Advertisement

ರಾಘವೇಂದ್ರ ಮಹಿಮೆ: ಕರುನಾಡಿನ ವಾರಿಯರ್

05:05 AM May 26, 2020 | Lakshmi GovindaRaj |

ಸಿಂಗಾಪುರದಲ್ಲೂ ಕೊರೊನಾ ಕಾಟ. ಲಾಕ್‌ಡೌನ್‌ ತಲೆಬೇನೆ ತಪ್ಪಿಲ್ಲ. ಇಂಥ ಸಂದರ್ಭದಲ್ಲಿ ಅಲ್ಲಿರುವ ಕನ್ನಡಿಗ ಭಾರತೀಯ ಮೆಡಿಕಲ್‌ ವಾರಿಯರ್ಸ್‌ನ ಹಸಿವು ನೀಗಿಸುವ ಕಾಯಕದಲ್ಲಿ ತೊಡಗಿರುವವರು ಬೆಂಗಳೂರಿನ ರಾಘವೇಂದ್ರ  ಶಾಸ್ತ್ರಿ. ಸುಮಾರು 7 ಆಸ್ಪತ್ರೆಯ ಸಾವಿರಾರು ಸಿಬ್ಬಂದಿಗೆ ಇವರ ರೆಸ್ಟೋರೆಂಟಿನ ತಿಂಡಿಯೇ ಕೈ ತುತ್ತಾಗಿದೆ…

Advertisement

ಲಾಕ್‌ಡೌನ್‌ ಬಿಸಿ ಸಿಂಗಾಪುರವನ್ನೂ ಬಿಡಲಿಲ್ಲ. ಕೊರೊನಾಕ್ಕೆ ಬೆದರಿದ ಜನ ಮನೆಯೊಳಗೇ ಉಳಿದಾಗ, ಬೀದಿಗಳೆಲ್ಲಾ ಖಾಲಿಯಾದವು. ಜಗತ್ತಿನ ಶಾಪಿಂಗ್‌ ರಾಜಧಾನಿ ಎನಿಸಿರುವ ಸಿಂಗಾಪುರ, ಬಾಯಿ ಮೇಲೆ ಬೆರಳಿಟ್ಟುಕೊಂಡು ಕುಳಿತಿತು. ಇಂಥ ಸಂದರ್ಭದಲ್ಲೂ, ಅಲ್ಲಿನ ಸೆರಂಗೂನ್‌ ರಸ್ತೆಯಲ್ಲಿ ಒಂದು ಹೋಟೆಲ್‌ ಮಾತ್ರ ಬಾಗಿಲು ತೆರೆದಿತ್ತು. ಅದರ ಹೆಸರು- ಎಂ.ಟಿ.ಆರ್‌! ಕರೆಕ್ಡ್, ಅದರ ಪೂರ್ತಿ ಹೆಸರು, ಮಾವಳ್ಳಿ ಟಿಫ‌ನ್‌ ರೂಂ.

