ಮಂಗಳೂರು: ಕೋವಿಡ್ ನಡುವೇ ಚಿತ್ರರಂಗ ಗರಿಗೆದರುತ್ತಿದೆ. ಸಿನಿಮಾ ಮಂದಿರಗಳು ಆರಂಭವಾಗಿವೆ. ಇದೆಲ್ಲದರ ನಡುವೇ ಬಹುತೇಕ ಹೊಸಬರೇ ಸೇರಿ ನಿರ್ಮಿಸಿರುವ ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರತಂಡ ಶುಭ ಸಮಾಚಾರವೊಂದನ್ನು ಹಂಚಿಕೊಂಡಿದೆ.
ಹೌದು ! ‘ನಿಮ್ಮೆಲ್ಲರ ಆಶೀರ್ವಾದ’ ಚಿತ್ರದ ಶೀರ್ಷಿಕೆ ಗೀತೆಯನ್ನು ಖ್ಯಾತ ಬಹುಭಾಷಾ ಗಾಯಕ ರಘು ದೀಕ್ಷಿತ್ ಹಾಡಿದ್ದು, ಅತ್ಯುತ್ತಮವಾಗಿ ಮೂಡಿ ಬಂದಿದೆ. ಆ ಮೂಲಕ ಸುನಾದ್ ಗೌತಮ್ ಸಂಗೀತ ನಿರ್ದೇಶಿಸಿರುವ ಹಾಡು ರಘು ದೀಕ್ಷಿತ್ ಕಂಠದಲ್ಲಿ ಮೋಡಿ ಮಾಡಲು ತಯಾರಾಗುತ್ತಿದೆ. ರೆಕಾರ್ಡಿಂಗ್ ಪ್ರಕ್ರಿಯೆ ಪೂರ್ಣಗೊಂಡ ಶೀರ್ಷಿಕೆ ಗೀತೆಯು ಕೆಲವೇ ದಿನಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದ್ದು. ರಘು ದೀಕ್ಷಿತ್ ಹಾಡಿನ ಬಗ್ಗೆ ಸಿನಿಪ್ರಿಯರಲ್ಲಿ ಕುತೂಹಲ ಮೂಡಿದೆ.
ಪಕ್ಕಾ ಫ್ಯಾಮಿಲಿ ಎಂಟರ್‌ಟೈನ್ಮೆಂಟ್ ಕಥಾಹಂದರ ಹೊಂದಿರುವ “ನಿಮ್ಮೆಲ್ಲರ ಆಶೀರ್ವಾದ’ ಚಿತ್ರಕ್ಕೆ ಯುವ ನಿರ್ದೇಶಕ ರವಿಕಿರಣ್ ನಿರ್ದೇಶನ ಮಾಡಿದ್ದಾರೆ. ವರುಣ್ ಹೆಗ್ಡೆ ನಿರ್ಮಾಣ ಮಾಡಿದ್ದಾರೆ. ನವ ನಾಯಕ ಪ್ರತೀಕ್, ಪಾಯಲ್ ರಾಧಾಕೃಷ್ಣ ಈ ಚಿತ್ರದಲ್ಲಿ ಜೋಡಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ.
ಚಿತ್ರವು ಪೊಲೀಸ್ ಒಬ್ಬನ ದೈನಂದಿನ ಜೀವನದ ಕಥಾಹಂದರವನ್ನು ಹೊಂದಿದೆ. ಶೀರ್ಷಿಕೆ ಗೀತೆಯು ಆರಕ್ಷಕರ ಸೇವೆಯನ್ನು ಬಿಂಬಿಸುವಂತಿದ್ದು, ಚಿತ್ರದಲ್ಲಿ ಇನ್ನೂ ಮೂರು ಹಾಡುಗಳು ಇರಲಿವೆ. ಸದ್ಯ ಸಿನಿಮಾವು ಪೋಸ್ಟ್ ಪ್ರೊಡಕ್ಷನ್ ಹಂತದಲ್ಲಿದೆ. ಹಾಡುಗಳು ಅಂತಿಮ ಸ್ವರೂಪ ಪಡೆಯುತ್ತಿವೆ ಎಂದು ಚಿತ್ರತಂಡ ಹೇಳಿಕೊಂಡಿದೆ.
ಇನ್ನು “ನಿಮ್ಮೆಲ್ಲರ ಆಶೀರ್ವಾದ’ ಚಿತ್ರದಲ್ಲಿ ಪ್ರತೀಕ್ ಶೆಟ್ಟಿ, ಪಾಯಲ್ ರಾಧಾಕೃಷ್ಣ ಅವರೊಂದಿಗೆ ದಿನೇಶ್ ಮಂಗಳೂರು, ಗೋವಿಂದೇ ಗೌಡ (ಜಿ.ಜಿ), ಅರವಿಂದ ಬೋಳಾರ್, ಎಂ.ಎನ್ ಲಕ್ಷ್ಮೀದೇವಿ, ಸ್ವಾತಿ ಗುರುದತ್ ಮೊದಲಾದವರು ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರದ ಬಹುಪಾಲು ಚಿತ್ರೀಕರಣ ಉಡುಪಿ, ಮಲ್ಪೆ, ಪರ್ಕಳ ಸುತ್ತಮುತ್ತ ನಡೆಸಲಾಗಿದೆ. ಚಿತ್ರಕ್ಕೆ ಶರವಣನ್ ಜಿ. ಛಾಯಾಗ್ರಹಣ, ಸುರೇಶ್ ಆರ್ಮುಗಂ ಸಂಕಲನ ಕಾರ್ಯವಿದೆ. ರೂಪೇಂದ್ರ ಆಚಾರ್ ಕಲಾ ನಿರ್ದೇಶನವಿದೆ. ಸುನಾದ್ ಗೌತಮ್ ಚಿತ್ರದ ಹಾಡುಗಳಿಗೆ ಸಂಗೀತ ಸಂಯೋಜಿಸಿದ್ದಾರೆ. “ವರುಣ್ ಸಿನಿ ಕ್ರಿಯೇಷನ್ಸ್’ ಬ್ಯಾನರ್‌ನಲ್ಲಿ ವರುಣ್ ಹೆಗ್ಡೆ ಚಿತ್ರಕ್ಕೆ ಬಂಡವಾಳ ಹೂಡಿ ನಿರ್ಮಾಣ ಮಾಡಿದ್ದಾರೆ.