Advertisement

ಅಮ್ಮನ ಮನೆಯಲ್ಲಿ ಭಾವುಕ ರಾಘಣ್ಣ

12:30 AM Mar 08, 2019 | |

ಸುಮಾರು ಒಂದೂವರೆ ದಶಕದ ಬಳಿಕ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಮತ್ತೆ ಬೆಳ್ಳಿತೆರೆ ಮೇಲೆ ಬರುತ್ತಿದ್ದಾರೆ. ರಾಘವೇಂದ್ರ ರಾಜಕುಮಾರ್‌ ಅಭಿನಯದ “ಅಮ್ಮನ ಮನೆ’ ಚಿತ್ರ ಇಂದು ತೆರೆಗೆ ಬರುತ್ತಿದೆ. ಚಿತ್ರದ ಬಿಡುಗಡೆಗೂ ಮುನ್ನ “ಉದಯವಾಣಿ’ಗೆ ಮಾತಿಗೆ ಸಿಕ್ಕ ರಾಘಣ್ಣ  ತಮ್ಮ ಸಿನಿಮಾ ಕನಸುಗಳು, ರೀ-ಎಂಟ್ರಿ ಕೊಡುತ್ತಿರುವ ಬಗ್ಗೆ ಒಂದಷ್ಟು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. 

Advertisement

“ಸಾಮಾನ್ಯವಾಗಿ ಸತ್ತ ಮೇಲೆ ಎಲ್ಲರೂ ಸ್ವರ್ಗಕ್ಕೊ, ನರಕಕ್ಕೊ ಹೋಗ್ತಾರೆ ಅಂತಾರೆ. ಆದ್ರೆ ನಾನು ಬದುಕಿದ್ದಾಗಲೇ ಅಂಥ ಸ್ಥಿತಿಯನ್ನು ನೋಡಿದ್ದೆ. ಮತ್ತೆ ಬಣ್ಣ ಹಚ್ಚುವುದಿರಲಿ, ಬದುಕಿ ಮೊದಲಿನಂತಾಗುತ್ತೇನೆ ಅಂತಾನೂ ಅಂದುಕೊಂಡಿರಲಿಲ್ಲ. ಹೀಗಿತ್ತು ನನ್ನ ಸ್ಥಿತಿ…’ ಎನ್ನುತ್ತಾ, ಒಂದು ಕ್ಷಣ ಮೌನಕ್ಕೆ ಜಾರಿದರು ರಾಘವೇಂದ್ರ ರಾಜಕುಮಾರ್‌. 

ಹೌದು, “ಪಕ್ಕದ್ಮನೆ ಹುಡುಗಿ’ ಚಿತ್ರದ ಬಳಿಕ ರಾಘಣ್ಣ ಯಾವ ಚಿತ್ರಗಳಲ್ಲೂ ಕಾಣಿಸಿಕೊಳ್ಳಲಿಲ್ಲ. ಬಳಿಕ ಅವರ ಆರೋಗ್ಯ ಕೂಡ ಕೈಕೊಟ್ಟಿತು. ಸ್ಟ್ರೋಕ್‌ ಪರಿಣಾಮ ಅವರ ದೇಹದ ಒಂದು ಭಾಗ ಸ್ವಾಧೀನ ಕಳೆದುಕೊಂಡಿತು. ಇದೇ ವೇಳೆ ಅಣ್ಣಾವ್ರ ಮನೆಯಲ್ಲಿ ಅಮ್ಮನ ಸ್ಥಾನದಲ್ಲಿ ಎಲ್ಲರನ್ನೂ ಸಲಹಿ, ಪೋಷಿಸುತ್ತಿದ್ದ ಪಾರ್ವತಮ್ಮ ರಾಜಕುಮಾರ್‌ ಕೂಡ ಅನಾರೋಗ್ಯಕ್ಕೆ ತುತ್ತಾದರು. ಒಂದು ಕಡೆ ತನ್ನ ಅನಾರೋಗ್ಯ, ಮತ್ತೂಂದೆಡೆ ತನ್ನ ಜೀವದಂತಿ­ರುವ ತಾಯಿಯ ಅನಾರೋಗ್ಯ. ಅವರೇ ಹೇಳುವಂತೆ, ಈ ಎರಡೂ ಸನ್ನಿವೇಶಗಳು ಅವರನ್ನು ಅಕ್ಷರಶಃ ಅಸಹಾಯಕ ಸ್ಥಿತಿಗೆ ತಂದಿದ್ದವು. ತಮ್ಮ ಅನಾರೋಗ್ಯಕ್ಕಿಂತ ತಾಯಿಯ ಅನಾರೋಗ್ಯ ರಾಘಣ್ಣ ಅವರನ್ನು ಇನ್ನಿಲ್ಲದಂತೆ ಭಾದಿಸಿತ್ತು ಎನ್ನುವುದು ಅವರ ಪ್ರತಿ ಮಾತಿನಲ್ಲೂ ಕಾಣುತ್ತಿತ್ತು. 

