Advertisement

“ಅಮ್ಮನ ಮನೆ’ಯಲ್ಲಿ ನಿಂತ ರಾಘಣ್ಣ

05:58 AM Mar 03, 2019 | Team Udayavani |

ಸುಮಾರು ಹದಿನಾಲ್ಕು ವರ್ಷಗಳ ಹಿಂದೆ ತೆರೆಕಂಡ “ಪಕ್ಕದ್ಮನೆ ಹುಡುಗಿ’ ಚಿತ್ರದ ನಂತರ ನಟ ಕಂ ನಿರ್ಮಾಪಕ ರಾಘವೇಂದ್ರ ರಾಜಕುಮಾರ್‌ ಯಾವುದೇ ಪಾತ್ರಗಳಿಗೆ ಬಣ್ಣ ಹಚ್ಚಿರಲಿಲ್ಲ. ಹಲವು ಚಿತ್ರಗಳಲ್ಲಿ ನಟಿಸುವ ಆಫ‌ರ್‌ಗಳು ಹುಡುಕಿಕೊಂಡು ಬಂದರೂ, ತಮ್ಮ ಅನಾರೋಗ್ಯ ಮತ್ತು ಚಿತ್ರ ನಿರ್ಮಾಣದಲ್ಲಿ ಬ್ಯುಸಿಯಾಗಿದ್ದ ಕಾರಣ ರಾಘಣ್ಣ ಯಾವ ಚಿತ್ರದಲ್ಲೂ ತೆರೆಮೇಲೆ ಕಾಣಿಸಿಕೊಳ್ಳುವ ಮನಸ್ಸು ಮಾಡಿರಲಿಲ್ಲ. ಆದರೆ ಇದೀಗ ಬಣ್ಣದ ಬದುಕಿನ ನಂಟು, ಸೆಳೆತ ಮತ್ತೆ ರಾಘವೇಂದ್ರ ರಾಜಕುಮಾರ್‌ ಅವರನ್ನು ಬಣ್ಣ ಹಚ್ಚುವಂತೆ ಮಾಡಿದೆ. 

Advertisement

ಹೌದು, ದಶಕದ ಬಳಿಕ ರಾಘವೇಂದ್ರ ರಾಜಕುಮಾರ್‌ “ಅಮ್ಮನ ಮನೆ’ ಚಿತ್ರದಲ್ಲಿ ಪ್ರಮುಖ ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ. ಸದ್ಯ ಅಂತಿಮ ಹಂತದ ಪ್ರಮೋಷನ್‌ ಕೆಲಸಗಳಲ್ಲಿ ನಿರತವಾಗಿರುವ “ಅಮ್ಮನ ಮನೆ’ ಚಿತ್ರ ಇದೇ ಮಾ.8 ರಂದು ಬಿಡುಗಡೆ ಕಾಣುತ್ತಿದೆ. ಇನ್ನು “ಅಮ್ಮನ ಮನೆ’ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಅವರ ಪಾತ್ರವೇನು, ಅವರ ಗೆಟಪ್‌ ಹೇಗಿರಲಿದೆ ಎಂಬ ಬಗ್ಗೆ ಸಹಜವಾಗಿಯೇ ಅನೇಕರಿಗೆ ಕುತೂಹಲವಿತ್ತು.

