“ಹುಲಿದುರ್ಗ’ ಸಿನಿಮಾ ಬಂದಿರೋದು ನಿಮಗೆ ನೆನಪಿರಬಹುದು. ಈಗ ಆ ಚಿತ್ರದ ನಾಯಕ ಹಾಗೂ ನಿರ್ದೇಶಕ ಜೊತೆಯಾಗಿ ಮತ್ತೂಂದು ಸಿನಿಮಾ ಮಾಡಿದ್ದಾರೆ. ಆ ಚಿತ್ರಕ್ಕೆ “ರಾಘವೇಂದ್ರ’ ಎಂದು ಹೆಸರಿಡಲಾಗಿದೆ.
ಇತ್ತೀಚೆಗೆ ಚಿತ್ರದ ಟೀಸರ್ ಅನ್ನು ನಟ ಧೀರೇನ್ ರಾಮ್ಕುಮಾರ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭಕೋರಿದರು.
ವಿಕ್ರಮ್ ಯಶೋಧರ ನಿರ್ದೇಶನದ ಈ ಚಿತ್ರದಲ್ಲಿ ಸುಪ್ರೀತ್ ನಾಯಕರಾಗಿ ನಟಿಸಿದ್ದಾರೆ. ಪ್ರತೀಕ್ಷಾ ಈ ಚಿತ್ರದ ನಾಯಕಿ.
ನಿರ್ದೇಶಕ ವಿಕ್ರಮ್ ಮಾತನಾಡಿ, “ಇದು ನಾವಿಬ್ಬರೂ ಸೇರಿ ಮಾಡುತ್ತಿರುವ ಎರಡನೇ ಚಿತ್ರ. ಚಿತ್ರದಲ್ಲೊಂದು ಗಟ್ಟಿ ಸಂದೇಶವಿದೆ. ಒಬ್ಬ ಬಾರ್ ಸಪ್ಲೈಯರ್ ಹಾಗೂ ಅನಕ್ಷರಸ್ಥ ಹುಡುಗಿ ಇಬ್ಬರೂ ಸೇರಿಕೊಂಡು ನಮಗೆ ಬಾರ್ ಬೇಡ, ವಿದ್ಯಾಲಯ ಬೇಕು ಎಂದು ಹೋರಾಡುತ್ತಾರೆ. ನಮ್ಮೂರಿಗೆ ಏನೇನು ಬೇಕೋ ಅದನ್ನು ನಾವು ದೊಡ್ಡವರೇ ಸೇರಿಕೊಂಡು ನಿರ್ಧಾರ ಮಾಡಿಕೊಂಡರೆ, ಯಾವ ರಾಜಕೀಯ ವ್ಯಕ್ತಿಗಳೂ ಬೇಕಾಗಲ್ಲ. ಅವರಿಬ್ಬರ ಈ ನಿರ್ಧಾರಕ್ಕೆ ಮೊದಲು ಹಳ್ಳಿಯವರಿಂದ ವಿರೋಧವಿದ್ದರೂ, ನಂತರ ಅವರ ಉದ್ದೇಶ ಅರಿತು ಸಹಕಾರ ನೀಡುತ್ತಾರೆ’ ಎಂದು ಚಿತ್ರದ ಬಗ್ಗೆ ಹೇಳಿದರು.
ಚಿತ್ರವನ್ನು ಫೆಬ್ರವರಿ ಮೊದಲ ವಾರ ರಿಲೀಸ್ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ನಾಯಕ ಸುಪ್ರೀತ್ ಮಾತನಾಡಿ, “ನನಗೆ ಮೊದಲಿಂದಲೂ ಸಿನಿಮಾ ಹುಚ್ಚು. ನನ್ನ ತಂದೆ ನನ್ನಾಸೆಗೆ ಬೆನ್ನೆಲುಬಾಗಿ ನಿಂತರು. ಇದು ನನ್ನ ಎರಡನೇ ಚಿತ್ರ. ಹುಲಿದುರ್ಗ ನಂತರ ಒಂದೊಳ್ಳೇ ಸಿನಿಮಾ ಮಾಡಿದ್ದೇವೆ. ಚಿತ್ರ ಶೇ 80 ಕಮರ್ಷಿಯಲ್ ಆಗಿದ್ದು, ಉಳಿದ ಶೇ 20 ಮಾತ್ರ ಸಂದೇಶದಿಂದ ಕೂಡಿದೆ’ ಎಂದರು.
ಮೂರು ವರ್ಷಗಳಿಂದ ರಂಗಭೂಮಿಯಲ್ಲಿ ಕೆಲಸ ಮಾಡಿದ್ದು, ಮೊದಲ ಬಾರಿಗೆ ತೆರೆಮೇಲೆ ಬರುತ್ತಿದ್ದೇನೆ. ಚಿತ್ರದಲ್ಲಿ ತಂದೆಗೆ ಹೇಗೆ ಬೆಂಬಲವಾಗಿ ನಿಲ್ಲುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ ಎನ್ನುವುದು ನಾಯಕಿ ಪ್ರತೀಕ್ಷಾ ಮಾತು. ಚಿತ್ರದಲ್ಲಿ 4 ಹಾಡುಗಳಿದ್ದು, ಅಲೆಕ್ಸ್ ಸಂಗೀತ ನೀಡಿದ್ದಾರೆ.