ಹೆಂಡತಿ ಎಂದರೆ ಮತ್ತೂಬ್ಬಳು ತಾಯಿ…
ಒಂದೆಡೆ, ಪಾರ್ವತಮ್ಮ ರಾಜಕುಮಾರ್‌ ಅವರ ಅಂತಿಮ ದಿನಗಳಲ್ಲಿ ಅವರ ಸೇವೆ, ಶುಶ್ರೂಷೆಯನ್ನು ರಾಘಣ್ಣ ಮಾಡುತ್ತಿದ್ದರೆ, ಅವರ ಆರೋಗ್ಯವನ್ನು ಸಾಕಷ್ಟು ಮುತುವರ್ಜಿಯಿಂದ ನೋಡಿಕೊಳ್ಳುತ್ತಿದ್ದವರು ಅವರ ಧರ್ಮಪತ್ನಿ. “ತಾಯಿ ಎಲ್ಲಾ ಕಡೆ ಇರೋದಕ್ಕೆ ಆಗೋದಿಲ್ಲ. ಅದಕ್ಕಾಗಿ ಅವಳು ನಮ್ಮ ಜೊತೆನೇ ಬೇರೆ ಬೇರೆ ರೂಪದಲ್ಲಿ ಇರುತ್ತಾಳೆ. ನನ್ನ ತಾಯಿಯ ನಂತರ ನಾನು ಮತ್ತೂಬ್ಬ ತಾಯಿಯನ್ನ ಕಂಡಿದ್ದು, ನನ್ನ ಹೆಂಡತಿ ಮಂಗಳನಲ್ಲಿ. ನಾನು ಮೊದಲಿನಂತೆ ಆಗುತ್ತೇನೋ, ಇಲ್ಲವೋ ಎಂಬ ನಂಬಿಕೆ ನನಗೇ ಇಲ್ಲದಿದ್ದಾಗ. ಕಂಡ ದೇವರಿಗೆಲ್ಲಾ ಹರಕೆ ಹೊತ್ತು, ನನ್ನಲ್ಲಿ ಹೊಸ ಭರವಸೆಯನ್ನು ತುಂಬಿ, ಮತ್ತೆ ಈ ಸ್ಥಿತಿಗೆ ತರುವಂತೆ ಮಾಡಿದ್ದು ನನ್ನ ಹೆಂಡತಿ. ಈಗಲೂ ಅವಳೇ ನನಗೆ ಆಧಾರ. ಅವಳು ಬರೀ ನನ್ನ ಹೆಂಡತಿಯಲ್ಲ. ಎರಡನೇ ತಾಯಿ’ ಎನ್ನುವುದು ರಾಘಣ್ಣ ಅವರ ಮಾತು. 