ಚಿತ್ರತಂಡ ರಿಲೀಸ್‌ ಮಾಡಿರುವ ಪೋಸ್ಟರ್‌, ಟ್ರೇಲರ್‌ಗಳಲ್ಲಿ ಅದಕ್ಕೆ ಸಂಬಂಧಿಸಿದಂತೆ ಒಂದಷ್ಟು ಸುಳಿವನ್ನು ಬಿಟ್ಟುಕೊಟ್ಟಿದೆ. ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ರಾಜೀವ ಎಂಬ ಮಧ್ಯ ವಯಸ್ಸಿನ ಪ್ರಬುದ್ಧ ವ್ಯಕ್ತಿಯ ಪಾತ್ರವನ್ನು ನಿರ್ವಹಿಸಿದ್ದಾರೆ. ಪ್ರೀತಿ, ವಿಶ್ವಾಸ, ಸ್ನೇಹ ಎಲ್ಲಾ ಭಾವನೆಗಳನ್ನು ಈ ಪಾತ್ರ ಪ್ರತಿನಿಧಿಸಲಿದೆಯಂತೆ. ಉಳಿದಂತೆ ರಾಘಣ್ಣ ಅವರ ಪಾತ್ರದ ಬಗ್ಗೆ ಹೆಚ್ಚಿನ ಕುತೂಹಲವನ್ನು ತಿಳಿಯಲು ಚಿತ್ರವನ್ನೇ ನೋಡಬೇಕು ಎನ್ನುತ್ತದೆ ಚಿತ್ರತಂಡ. 

“ಅಮ್ಮನ ಮನೆ’ ಚಿತ್ರಕ್ಕೆ ರಾಷ್ಟ್ರಪ್ರಶಸ್ತಿ ವಿಜೇತ ನಿರ್ದೇಶಕ ನಿಖಿಲ್‌ ಮಂಜು ನಿರ್ದೇಶನವಿದೆ. “ಶ್ರೀಲಲಿತೆ ಚಿತ್ರಾಲಯ’ ಬ್ಯಾನರ್‌ನಲ್ಲಿ ನಿರ್ಮಾಣವಾಗಿರುವ ಈ ಚಿತ್ರದಲ್ಲಿ ರಾಘವೇಂದ್ರ ರಾಜಕುಮಾರ್‌ ಅವರೊಂದಿಗೆ ಮಾನಸಿ, ರೋಹಿಣಿ, ಶೀತಲ್‌, ಸುಚೇಂದ್ರ ಪ್ರಸಾದ್‌, ತಬಲನಾಣಿ, ವೆಂಕಟರಾವ್‌, ಎಂ.ಡಿ ಕೌಶಿಕ್‌ ಮೊದಲಾದವರು ಇತರೆ ಪಾತ್ರಗಳಲ್ಲಿ ಅಭಿನಯಿಸಿದ್ದಾರೆ. ಚಿತ್ರಕ್ಕೆ ಶ್ರೀಲಲಿತೆ ಕಥೆ, ಬಿ.ಶಿವಾನಂದ ಸಾಹಿತ್ಯ ಮತ್ತು ಸಂಭಾಷಣೆ ರಚಿಸಿದ್ದಾರೆ.

ಚಿತ್ರದ ಹಾಡುಗಳಿಗೆ ಸಮೀರ್‌ ಕುಲಕರ್ಣಿ ಸಂಗೀತ ಸಂಯೋಜನೆಯಿದೆ. ಚಿತ್ರದ ದೃಶ್ಯಗಳಿಗೆ ಪಿ.ವಿ.ಆರ್‌ ಸ್ವಾಮಿ ಛಾಯಾಗ್ರಹಣ ಮತ್ತು ಬಿ. ನಿತೇಶ್‌ ಕುಮಾರ್‌ ಸಂಕಲನ ಕಾರ್ಯ ನಿರ್ವಹಿಸಿದ್ದಾರೆ. ಒಟ್ಟಾರೆ ಹೊಸ ಜೋಶ್‌ನೊಂದಿಗೆ ಮೂಲಕ ಪುನಃ ಪ್ರೇಕ್ಷಕರ ಮುಂದೆ ಬರುತ್ತಿರುವ ರಾಘವೇಂದ್ರ ರಾಜಕುಮಾರ್‌, ಸಿನಿಮಾದ ಮೇಲಿರುವ ಪ್ರೀತಿ ಯಾವತ್ತೂ ಬತ್ತಿ ಹೋಗುವಂಥದ್ದಲ್ಲ ಎಂಬುದನ್ನು ಮತ್ತೆ ತೋರಿಸಿಕೊಟ್ಟಿದ್ದಾರೆ. ಸದ್ಯ ರಾಘಣ್ಣ “ಅಮ್ಮನ ಮನೆ’ಯಲ್ಲಿ ಹೇಗೆ ಕಾಣಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ, ಇದ್ದು ಚಿತ್ರತೆರೆ ಕಂಡ ಮೇಲೆ ಅದಕ್ಕೆಲ್ಲ ಉತ್ತರ ಸಿಗಲಿದೆ. 

