ನಟ ರಾಘವೇಂದ್ರ ರಾಜ್‌ಕುಮಾರ್ ಮುಖ್ಯಭೂಮಿಕೆಯಲ್ಲಿ ನಟಿಸಿರುವ “13′ ಚಿತ್ರ ಸೆ.15ರಂದು ತೆರೆಕಾಣುತ್ತಿದೆ. ಈ ಚಿತ್ರದಲ್ಲಿ ರಾಘಣ್ಣ ಅವರು ಮೋಹನ್ ಕುಮಾರ್ ಎಂಬ ಪಾತ್ರದಲ್ಲಿ ಕಾಣಿಸಿಕೊಂಡಿದ್ದರೆ, ನಟಿ ಶೃತಿ ಅವರು ಸಾಹಿರಾಭಾನು ಎಂಬ ಮುಸ್ಲಿಂ ಮಹಿಳೆಯ ಪಾತ್ರ ನಿರ್ವಹಿಸಿದ್ದಾರೆ.
ಚಿತ್ರದ ಬಿಡುಗಡೆ ಕುರಿತು ಮಾತನಾಡಲು ಇತ್ತೀಚೆಗೆ ಚಿತ್ರತಂಡ ಮಾಧ್ಯಮ ಮುಂದೆ ಬಂದಿತ್ತು. ಈ ಸಂದರ್ಭದಲ್ಲಿ ಮಾತನಾಡಿದ ರಾಘಣ್ಣ, “ನಾನು ಈ ಕಥೆ ಕೇಳಬೇಕಾದರೆ ಅಲ್ಲಿ ನನಗೆ ನಾಯಕನ ಪಾತ್ರ ಕಾಣಲಿಲ್ಲ. ಒಂದು ಪಾತ್ರ ಕೊನೇವರೆಗೆ ಪ್ರೇಕ್ಷಕರನ್ನು ಕರೆದುಕೊಂಡು ಹೋಗುತ್ತದೆ. ಅದೇ ನನ್ನ ಪಾತ್ರ ಅನಿಸಿತು. ಈ ಚಿತ್ರದ ನಿಜವಾದ ಹೀರೋ ಅಂದರೆ ಕಂಟೆಂಟ್. ಚಿತ್ರದಲ್ಲಿ ಇಬ್ಬರೂ ತಮ್ಮ ಜಾತಿ, ಧರ್ಮವನ್ನು ಬಿಟ್ಟು ಒಂದಾಗಿಬಿಡ್ತಾರೆ. ಅದೇ ನನಗೆ ಇಷ್ಟವಾಗಿದ್ದು’ ಎಂದು ಹೇಳಿದರು.
“ರಾಘಣ್ಣ, ಶೃತಿ ಅವರ ಸಿನಿಮಾದಲ್ಲಿ ನಾನಿರುವುದೇ ಖುಷಿಯ ವಿಚಾರ. ನಾನು ರಾಘಣ್ಣ ಮುಖಕ್ಕೆ ಹೊಗೆ ಬಿಡುವ ಸೀನ್ ಮಾಡಲ್ಲ ಅಂದಾಗ ರಾಘಣ್ಣ ಅವರೇ ಯಾಕೆ ಮಾಡಲ್ಲ ಅಂತ ನನ್ನನ್ನು ಹುರಿದುಂಬಿಸಿದರು. ಅವರು ತಮ್ಮ ಜೊತೆಯಲ್ಲಿ ನಟಿಸುವವರನ್ನು ಪ್ರೇರೇಪಿಸುತ್ತಾರೆ’ ಎಂದರು ಪ್ರಮೋದ್ ಶೆಟ್ಟಿ.
ನಿರ್ದೇಶಕ ನರೇಂದ್ರಬಾಬು ಮಾತನಾಡಿ, “ಸಿನಿಮಾ ನಾವಂದು ಕೊಂಡಿದ್ದಕ್ಕಿಂತಲೂ ಅದ್ಭುತವಾಗಿ ಮೂಡಿಬಂದಿದೆ. 13 ಕೋಟಿ ಹಣದ ಸುತ್ತ ನಡೆಯುವ ಕಥೆಯಿದು. ಇವತ್ತಿನವರೆಗೂ ಚಿತ್ರದ ಕೊನೆಗೆ ಏನಾಗುತ್ತೆ ಅಂತ ಯಾರಿಗೂ ಗೊತ್ತಿಲ್ಲ. ಎಲ್ಲರಿಗೂ ಅವರವರ ಪಾತ್ರ ಮಾತ್ರವೇ ಗೊತ್ತು. ಪಾರ್ಟ್ 2ಗೆ ಕಥೆ ರೆಡಿ ಇದೆ. ಹಾಡು, ಟೀಸರನ್ನು ನೋಡಿದವರೆಲ್ಲರೂ ಇಷ್ಟಪಟ್ಟಿದ್ದಾರೆ ಎಂದರು.
ನಿರ್ಮಾಪಕರಲ್ಲೊಬ್ಬರಾದ ಸಂಪತ್ ಮಾತನಾಡಿ, “ಕಾತುರದಿಂದ ಕಾಯುತ್ತಿರುವ ಸಿನಿಮಾವಿದು. ಚೆನ್ನಾಗಿ ಬಂದಿದೆ. ದೊಡ್ಡಮಟ್ಟದಲ್ಲಿ ರಿಲೀಸ್ ಮಾಡುತ್ತಿದ್ದೇವೆ. ಜಾಕ್ ಮಂಜು ಅವರು ಡಿಸ್ಟ್ರಿಬ್ಯೂಷನ್ ಮಾಡುತ್ತಿದ್ದಾರೆ’ ಎಂದರು