ಕಂ ಬ್ಯಾಕ್‌… 
ಸುಮಾರು ಹನ್ನೆಡರು-ಹದಿಮೂರು ವರ್ಷ ಮತ್ತೆ ಚಿತ್ರದಲ್ಲಿ ಅಭಿನಯಿಸಬೇಕು ಎಂಬ ಯಾವ ಯೋಚನೆಗಳು ರಾಘಣ್ಣ ಅವರಿಗಿರಲಿಲ್ಲ. ಇದೇ ವೇಳೆ ನಿರ್ದೇಶಕ ನಿಖೀಲ್‌ ಮಂಜು,  “ಅಮ್ಮನ ಮನೆ’ ಚಿತ್ರದಲ್ಲಿ ರಾಜೀವ ಎಂಬ ಮುಖ್ಯ ಪಾತ್ರದಲ್ಲಿ ಅಭಿನಯಿಸುವಂತೆ ರಾಘಣ್ಣ ಅವರಲ್ಲಿ ಕೇಳಿಕೊಂಡರು. ಈ ಬಗ್ಗೆ ಮಾತ­ನಾ­ಡುವ ರಾಘಣ್ಣ, “ನನ್ನ ಪರಿಸ್ಥಿತಿಯ ಬಗ್ಗೆ ಸರಿ­ಯಾಗಿ ತಿಳಿದುಕೊಳ್ಳದೆ ನಿರ್ದೇಶಕ ನಿಖೀಲ್‌ ಮಂಜು ನನಗೆ ಈ ಪಾತ್ರವನ್ನು ಮಾಡಲು ಹೇಳುತ್ತಿದ್ದಾರೇನೋ ಅನಿಸಿತು. ನನ್ನ ಆರೋಗ್ಯ ಸ್ಥಿತಿಯ ಬಗ್ಗೆ ಅವರಿಗೆ ಅರ್ಥವಾಗುವಂತೆ ಹೇಳಿದೆ. “ನಂಜುಂಡಿ ಕಲ್ಯಾಣ’ದ ರಾಘವೇಂದ್ರ ರಾಜಕುಮಾರೇ ಬೇರೆ, ಈಗಿನ ರಾಘವೇಂದ್ರ ರಾಜಕುಮಾರೇ ಬೇರೆ. ಇವತ್ತಿನ ಕಮರ್ಷಿಯಲ್‌ ಸಿನಿಮಾಗಳ ಯುಗದಲ್ಲಿ ಒಂದು ಸಿನಿಮಾವನ್ನ ರೀಚ್‌ ಮಾಡಿಸುವಷ್ಟು ನನಗೆ ಮಾರ್ಕೇಟ್‌ ಇಲ್ಲ. ಹೀಗಿರುವಾಗ, ನನ್ನನ್ನೆ ಈ ಚಿತ್ರದಲ್ಲಿ ಅಭಿನಯಿಸಲು ಹೇಳುವುದಕ್ಕೆ ಕಾರಣವೇನು? ಅಂತ ಕೇಳಿದೆ. ಆದ್ರೆ ಅದಕ್ಕೆ ಅವರು, ನನಗೆ ಕಮರ್ಷಿಯಲ್‌ ಸಿನಿಮಾಗಳಲ್ಲಿದ್ದ ರಾಘಣ್ಣ ಬೇಕಿಲ್ಲ. ನಾನು ನೋಡಿದ ರಾಘಣ್ಣ ಬೇರೆ. ಮನೆಯ ಜವಾಬ್ದಾರಿಯಲ್ಲಿ ಮಹತ್ತರ ಪಾತ್ರವಹಿಸಿದ, ಕುಟುಂಬಕ್ಕೆ ಕನ್ನಡಿಯಂತಿದ್ದ ರಾಘಣ್ಣ ಬೇಕು. ಇದು ಅಂಥದ್ದೇ ಪಾತ್ರ ಆ ಪಾತ್ರವನ್ನು ನಿಮ್ಮಿಂದ ಮಾತ್ರ ಮಾಡಲು ಸಾಧ್ಯ ಎಂಬ ನಂಬಿಕೆ ನನಗಿದೆ ಅದಕ್ಕಾಗಿ ನೀವೆ ಆ ಪಾತ್ರ ಮಾಡಬೇಕು ಎಂಬ ಒತ್ತಾಯವನ್ನು ಮುಂದಿಟ್ಟರು. ಕೊನೆಗೆ ಚಿತ್ರದ ಕಥೆ, ಪಾತ್ರ ಕೇಳಿದಾಗ ತುಂಬಾ ಇಷ್ಟವಾಯ್ತು. ಆದ್ರೂ ಎಲ್ಲೋ ಮನಸ್ಸಿನ ಮೂಲೆಯಲ್ಲಿ ಭಯವಿತ್ತು. ನನ್ನಿಂದ ಏನಾದ್ರೂ ಶೂಟಿಂಗ್‌ ನಿಂತು ಹೋದ್ರೆ ಅನ್ನೋ ಭಯ ಕೂಡ ಕಾಡುತ್ತಿತ್ತು. ಕೊನೆಗೆ ಜೊತೆಯಲ್ಲಿದ್ದವರೆಲ್ಲರ ಒತ್ತಾಯ, ಸಹಕಾರದಿಂದ “ಅಮ್ಮನ ಮನೆ’ ಚಿತ್ರದ ಪಾತ್ರಕ್ಕೆ ಬಣ್ಣ ಹಚ್ಚಿದೆ’ ಎನ್ನುತ್ತಾರೆ ರಾಘಣ್ಣ. 