Advertisement

“ಅಮ್ಮನ ಮನೆ’ ಚಿತ್ರದ ಕಥೆ ಕೇಳಿ, ಪಾತ್ರದ ಹೆಸರು ತಿಳಿದ ಕೂಡಲೇ ಕೊಂಚ ಭಾವುಕನಾದೆ. ಇಂಥ ಅಪರೂಪದ ಪಾತ್ರ ನಿರ್ವಹಿಸಲು ಸಾಧ್ಯವೇ, ಆ ರೀತಿಯ ನಟನೆ ನನ್ನಿಂದ ಆಗುತ್ತದೆಯೇ? ಎಂಬ ಪ್ರಶ್ನೆಯನ್ನು ಚಿತ್ರತಂಡದ ಮುಂದಿಟ್ಟೆ. ಆದರೆ, ಇಡೀ ಚಿತ್ರತಂಡ ನನಗೆ ಮತ್ತಷ್ಟು ಹುಮ್ಮಸ್ಸು ತುಂಬಿತು. ಈಗಾಗಲೇ ಬಿಡುಗಡೆಯಾಗಿರುವ ಚಿತ್ರದ ಟೀಸರ್‌ ನೋಡಿದವರೆಲ್ಲರಿಗೂ ಸಾಕಷ್ಟು ಸಂತಸ ವ್ಯಕ್ತಪಡಿಸಿದ್ದು, ಭರವಸೆಯ ಮಾತುಗಳನ್ನಾಡುತ್ತಿದ್ದಾರೆ. ಚಿತ್ರ ತೆರೆಮೇಲೆ ಹೇಗೆ ಬರಲಿದೆ ಎನ್ನುವ ಕುತೂಹಲ ನನಗೂ ಇದೆ.
-ರಾಘವೇಂದ್ರ ರಾಜಕುಮಾರ್‌

ಈ ಚಿತ್ರದಲ್ಲಿ ನಾಯಕನದು ವಿಶೇಷ ಪಾತ್ರ. ಆ ಪಾತ್ರವನ್ನು ಯಾರು ಮಾಡಬಹುದು ಎಂಬ ಚರ್ಚೆಯಲ್ಲಿದ್ದಾಗ ನಮಗೆ ರಾಘಣ್ಣ ನೆನಪಾದರು. ಅದೊಂದು ರೀತಿಯ ಮೆಚೂರ್ಡ್ ಪಾತ್ರ. ಹೊಡಿ ಬಡಿ ಕಡಿ ಅಂಶಗಳೇ ಇಲ್ಲದಂತಹ ಭಾವನಾತ್ಮಕವಾಗಿರುವ ಪಾತ್ರ. ಇಂಥ ಪಾತ್ರವನ್ನು ಮಾಡಲು ರಾಘಣ್ಣ ಒಪ್ಪುತ್ತಾರೆಯೇ ಎಂಬ ಅನುಮಾನವಿತ್ತು. ಆದರೆ ಕಥೆ, ಪಾತ್ರವನ್ನು ಕೇಳುತ್ತಿದ್ದಂತೆ ತುಂಬಾ ಖುಷಿಯಿಂದ ಚಿತ್ರ ಮಾಡಲು ಒಪ್ಪಿಕೊಂಡರು.
-ನಿಖಿಲ್‌ ಮಂಜು, ನಿರ್ದೇಶಕ

Advertisement

Udayavani is now on Telegram. Click here to join our channel and stay updated with the latest news.

Next