Advertisement

ರಾಯರಿಗೆ ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರ: ಮೊದಲ ಬಾರಿ ತಮಿಳುನಾಡು ಸರ್ಕಾರದಿಂದ ಸೇವೆೆ

09:46 PM Aug 12, 2022 | Team Udayavani |

ರಾಯಚೂರು: ಮಂತ್ರಾಲಯದಲ್ಲಿ ಭಕ್ತರ ಆರಾಧ್ಯದೈವ, ಕಲಿಯುಗ ಕಾಮಧೇನು ಶ್ರೀ ರಾಘವೇಂದ್ರ ಸ್ವಾಮಿಗಳ 351ನೇ ಆರಾಧನಾ ಮಹೋತ್ಸವ ನಿಮಿತ್ತ ಶುಕ್ರವಾರ ಪೂರ್ವಾರಾಧನೆ ವಿಜೃಂಭಣೆಯಿಂದ ನೆರವೇರಿಸಲಾಯಿತು.

Advertisement

ಪ್ರತಿ ವರ್ಷ ಮಧ್ಯಾರಾಧನೆ ದಿನ ರಾಯರಿಗೆ ತಿರುಪತಿ ತಿಮ್ಮಪ್ಪನ ಸನ್ನಿಧಾನದಿಂದ ಶೇಷವಸ್ತ್ರ ಬರುವ ಸಂಪ್ರದಾಯವಿದೆ. ಈ ಬಾರಿ ಪೂರ್ವಾರಾಧನೆ ದಿನ ತಮಿಳುನಾಡಿನ ಶ್ರೀರಂಗಂ ದೇವಸ್ಥಾನದಿಂದ ಶ್ರೀ ರಂಗನಾಥ ಸ್ವಾಮಿಯ ಶೇಷವಸ್ತ್ರಗಳನ್ನು ರಾಯರ ಆರಾಧನೆಗೆ ತಂದಿದ್ದು ವಿಶೇಷವಾಗಿತ್ತು.

ಪೂರ್ವಾರಾಧನೆ ನಿಮಿತ್ತ ಬೆಳಗ್ಗೆಯಿಂದ ವಿವಿಧ ಧಾರ್ಮಿಕ ಕಾರ್ಯಕ್ರಮ ನೆರವೇರಿಸಲಾಯಿತು. ಬೆಳಗಿನ ಜಾವ ನಿರ್ಮಾಲ್ಯ ವಿಸರ್ಜನೆ, ಗ್ರಂಥ ಪಾರಾಯಣ ಬಳಿಕ ಶ್ರೀ ರಾಘವೇಂದ್ರ ಸ್ವಾಮಿಗಳ ಮೂಲ ವೃಂದಾವನಕ್ಕೆ ವಿಶೇಷ ಅಭಿಷೇಕ, ಅಲಂಕಾರ ಸೇವೆ ನೆರವೇರಿಸಲಾಯಿತು. ಜತೆಗೆ ರಾಯರ ಪ್ರಭಾವಳಿ ಇಟ್ಟು ಬೃಂದಾವನವನ್ನು ಅಲಂಕರಿಸಲಾಗಿತ್ತು.

ಶ್ರೀಮಠದ ಪೀಠಾಧಿಪತಿ ಶ್ರೀ ಸುಬುಧೇಂದ್ರ ತೀರ್ಥರು ಪ್ರಹ್ಲಾದರಾಜರ ಪಾದುಕೆ ಪೂಜೆ ನೆರವೇರಿಸಿದರು. ನಂತರ ಚಿನ್ನದ ಮಂಟಪದಲ್ಲಿ ಶ್ರೀಮೂಲ ರಘುಪತಿ ವೇದವಾಸ್ಯರ ಪೂಜೆ, ಅಲಂಕಾರ ಸಂತರ್ಪಣೆ, ಹಸ್ತೋದಕ, ಮಹಾಮಂಗಳಾರತಿ ಸೇವೆ ನೆರವೇರಿಸಲಾಯಿತು.