ಆದರೆ, ಬೆಂಗಳೂರಿನ  ಎಂ.ಟಿ.ಆರ್‌.ಗೂ ಇದಕ್ಕೂ ಯಾವುದೇ ಸಂಬಂಧ ಇಲ್ಲ. ಸಿಂಗಾಪೂರ್‌ನ ಜನತೆ, ಇದೇನು? ಎಲ್ಲರಿಗೂ ಒಂದು ನಿಯಮ ಆದರೆ, ಇವರಿಗೊಂದು ನಿಯಮವಾ ಅಂತ ನೋಡಿದರೆ, ಒಳಗೆ ಬಿಸಿ ಬಿಸಿ ಇಡ್ಲಿ, ಉಪ್ಪಿಟ್ಟು, ಕೇಸರಿಬಾತ್‌ ಬೇಯುತ್ತಿದೆ. ಘಮಘಮ ಕಾಫಿ ತಯಾರಾಗುತ್ತಿದೆ. ಬೆಂಗಳೂರಿನವರು ಶಾಸ್ತ್ರಿ ಇವನ್ನೆಲ್ಲಾ ಯಾರಿಗೆ ಮಾರ್ತೀರೀ ಎಂದು ಅಲ್ಲಿನ ಅಧಿಕಾರಿಗಳು ಕೇಳಬೇಕು ಅಂದುಕೊಳ್ಳುವ ಹೊತ್ತಿಗೆ ಸತ್ಯ ತಿಳಿಯಿತು. ಕರ್ನಾಟಕದ ರಾಘವೇಂದ್ರ ಶಾಸ್ತ್ರಿ  ಅಂಡ್‌ ಟೀಮ…, ಸುತ್ತಮುತ್ತಲಿನ ಆಸ್ಪತ್ರೆಗಳಲ್ಲಿ ಕೊರೊನಾ ವಾರಿಯರ್ಸ್‌ ಆಗಿ ದುಡಿಯುತ್ತಿರುವ ಭಾರತೀಯ, ಕರ್ನಾಟಕದ ವೈದ್ಯರ ಹೊಟ್ಟೆ ತುಂಬಿಸುವುದಕ್ಕಾಗಿಯೇ ತಿಂಡಿಗಳನ್ನು ತಯಾರು ಮಾಡುತ್ತಿದೆ ಅಂತ.

ಬೆಂಗಳೂರಿನವರಾದ ರಾಘವೇಂದ್ರ ಶಾಸ್ತ್ರಿ, ಸಿಂಗಾಪುರ್‌ನಲ್ಲಿ ಎಂ.ಟಿ.ಆರ್‌. ಅನ್ನೋ ಹೋಟೆಲ್‌ ಆರಂಭಿಸಿದ್ದಾರೆ. ಕಳೆದ ಐದು ವರ್ಷಗಳಿಂದ ಅಲ್ಲಿನವರಿಗೆ, ಕರ್ನಾಟಕದ ಕಾಫಿಯ ಪರಿಮಳ, ಉದ್ದಿನವಡೆ, ಉಪ್ಪಿಟ್ಟಿನ ರುಚಿ  ಹತ್ತಿಸಿದ್ದಾರೆ. ಸಿಂಗಾಪುರ್‌ ನಲ್ಲೂ ಲಾಕ್‌ಡೌನ್‌ ಘೋಷಣೆ ಆದನಂತರ, ಲಾಭ ಮಾಡುವ ಆಸೆಗೆ ಕೈಮುಗಿದು, ಕೊರೊನಾ ವಾರಿಯರ್ಸ್‌ನ ಹೊಟ್ಟೆ ತುಂಬಿಸುವ ಕೆಲಸದಲ್ಲಿ ನಿರತರಾಗಿದ್ದಾರೆ.

ಇಂಥ ಅವಕಾಶ ಸಿಗಲ್ಲ…: ಲಾಕ್‌ಡೌನ್‌  ಆದಾಗ ಜಗತ್ತು ತಲ್ಲಣಗೊಂಡಿತ್ತು. ನಾನು, ನಮ್ಮವರಿಗಾಗಿ ಏನಾದರೂ ಮಾಡಬೇಕಲ್ಲ ಅಂತ ಯೋಚನೆ ಮಾಡುತ್ತಿದ್ದೆ. ಗೆಳೆಯ, ವೈದ್ಯ ರವಿಶಂಕರ್‌ ದಿಡ್ಡಾಪುರ್‌ ಅವರಲ್ಲಿ ಸಲಹೆ ಕೇಳಿದಾಗ ಅವರು- “ನಮ್ಮ ವೈದ್ಯ ಸಮುದಾಯಕ್ಕೆ  ಫ್ರೆಶ್‌ ಕಾಫಿ, ಟೀ, ಬಾದಾಮಿ ಹಾಲಿನಂಥ ಪಾನೀಯ, ಸ್ನ್ಯಾಕ್ಸ್ ಅಗತ್ಯ ಇದೆ’ ಅಂದರು. ನಮ್ಮ ಸೇವೆ, ಕಾಫಿಯಿಂದ ಶುರುವಾಯಿತು.

