ಏನೇನು ಕೃಷಿ : ಮಲ್ಲಿಗೆ, ಅಡಿಕೆ, ತೆಂಗು, ಬಾಳೆ, ಕಾಳುಮೆಣಸು,ತರಕಾರಿ.
ಎಷ್ಟು ವರ್ಷ: ಸುಮಾರು 30 ವರ್ಷಗಳಿಂದ
ಕೃಷಿ ಪ್ರದೇಶ: ಸುಮಾರು 3.5 ಎಕ್ರೆ
ಸಂಪರ್ಕ: 8861866920.
Advertisement
ನಾವು ಅದೆಷ್ಟು ಆಧುನಿಕಗೊಂಡರೂ ಉಣ್ಣುವ ಅನ್ನವನ್ನು ಸೃಷ್ಟಿಸಲಾರೆವು; ಅದನ್ನು ಬಿತ್ತಿ ಬೆಳೆದೇ ಆಗಬೇಕು. ಇದೇ ಹಿನ್ನೆಲೆಯಲ್ಲಿ ಉದಯವಾಣಿಯು ಕಿಸಾನ್ ದಿನಾಚರಣೆಯ ಸಂದರ್ಭ ರೈತರ ಸಾಧನೆಯ ಚಿತ್ರಣ ನೀಡುವ “ಕೃಷಿ ಕಥನ’ವನ್ನು ಆರಂಭಿಸಿದೆ. ಈ ಹೊಸ ಸರಣಿಯು ಇನ್ನಷ್ಟು ಮಂದಿಗೆ ಪ್ರೇರಣೆಯಾಗಲೆಂದು ಸರಕಾರದಿಂದ ಪ್ರಶಸ್ತಿ ಪುರಸ್ಕಾರಗಳಿಂದ ಗುರುತಿಸಲ್ಪಟ್ಟ ರೈತರನ್ನು ಪರಿಚಯಿಸುವ ಪ್ರಯತ್ನ.
ರಾಘವೇಂದ್ರ ನಾಯಕ್ ತನ್ನ ಜಮೀನಿನಲ್ಲಿ ಮಲ್ಲಿಗೆ ಕೃಷಿಯೊಂದಿಗೆ ತೋಟಗಾರಿಕೆ ಬೆಳೆಗಳಾದ ಅಡಿಕೆ, ತೆಂಗು, ಬಾಳೆ, ಕಾಳುಮೆಣಸು ಬೆಳೆಯುವುದರೊಂದಿಗೆ ಮುಂಗಾರು ಹಂಗಾಮಿಗೆ ಭತ್ತ ಬೆಳೆಯುತ್ತಿದ್ದಾರೆ. ಹಾಲು ಬೆಂಡೆ, ಹರಿವೆ, ಗುಳ್ಳ, ಕೆಂಪುಗೆಣಸು, ತೊಂಡೆ, ಸೌತೆ, ಹೀರೆ, ಬಸಳೆಯನ್ನು ಬೆಳೆದು ಸರಾಸರಿ ತಿಂಗಳಿಗೆ 40 ರಿಂದ 45 ಸಾವಿರ ರೂ. ಆದಾಯ ಗಳಿಸುತ್ತಿದ್ದಾರೆ. ಕಲ್ಲೊಟ್ಟು ಪರಿಸರದ ಹೈನುಗಾರರಿಗಾಗಿ ಶಿರ್ವ ಹಾಲು ಉತ್ಪಾದಕರ ಘಟಕ ಪ್ರಾರಂಭಿಸಿ ಮಾದರಿ ಕೃಷಿ ಪಂಡಿತರೆನಿಸಿಕೊಂಡಿದ್ದಾರೆ.
Related Articles
ಕೃಷಿ ಮಾಡಲು ನಮಗೆ ಜಾಗವೇ ಇಲ್ಲ ಎನ್ನುವ ಕೃಷಿಕರಿಗಾಗಿ ಮನೆಯ ತಾರಸಿ ಅಥವಾ ಲಭ್ಯವಿದ್ದ ಜಾಗದಲ್ಲಿ ಮಲ್ಲಿಗೆ ಯಾ ಇನ್ನಿತರ ತರಕಾರಿ ಬೆಳೆ ಬೆಳೆಯುವಲ್ಲಿ ಹೊಸ ತಾಂತ್ರಿಕತೆಯ ಗ್ರೋ ಬ್ಯಾಗ್ ತಂತ್ರಜ್ಞಾನವನ್ನು ಪರಿಚಯಿಸಿದ್ದಾರೆ. ಚೆನ್ನೈನಿಂದ ತರಿಸಲಾದ 2, 11/2ಅಡಿ (ಎರಡು,ಒಂದೂವರೆ ಅಡಿ)ಸುತ್ತಳತೆಯ ಗ್ರೋಬ್ಯಾಗ್‌ನಲ್ಲಿ ಬೆಳೆ ಬೆಳೆಸುವ ಪ್ರಯೋಗವನ್ನು ನಡೆಸುತ್ತಿದ್ದಾರೆ. ಗ್ರೋಬ್ಯಾಗ್‌ನಲ್ಲಿ ಅರ್ಧದಷ್ಟು ಸಾವಯವ ಗೊಬ್ಬರ ತುಂಬಿಸಿ ನಾಟಿ ಮಾಡುವುದರಿಂದ ಕೀಟ ರೋಗ ಬಾಧೆ,ನೀರು ನಿರ್ವಹಣೆ,ಬೇರೆ ಮರಗಳ ಬೇರುಗಳಿಂದ ತೊಂದರೆಯನ್ನು ತಪ್ಪಿಸಬಹುದೆಂದು ಸಲಹೆ ನೀಡಿದ್ದಾರೆ.
