಿನಿಮಾದಲ್ಲಿ ಯಾವಾಗ ನಟಿಸುತ್ತೀರಿ ಎಂಬುದು. ಇತ್ತೀಚೆಗೆ ಪ್ರಜ್ವಲ್ ದೇವರಾಜ್ ನಾಯಕರಾಗಿರುವ “ಇನ್ಸ್ಪೆಕ್ಟರ್ ವಿಕ್ರಮ್’ ಚಿತ್ರದ ಅತಿಥಿ ಪಾತ್ರದಲ್ಲಿ ನಟಿಸಿದ್ದಾರೆ. ಈಗ ರಾಗಿಣಿ ಸಿನಿಮಾವೊಂದರಲ್ಲಿ ನಾಯಕಿಯಾಗಿ ನಟಿಸಲು ಸಿದ್ಧರಾಗಿದ್ದು, ಈ ಮೂಲಕ ಪೂರ್ಣಪ್ರಮಾಣದಲ್ಲಿ ಸಿನಿಮಾದಲ್ಲಿ ಕಾಣಿಸಿಕೊಳ್ಳಲಿದ್ದಾರೆ.
ಹೌದು, ರಾಗಿಣಿ “ವಿಜಯ ದಶಮಿ’ ಎಂಬ ಸಿನಿಮಾದಲ್ಲಿ ನಾಯಕಿಯಾಗಿ ನಟಿಸುತ್ತಿದ್ದಾರೆ. ಈ ಚಿತ್ರಕ್ಕೆ ನಾಯಕ ಯಾರು ಎಂದು ನೀವು ಕೇಳುವಂತಿಲ್ಲ. ಏಕೆಂದರೆ ಇದು ನಾಯಕಿ ಪ್ರಧಾನ ಚಿತ್ರ. ಇಡೀ ಕಥೆ ರಾಗಿಣಿ ಸುತ್ತವೇ ಸುತ್ತಲಿದೆ. ರಘು ಸಮರ್ಥ್ ಈ ಸಿನಿಮಾದ ನಿರ್ದೇಶಕರು. ಈ ಹಿಂದೆ “ಸ್ಮೈಲ್ ಪ್ಲೀಸ್’ ಎಂಬ ಸಿನಿಮಾ ಮಾಡಿದ್ದ ರಘು ಸಮರ್ಥ್ ಆ ನಂತರ ಯಾವುದೇ ಸಿನಿಮಾ ಮಾಡಿರಲಿಲ್ಲ.
ಸಿನಿಮಾಗಳಿಗೆ ಸಂಭಾಷಣೆ ಬರೆಯುವ ಜೊತೆಗೆ ತಮ್ಮದೇ ಕಾರ್ಯಗಳಲ್ಲಿ ಬಿಝಿಯಾಗಿದ್ದ ರಘು ಈಗ “ವಿಜಯ ದಶಮಿ’ ಮೂಲಕ ಮತ್ತೆ ನಿರ್ದೇಶಕನಕ್ಕೆ ವಾಪಾಸ್ ಆಗಿದ್ದಾರೆ. ಚಿತ್ರದಲ್ಲಿ ರಾಗಿಣಿಯವರು ಕಾನೂನು ಪದವಿ ಪಡೆದಿರುವ ಹುಡುಗಿಯಾಗಿ ಕಾಣಿಸಿಕೊಳ್ಳಲಿದ್ದಾರೆ. ಸಾಮಾನ್ಯವಾಗಿ ಅನ್ಯಾಯ ನಡೆದರೆ ಅದರ ವಿರುದ್ಧ ಸೋಶಿಯಲ್ ಮೀಡಿಯಾದಲ್ಲಿ ತಮ್ಮ ಸಿಟ್ಟು, ಬೇಸರ, ವಿರೋಧವನ್ನು ಹಾಕಿ ಕೂರುವ ಅನೇಕರ ನಡುವೆ, ರಾಗಿಣಿಯವರು ಭಿನ್ನವಾಗಿ ನಿಲ್ಲುವ ಪಾತ್ರ ಮಾಡುತ್ತಿದ್ದಾರಂತೆ.
ಒಂದೇ ಮಾತಲ್ಲಿ ಹೇಳಬೇಕಾದರೆ ಅನ್ಯಾಯದ ವಿರುದ್ಧ ಹೋರಾಡುವ ಪಾತ್ರ. ಬುದ್ಧಿವಂತಿಕೆಯಿಂದ ಅನ್ಯಾಯಕ್ಕೊಳಗಾದವರಿಗೆ ಸಹಾಯ ಮಾಡುವ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. “ವಿಜಯ ದಶಮಿ’ ಚಿತ್ರದ ಮುಹೂರ್ತ ವಿಜಯದಶಮಿಯಂದು (ಅ.19) ನಡೆಯಲಿದ್ದು, ಅ.22 ರಿಂದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರದಲ್ಲಿ ಅಚ್ಯುತ್ ಕುಮಾರ್, ಅವಿನಾಶ್, ಸುಧಾರಾಣಿ, ರಾಜೇಶ್ ನಟರಂಗ ಸೇರಿದಂತೆ ಅನೇಕರು ನಟಿಸುತ್ತಿದ್ದಾರೆ. ಚಿತ್ರಕ್ಕೆ ಸುಜ್ಞಾನ್ ಛಾಯಾಗ್ರಹಣ, ವಾಸುಕೀ ವೈಭವ್ ಸಂಗೀತ, ಶ್ರೀಕಾಂತ್ ಸಂಕಲನವಿದೆ.