ಮೈಸೂರು ಜಿಲ್ಲೆಯ ಪ್ರಮುಖ ಪ್ರವಾಸಿ ತಾಣಗಳಲ್ಲಿ ತಿ.ನರಸೀಪುರ ತಾಲೂಕು ಕೂಡ ಒಂದು. ಇಲ್ಲಿ ಕಾವೇರಿ, ಕಪಿಲಾ ಹಾಗೂ ಸ್ಪಟಿಕ ಸರೋವರ ಮೂರು ನದಿಗಳೂ ಸೇರುವ ಕೂಡುವ ತ್ರಿವೇಣಿ ಸಂಗಮವಿದ್ದು, ನಾಡಿನ ವಿವಿಧೆಡೆಗಳಿಂದ ಪ್ರವಾಸಿಗರು ಬರುತ್ತಾರೆ. ಇಂತಹವರಿಗಾಗಿಯೇ ಶುಚಿ, ರುಚಿ ಹಾಗೂ ಚೀಪ್ ಆ್ಯಂಡ್ ಬೆಸ್ಟ್ ಅನ್ನುವಂಥ ಹೋಟೆಲೊಂದು ತಿ.ನರಸೀಪುರ ಪಟ್ಟಣದಲ್ಲಿದೆ. ಅದುವೇ, ಬಿ.ತೋಟದಪ್ಪ ಮೆಸ್. 60 ವರ್ಷಗಳ ಹಿಂದೆ ಆರಂಭವಾಗಿರುವ ಇದು, ತಾಲೂಕಿನ ಪ್ರಮುಖ ಹೋಟೆಲ್‌ಗಳಲ್ಲಿ ಒಂದು. ತಿ.ನರಸೀಪುರ ತಾಲೂಕಿನವರೇ ಆದ ಬಿ.ತೋಟದಪ್ಪ, ಮೂಲತಃ ಕೃಷಿಕರು. ಶಾಲೆ ಕಲಿಯದ ಇವರು, ಚಿಕ್ಕ ವಯಸ್ಸಿನಲ್ಲೇ ತಮ್ಮ ದೊಡ್ಡಪ್ಪ ಪುಟ್ಟಪ್ಪ ಅವರ ಹೋಟೆಲ್ ನಂಜುಂಡೇಶ್ವರ ಭವನದಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದರು. ಅಲ್ಲಿ ಹಲವು ವರ್ಷ ಕೆಲಸ ಮಾಡಿ, ಅಡುಗೆಯಲ್ಲಿ ಸಾಕಷ್ಟು ಪರಿಣಿತಿ ಪಡೆದ ನಂತರ ಈಗಿನ ರೇಣುಕಾ ಸಭಾ ಭವನ ಎದುರು ಹಲಗೆ ಕಟ್ಟಿಕೊಂಡು ಪುಟ್ಟದಾಗಿ ಹೋಟೆಲ್ ಪ್ರಾರಂಭಿಸಿದ್ದರು. ಕಾಲಾ ನಂತರದಲ್ಲಿ ತಿಗಳರ ಬೀದಿ, ಸ್ಟೇಟ್ ಬ್ಯಾಂಕ್ ಎದುರು, ಬಸ್ ನಿಲ್ದಾಣದ ಎದುರು ಹೀಗೆ ನಾಲ್ಕೈದು ಕಡೆ ಹೋಟೆಲ್ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು. ಇವರು ಆಗಿಂದಾಗ್ಗೆ ಹೋಟೆಲಿನ ಜಾಗ ಬದಲಿಸಿ, ಕೆಲವು ತಿಂಗಳು ಕೆಲಸವಿಲ್ಲದೇ ಕೂತಾಗ ಕುಟುಂಬದ ಹೊಣೆ ಹೊರುತ್ತಿದ್ದ ಪತ್ನಿ ವನಜಾಕ್ಷಮ್ಮ, ಮನೆಯಲ್ಲೇ ಚಕ್ಕುಲಿ, ನಿಪ್ಪಟ್ಟು, ಮಿಠಾಯಿ ಮಾಡಿ ಮಾರುತ್ತಿದ್ದರು. ಬಂದ ದುಡ್ಡಲ್ಲಿ ಸಂಸಾರ ಸರಿದೂಗಿಸುತ್ತಿದ್ದರು. ಚಿಕ್ಕವಯಸ್ಸಿನಿಂದಲೂ ತಂದೆ ಕೆಲಸಕ್ಕೆ ಬೆನ್ನೆಲುಬಾಗಿದ್ದ ಪುತ್ರರಾದ ಸಿದ್ದಲಿಂಗಸ್ವಾಮಿ ಮತ್ತು ಬಸವರಾಜು, 1991ರಿಂದ ಹೋಟೆಲ್ ಉಸ್ತುವಾರಿ ನೋಡಿಕೊಳ್ಳುತ್ತಿದ್ದಾರೆ.