ಅದಕ್ಕೂ ಮುನ್ನ ಶ್ರೀರಂಗಂನಿಂದ ಆಗಮಿಸಿದ ಶೇಷವಸ್ತ್ರಗಳನ್ನು ಬರಮಾಡಿಕೊಂಡ ಶ್ರೀಗಳು, ಅವುಗಳನ್ನು ರಾಯರಿಗೆ ಸಮರ್ಪಿಸಿದರು. ಈ ವೇಳೆ ಆಶೀರ್ವಚನ ನೀಡಿ, ತಮಿಳುನಾಡು ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ವಿಶೇಷ ಆದೇಶ ಹೊರಡಿಸುವ ಮೂಲಕ ಮಂತ್ರಾಲಯ ರಾಯರ ಮಠಕ್ಕೆ ಶ್ರೀರಂಗಂ ದೇವಸ್ಥಾನದಿಂದ ಶೇಷವಸ್ತ್ರ ಕಳುಹಿಸಿರುವುದು ಖುಷಿಯ ವಿಚಾರ. ಇದು ಕೇವಲ ಒಂದು ದೇವಸ್ಥಾನಕ್ಕೆ ಸೀಮಿತವಾಗಬಾರದು. ಎಲ್ಲ ಸಂತರ ಸನ್ನಿಧಿಗಳಿಗೂ ಈ ರೀತಿ ಪ್ರಸಾದ ರೂಪದ ವಸ್ತ್ರ ಕಳುಹಿಸುವ ನಿಟ್ಟಿನಲ್ಲಿ ಸರ್ಕಾರಗಳು ಕ್ರಮ ವಹಿಸಬೇಕು. ಇಷ್ಟು ವರ್ಷ ತಿರುಪತಿಯಿಂದ ಸನ್ನಿಧಿಗೆ ತಿಮ್ಮಪ್ಪನ ಶೇಷವಸ್ತ್ರ ಬರುತ್ತಿತ್ತು. ಈ ವರ್ಷದಿಂದ ಶ್ರೀರಂಗಂ ಸನ್ನಿ ಧಿಯಿಂದಲೂ ಬರುತ್ತಿದೆ. ಈ ಸೇವೆ ನೀಡಲು ಬಂದ ತಮಿಳುನಾಡು ಸರ್ಕಾರದ ಪ್ರತಿನಿ ಧಿಗಳಿಗೆ ದೇವಸ್ಥಾನದ ಆಡಳಿತ ಮಂಡಳಿಗೆ ಧನ್ಯವಾದಗಳು ಎಂದರು.

Advertisement

ಬಳಿಕ ಭಕ್ತರಿಗೆ ತೀರ್ಥ ಪ್ರಸಾದ ವಿತರಿಸಲಾಯಿತು. ಶ್ರೀಮಠದ ಪ್ರವಚನ ಮಂದಿರದಲ್ಲಿ ಪೂರ್ವಾರಾಧನೆ ನಿಮಿತ್ತ ವಿವಿಧ ಪಂಡಿತರಿಂದ ಪ್ರವಚನ ಜರುಗಿತು. ಪೂರ್ವಾರಾಧನೆಗೆ ಕರ್ನಾಟಕ, ಆಂಧ್ರ, ತೆಲಂಗಾಣ, ತಮಿಳುನಾಡು ಸೇರಿ ದೇಶ-ವಿದೇಶಗಳಿಂದ ಭಕ್ತರ ದಂಡು ಹರಿದು ಬಂದಿದೆ. ತುಂಗಭದ್ರಾ ನದಿ ತುಂಬಿ ಹರಿಯುತ್ತಿದ್ದು, ಸ್ನಾನಕ್ಕೆ ಅವಕಾಶ ಇಲ್ಲದಿರುವುದು ಭಕ್ತರ ಬೇಸರಕ್ಕೆ ಕಾರಣವಾಯಿತು. ಅಪಾಯದ ಹಿನ್ನೆಲೆಯಲ್ಲಿ ಭಕ್ತರು ನದಿಗೆ ಇಳಿಯದಂತೆ ಪದೇಪದೆ ಸೂಚನೆ ನೀಡಲಾಗುತ್ತಿತ್ತು. ನದಿ ಪಾತ್ರದಲ್ಲಿರುವ ಶವರ್‌ಗಳಲ್ಲೇ ಸ್ನಾನ ಮಾಡಿದ ಭಕ್ತರು, ರಾಯರ ದರ್ಶನ ಪಡೆದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next