Advertisement

ಅಮ್ಮನ ಮನೆಯಲ್ಲಿ ಖುಷಿ-ನೆಮ್ಮದಿ
“ಅಮ್ಮನ ಮನೆ’ ಚಿತ್ರದ ಅನುಭವದ ಬಗ್ಗೆ ಮಾತನಾಡುವ ರಾಘಣ್ಣ, “ನನ್ನ ಜೀವನ­ದಲ್ಲಿ ಯಾವತ್ತಿಗೂ ಇದೊಂದು ವಿಭಿನ್ನ ಚಿತ್ರ. ನನ್ನ ಜೀವನ ಮುಗಿದು ಹೋಯ್ತು, ನನ್ನ ಕೈಯಲ್ಲಿ ಇನ್ನೇನು ಮಾಡಲಿಕ್ಕಾಗಲ್ಲ ಅನ್ನೋ ಸ್ಥಿತಿಯಲ್ಲಿದ್ದಾಗ, ನಾನೇನೂ ಮಾಡಬಲ್ಲೆ ಅನ್ನೋದನ್ನ ತೋರಿಸಿಕೊಟ್ಟ ಚಿತ್ರ. ಈ ಚಿತ್ರದಲ್ಲಿ ನಾನು ಮತ್ತೆ ಬಣ್ಣ ಹಚ್ಚಿದರೆ ಮೊದಲಿನಂತಾಗುತ್ತೇನೆ ಎಂದು ಜೊತೆಗಿದ್ದವರು ಭರವಸೆ ತುಂಬಿದರು. ನನ್ನ ಅಣ್ಣ-ತಮ್ಮ, ಮನೆಯವರು, ಅಭಿಮಾನಿಗಳು ಎಲ್ಲರೂ ಈ ಚಿತ್ರವನ್ನು ಮಾಡುವಾಗ ನನಗೆ ಬೆಂಬಲವಾಗಿ ನಿಂತರು. ಇಂಥದ್ದೊಂದು ಚಿತ್ರ ಮಾಡಿರುವುದರ ಬಗ್ಗೆ ಖುಷಿ, ನೆಮ್ಮದಿ ಎಲ್ಲವೂ ಇದೆ’ ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್‌. 

ಜೀವನಕ್ಕೆ ಹತ್ತಿರವಿರುವ ಪಾತ್ರ
ರಾಘವೇಂದ್ರ ರಾಜಕುಮಾರ್‌ ಅವರೇ ಹೇಳುವಂತೆ, “ಇಲ್ಲಿಯವರೆಗೆ ಮಾಡಿರುವ ಪಾತ್ರಗಳಿಗಿಂತ “ಅಮ್ಮನ ಮನೆ’ಯಲ್ಲಿ ಮಾಡಿರುವ ಪಾತ್ರ ಅವರ ಜೀವನಕ್ಕೆ ತುಂಬಾ ಹತ್ತಿರವಿರುವ ಪಾತ್ರ. ನಮ್ಮ ತಾಯಿಯ ಜೊತೆ ಅವರ ಕೊನೆಯ ದಿನಗಳನ್ನು ಕಳೆದಿದ್ದೇನೆ. ಅಂಥದ್ದೇ ಸನ್ನಿವೇಶಗಳು ಈ ಚಿತ್ರದಲ್ಲೂ ಇದೆ. ಮನೆಯ ಮಗನಾಗಿ ಏನೆಲ್ಲಾ ಮಾಡಬಹುದು, ಏನೆಲ್ಲಾ ಮಾಡಿದ್ದೇನೋ, ಅದೆಲ್ಲವನ್ನೂ ಈ ಚಿತ್ರದಲ್ಲೂ ಮಾಡಿದ್ದೇನೆ. ನನ್ನ ಪಾಲಿಗೆ ಈ ಸಿನಿಮಾ ಒಂದು ಪ್ರಸಾದ’ ಎನ್ನುತ್ತಾರೆ ರಾಘವೇಂದ್ರ ರಾಜಕುಮಾರ್‌.

ಜಿ. ಎಸ್‌. ಕಾರ್ತಿಕ ಸುಧನ್‌

Advertisement

Udayavani is now on Telegram. Click here to join our channel and stay updated with the latest news.

Next