ಬಡವರಿಗೆ ಸಹಾಯ:
ಬಿ.ತೋಟದಪ್ಪಗೆ ಮನೆಯಲ್ಲಿ ಬಡತನವಿದ್ದರೂ ಬಡವರಿಗೆ, ಓದುವ ಮಕ್ಕಳಿಗೆ ತಮ್ಮ ಕೈಲಾದ ಸಹಾಯ ಮಾಡುತ್ತಿದ್ದರು. ತಾನಂತೂ ಓದಿಲ್ಲ, ಬೇರೆ ಮಕ್ಕಳಾದ್ರೂ ಚೆನ್ನಾಗಿ ಓದಲಿ ಎಂಬ ಹಂಬಲದಿಂದ, ವಿದ್ಯಾರ್ಥಿಗಳಿಗೆ ಉಚಿತವಾಗಿ ತಿಂಡಿ, ಊಟ ಕೂಡ ಕೊಡುತ್ತಿದ್ದರು. ಕೆಲವರಿಗೆ ಹಣವನ್ನೂ ಕೊಟ್ಟಿದ್ದಾರೆ. ಈಗ ಸರ್ಕಾರಿ ಉದ್ಯೋಗದಲ್ಲಿರುವ ಕೆಲವರು ಈಗಲೂ ತೋಟದಪ್ಪನವರ ಸಹಕಾರವನ್ನು ನೆನೆಯುತ್ತಾರೆ.
ಹೋಟೆಲ್ ವಿಶೇಷ:
ಕೊತ್ತಂಬರಿ, ಕಾಳು ಹಾಕಿ ಮಾಡಿದ ರಾಗಿ ದೋಸೆ, ಮೃದುವಾಗಿ ಮಾಡಿದ ಚಪಾತಿ, ತಟ್ಟೆ ಇಡ್ಲಿ ಈ ಹೋಟೆಲ್‌ನ ವಿಶೇಷ ತಿಂಡಿ. ಇದರ ಜೊತೆ ಚಟ್ನಿ, ಪಲ್ಯ, ಸಾಗು ಕೊಡ್ತಾರೆ. ದರ 15 ರೂ. ಒಳಗೆ.
ಹೋಟೆಲ್‌ನ ತಿಂಡಿ, ಊಟ:
ಬೆಳಗ್ಗೆ ತಿಂಡಿ – ತಟ್ಟೆ ಇಡ್ಲಿ (10 ರೂ.), ವಡೆ (10 ರೂ.) ಸೆಟ್, ಮಸಾಲೆ ದೋಸೆ (40 ರೂ.), ಖಾಲಿ ದೋಸೆ (35 ರೂ.), ಚಪಾತಿ, ರೈಸ್‌ಬಾತ್, ಚಿತ್ರಾನ್ನ ಸಿಗುತ್ತೆ. ಮಧ್ಯಾಹ್ನ 12ರಿಂದ ಸಂಜೆ 4ಗಂಟೆವರೆಗೂ ಚಪಾತಿ ಊಟ(50 ರೂ.), ಅನ್ನ ಸಾಂಬಾರು (25 ರೂ.) ಇರುತ್ತೆ. ಸಂಜೆ ಮಸಾಲೆ ಇಡ್ಲಿ, ಈರುಳ್ಳಿ ದೋಸೆ, ವಿಶೇಷವಾಗಿ ರಾಗಿ ದೋಸೆ (ದರ 15 ರೂ.) ಮಾಡಲಾಗುತ್ತದೆ.
ಹೋಟೆಲ್ ಸಮಯ:
ಬೆಳಗ್ಗೆ 7 ರಿಂದ ರಾತ್ರಿ 8 ಗಂಟೆವರೆಗೆ ಇರುತ್ತೆ. ಭಾನುವಾರ ಬೆಳಗ್ಗೆ 11ಗಂಟೆಯವರೆಗೆ ಮಾತ್ರ ತೆರೆದಿರುತ್ತದೆ.
ಹೋಟೆಲ್ ವಿಳಾಸ:
ಖಾಸಗಿ ಬಸ್ ನಿಲ್ದಾಣದ ಹತ್ತಿರ, ವಿದ್ಯೋದಯ ಕಾಲೇಜು ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಎದುರು. ತಿ.ನರಸೀಪುರ ಪಟ್ಟಣ.
-ಭೋಗೇಶ್ ಆರ್.ಮೇಲುಕುಂಟೆ/ ಎಸ್.ಬಿ.ಪ್ರಕಾಶ್