Advertisement

ಈಗ, ಶಾವಿಗೆ ಬಾತ್‌, ಉಪ್ಪಿಟ್ಟು, ಮಂಗಳೂರು ಬನ್ಸ್, ಉದ್ದಿನವಡೆ, ಇಡ್ಲಿ… ಹೀಗೆ, ಹಲವು ತಿಂಡಿಗಳು  ವೈದ್ಯರ ಹೊಟ್ಟೆ ತುಂಬಿಸುತ್ತಿವೆ. ದಿನಕ್ಕೆ ಒಂದುಹೊತ್ತಿಗೆ 200- 300 ಜನ ಈ ಸೇವೆಯ ಲಾಭ ಪಡೆಯುತ್ತಿದ್ದಾರೆ’ ಅಂತಾರೆ ರಾಘವೇಂದ್ರ ಶಾಸ್ತ್ರಿ. ಹಣಕ್ಕಿಂತ ಅಂತಃಕರಣ ಮುಖ್ಯ. ಹಣವನ್ನು ಯಾವಾಗ ಬೇಕಾದರೂ, ಎಲ್ಲಿ ಬೇಕಾದರೂ  ಸಂಪಾದನೆ ಮಾಡಬಹುದು. ಆದರೆ, ಈ ರೀತಿ ಸೇವೆಯ ಭಾಗ್ಯ ದೊರೆಯೋದಿಲ್ಲ, ಅನ್ನೋದು ಅವರ ಅನಿಸಿಕೆ.

ಸಾವಿರಾರು ಜನರ  ಹೊಟ್ಟೆ ತುಂಬಿದೆ ಈ ಸೇವೆ ಶುರುವಾಗಿ ಸುಮಾರು ಎರಡು ತಿಂಗಳಾಗುತ್ತಾ ಬಂತು. ತಿಂಡಿ, ಪಾನೀಯ,  ಹಣ್ಣುಗಳಿಗೆ ಹೆಚ್ಚುಕಮ್ಮಿ 1ಲಕ್ಷ ಸಿಂಗಪೂರ್‌ ಡಾಲರ್‌ (55 ಲಕ್ಷ ರೂ.)ಖರ್ಚಾಗಿದೆ. ವಾರಕ್ಕೆ ನಾಲ್ಕು ದಿನ ನೂರಾರು ನರ್ಸ್‌ಗಳು, ವೈದ್ಯರ ಹೊಟ್ಟೆ ತುಂಬಿಸುತ್ತಿದೆ ಶಾಸ್ತ್ರಿ ಅಂಡ್‌ ಟೀಂ. ಸಿಂಗಪೂರ್‌ ಜನರಲ್‌ ಹಾಸ್ಪಿಟಲ್‌, ನ್ಯಾಷನಲ್‌  ಯೂನಿವರ್ಸಿಟಿ ಹಾಸ್ಪಿಟಲ್‌, ಟಿಟಿಎಸ್‌ ಹಾಸ್ಪಿಟಲ್‌, ವುಡ್‌ ಲ್ಯಾಂಡ್ ಕಮ್ಯೂನಿಟಿ ಹಾಸ್ಪಿಟಲ್‌, ಬ್ರೈಟ್‌ ವಿಷನ್‌ ಹಾಸ್ಪಿಟಲ್‌, ಹೀಗೆ… 7 ಆಸ್ಪತ್ರೆಯ ಸಾವಿರಾರು ಸಿಬ್ಬಂದಿಯ ಹೊಟ್ಟೆ ತುಂಬಿಸುವ ಹೊಣೆಯನ್ನು ರಾಘವೇಂದ್ರ  ಶಾಸ್ತ್ರಿಗಳೇ ಹೊತ್ತುಕೊಂಡಿದ್ದಾರೆ.