Advertisement
ಮಣ್ಣಿನ ಸಂರಕ್ಷಣೆಕೃಷಿ ಎನ್ನುವುದು ಇಂದು ನಾಳೆಯ ಯೋಚನೆ ಯಾಗಬಾರದು. ಭವಿಷ್ಯದ ಯೋಜನೆಯಾಗಬೇಕು. ಈ ನಿಟ್ಟಿನಲ್ಲಿ ಸಾವಯವ ವಿಧಾನ, ಲಘು ಪೋಷಕಾಂಶ ಬಳಕೆ, ಮಣ್ಣು ಪರೀಕ್ಷೆ, ಬೀಜೋತ್ಪಾದನೆ, ಸಸ್ಯ ಸಂರಕ್ಷಣೆ, ಗೋಬರ್ ಗ್ಯಾಸ್, ಬಯೋ ಡೈಜೆಸ್ಟರ್, ಜೀವಾಣು ಹಾಗೂ ಹಸಿರೆಲೆ ಗೊಬ್ಬರ ಬಳಕೆ, ಪರ್ಯಾಯ ಬೆಳೆ ಅನುಸರಿಸುತ್ತಿದ್ದಾರೆ. ಪುನರ್‌ಪುಳಿ, ಗೇರು ಜ್ಯೂಸ್ ತಯಾರಿಸಿ ಮಾರುಕಟ್ಟೆ ಮಾಡುತ್ತಿದ್ದಾರೆ. ಹಲಸಿನ ಉತ್ಪನ್ನಗಳನ್ನು ತಯಾರಿಸುತ್ತಾರೆ. ಟಿಲ್ಲರ್, ಬಯೋಮಾಸ್ ಡ್ರೈಯರ್, ಪವರ್ ಸ್ಪ್ರೆಯರ್, ಜೀಪ್, ಹುಲ್ಲು ಕತ್ತರಿಸುವ, ಕಳೆ ಕೊಚ್ಚುವ ಯಂತ್ರಗಳನ್ನು ಹೊಂದಿದ್ದಾರೆ. ಅರಸಿ ಬಂದ ಪ್ರಶಸ್ತಿಗಳು
ಮಾದರಿ ಕೃಷಿಕನಿಗೆ ಅನೇಕ ಕೃಷಿ ಪ್ರಶಸ್ತಿಗಳು ಅರಸಿಕೊಂಡು ಬಂದಿವೆ. 2017-18ರಲ್ಲಿ ರಾಜ್ಯ ಮಟ್ಟದ ಕೃಷಿ ಪಂಡಿತ ಪ್ರಶಸ್ತಿ, 2015ರಲ್ಲಿಗಾಂಧಿ ಕೃಷಿ ವಿಜ್ಞಾನ ಕೇಂದ್ರದಿಂದ ಪ್ರಗತಿಪರ ರೈತ ಪ್ರಶಸ್ತಿ,2015ರಲ್ಲಿ ಆತ್ಮ ಯೋಜನೆಯ ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ,2013ರಲ್ಲಿ ಭತ್ತದ ಬೆಳೆಯಲ್ಲಿ ಜಿಲ್ಲಾ ಮಟ್ಟದ ಪ್ರಥಮ ಕೃಷಿಕ ಪ್ರಶಸ್ತಿಯ ಜತೆಗೆ 2018ರ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಕೃಷಿಯ ಕುರಿತು ಮಾರ್ಗದರ್ಶನ
ಯುವಜನತೆ ಕೃಷಿ ಚಟುವಟಿಕೆಗಳಿಂದ ವಿಮುಖರಾಗುತ್ತಿರುವ ಸಂದರ್ಭದಲ್ಲಿ ಯಾಂತ್ರಿಕ ಮತ್ತು ತಾಂತ್ರಿಕತೆ ಅಳವಡಿಸಿಕೊಂಡು ರೈತ ಕ್ಷೇತ್ರ ಪಾಠಶಾಲೆಗಳ ಮೂಲಕ ಯುವಕರಿಗೆ, ಆಸಕ್ತ ಕೃಷಿಕರಿಗೆ ಮಾಹಿತಿ ನೀಡುತ್ತಿದ್ದೇನೆ. ವಿವಿಧ ಶಾಲೆಗಳಿಗೆ ಹೋಗಿ ರೈತ ಕೃಷಿ ಮಾಹಿತಿ ಶಿಬಿರ ನಡೆಸಿ ತರಕಾರಿ ಬೀಜ ವಿತರಣೆ ,ಶಾಲಾ ಕೈತೋಟ ರಚಿಸಲು ವಿದ್ಯಾರ್ಥಿಗಳಿಗೆ ಮಾಹಿತಿ ಮತ್ತು ಮಾರ್ಗದರ್ಶನದ ಮೂಲಕ ಪ್ರೇರಣೆ ನೀಡಲಾಗುತ್ತಿದೆ.ಅಲ್ಲದೆ ವಿದ್ಯಾರ್ಥಿಗಳನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಬಹುಮಾನವನ್ನು ವಿತರಿಸಲಾಗುತ್ತಿದೆ.ಸಾವಯವ ಪದ್ಧತಿಯ ಮೂಲಕ ಕೃಷಿ ಸರಳವೂ ಲಾಭದಾಯಕವೂ ಆಗಿದ್ದು ವಿವಿಧ ರೀತಿಯ ಬೆಳೆಗಳನ್ನು ಬೆಳೆದು ಲಾಭಗಳಿಸಲು ಸಾಧ್ಯವಿದೆ.
-ಕಲ್ಲೊಟ್ಟು ರಾಘವೇಂದ್ರ ನಾಯಕ್,ಕೃಷಿಕ. ಸತೀಶ್ಚಂದ್ರ ಶೆಟ್ಟಿ, ಶಿರ್ವ