ಈ ತನಕ 10 ಸಾವಿರದಷ್ಟು ಹಣ್ಣುಗಳ ಬ್ಯಾಗ್‌ ವಿತರಣೆಯಾಗಿದೆ. 8 ಸಾವಿರದಷ್ಟು ಶಾವಿಗೆ ಬಾತ್‌, ಮೂರು ಸಾವಿರದಷ್ಟು ಖಾರಾಬಾತ್‌, ನಾಲ್ಕು ಸಾವಿರದಷ್ಟು ಉದ್ದಿನವಡೆ, ಇನ್ನು ಕಾಫಿ, ಟೀ,  ಬಾದಾಮಿ ಹಾಲು ಲೆಕ್ಕಕ್ಕೆ ಇಲ್ಲ. ಮಂಗಳವಾರದಿಂದ ಶುಕ್ರವಾರದ ತನಕ, ಅಂದರೆ ವಾರದ ನಾಲ್ಕು ದಿನಗಳು, ಇವರ ಸೇವೆ ಇರುತ್ತದೆ. ತಯಾರಾದ ಆಹಾರ ಪದಾರ್ಥಗಳನ್ನು ಕೊಂಡೊಯ್ಯಲು 8 ವಾಹನಗಳಿವೆ. 24 ಮಂದಿ ನೌಕರರು  ಇದ್ದಾರೆ. ರಾಘವೇಂದ್ರರು ತಮ್ಮ ಪಾಡಿಗೆ ತಾವು ಈ ಸೇವೆ ಮಾಡುತ್ತಿದ್ದರು. ಮೊನ್ನೆಯಷ್ಟೇ,

ಸಿಂಗಾಪುರದ ಭಾರತೀಯ ಹೈ ಕಮಿಷನರ್‌ ಜಾವೇದ್‌ ಅಶ್ರಾಫ್, ಎಂ.ಟಿ.ಆರ್‌.ಗೆ ಭೇಟಿ ಕೊಟ್ಟರು. ಶಾಸ್ತ್ರಿಗಳ ಸೇವೆ ನೋಡಿ, ತಾವೂ ಕೂತು,  ಒಂದಷ್ಟು ತಿಂಡಿಗಳನ್ನು ಪ್ಯಾಕ್‌ ಮಾಡಿದರು. ಅದು ಸುದ್ದಿಯಾದಾಗಲೇ, ಇಡೀ ಸಿಂಗಾಪುರ್‌ ಶಾಸ್ತ್ರಿಗಳ ಕಡೆ ತಿರುಗಿ, ಒಳ್ಳೆ ಕೆಲ್ಸ ಮಾಡ್ತಾ ಇದ್ದೀರ ಅಂತ ಕಣ್ಣು ಮಿಟುಕಿಸಿದ್ದು. ಮುಂದಿನವಾರ, ಸಿಂಗಾಪುರ್‌ ಪ್ರಧಾನಿಗಳೂ, ಶಾಸ್ತ್ರಿಯವರ ಹೋಟೆಲಿಗೆ ಬರ್ತಾರಂತೆ. ವೈಮಾನಿಕ ಸಮೀಕ್ಷೆಗಲ್ಲ. ಆಹಾರ  ಪೊಟ್ಟಣದ ಪಾರ್ಸೆಲ್‌ ಕಟ್ಟೋಕೆ ಬರ್ತಾರಂತೆ! ಎಲ್ಲಾ ರಾಘವೇಂದ್ರ ಮಯ.

* ಕಟ್ಟೆ ಗುರುರಾಜ್‌

Advertisement

Udayavani is now on Telegram. Click here to join our channel and stay updated with the latest news.

Next