Advertisement

ಚಿಂದಿ ಆಯುವವರಿಗೂ ಬಂತು ಐಡಿ ಕಾರ್ಡ್‌!

11:38 AM Nov 11, 2019 | Suhan S |

ಹುಬ್ಬಳ್ಳಿ: ಹುಬ್ಬಳ್ಳಿ-ಧಾರವಾಡ ಅವಳಿನಗರದಲ್ಲಿ ಚಿಂದಿ ಆಯುವವರನ್ನು ಗುರುತಿಸಿ ಗುರುತಿನ ಚೀಟಿ, ಆಯುಷ್ಮಾನ್‌ ಕಾರ್ಡ್‌, ಪಡಿತರ ಹಾಗೂ ಆಧಾರ್‌ ಕಾರ್ಡ್‌ ಸೌಲಭ್ಯ, ಆ ಕುಟುಂಬಗಳ ಮಕ್ಕಳಿಗೆ ಶೈಕ್ಷಣಿಕ ನೆರವು ಕಾರ್ಯವನ್ನು ಸ್ವಯಂ ಸೇವಾ ಸಂಸ್ಥೆಯೊಂದು ಕೈಗೊಂಡಿದ್ದು, ಪ್ರಸ್ತುತ 1,000 ಜನ ಚಿಂದಿ ಆಯುವವರಿಗೆ ಸೌಲಭ್ಯ ಕಲ್ಪಿಸಲಾಗಿದೆ.

Advertisement

ಹುಬ್ಬಳ್ಳಿ-ಧಾರವಾಡದಲ್ಲಿ ಒಟ್ಟು ಒಂಭತ್ತು ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಚಿಂದಿ ಆಯುವ ಕುಟುಂಬಗಳ ಸಂಖ್ಯೆ, ಅವರ ಸ್ಥಿತಿಗತಿ, ಸಿಕ್ಕ ಸೌಲಭ್ಯಗಳು ಇತ್ಯಾದಿ ಮಾಹಿತಿ ಸಂಗ್ರಹಿಸಲಾಗಿದೆ. ಅವರಿಗೆ ಸರ್ಕಾರದ ಹಲವು ಸೌಲಭ್ಯಗಳ ಮಾಹಿತಿ ನೀಡಲಾಗಿದ್ದು, ಆರೋಗ್ಯ ತಪಾಸಣೆ, ಚಿಂದಿ ಆಯುವ ವೇಳೆ ಆಗಬಹುದಾದ ಅಪಾಯಗಳ ಕುರಿತಾಗಿ ತಿಳಿವಳಿಕೆ ಕಾರ್ಯಾಗಾರ, ಜಾಗೃತಿ ಕಾರ್ಯವನ್ನು ಬೆಂಗಳೂರು ಮೂಲದ “ಹಸಿರು ದಳ’ ಎಂಬ ಸ್ವಯಂ ಸೇವಾ ಸಂಸ್ಥೆ ಹುಬ್ಬಳ್ಳಿ-ಧಾರವಾಡದಲ್ಲೂ ಕೈಗೊಂಡಿದೆ.

9 ಪ್ರದೇಶಗಳಲ್ಲಿ ಸಮೀಕ್ಷೆ: ಚಿಂದಿ ಆಯುವ ಕುಟುಂಬಗಳು ವಾಸಿಸುವ ಹುಬ್ಬಳ್ಳಿ-ಧಾರವಾಡದ 9 ಪ್ರದೇಶಗಳಲ್ಲಿ ಸಮೀಕ್ಷೆ ಕೈಗೊಳ್ಳಲಾಗಿದ್ದು, ಸಮಸ್ಯೆ ಹಾಗೂ ಬೇಡಿಕೆ-ನಿರೀಕ್ಷೆಗಳ ಮಾಹಿತಿ ಸಂಗ್ರಹಿಸಲಾಗಿದೆ. ಹುಬ್ಬಳ್ಳಿಯ ಶಿವಶಂಕರ ಕಾಲೋನಿ, ದುರ್ಗಾಶಕ್ತಿ ಕಾಲೋನಿ, ವೀರಾಪುರ ಓಣಿ, ಉಣಕಲ್ಲ ಕ್ರಾಸ್‌ನ ಆಶ್ರಯ ಕಾಲೋನಿ, ಗೋಪನಕೊಪ್ಪ, ನಾಗಶೆಟ್ಟಿಕೊಪ್ಪ. ಧಾರವಾಡದ ಸರಸ್ವತಪುರ, ಲಕ್ಷ್ಮೀಸಿಂಗನಕೆರೆ, ಮೃತ್ಯುಂಜಯ ನಗರದಲ್ಲಿ ಸಮೀಕ್ಷೆ ಕಾರ್ಯ ಕೈಗೊಳ್ಳಲಾಗಿದೆ.

ಚಿಂದಿ ಆಯುವವರು ಬೆಳ್ಳಂಬೆಳಗ್ಗೆ ತಮ್ಮ ಕಾರ್ಯದಲ್ಲಿ ತೊಡಗುವುದರಿಂದ ಅವರನ್ನು ಗುರುತಿಸುವಿಕೆ ನಿಟ್ಟಿನಲ್ಲಿ ಪ್ರತಿಯೊಬ್ಬರಿಗೂ ಗುರುತಿನ ಚೀಟಿ ನೀಡಲಾಗಿದೆ. ಚಿಂದಿ ಆಯುವವರನ್ನು ಅನ್ಯತಾ ಭಾವಿಸಿ ಹಲ್ಲೆಗೆ ಮುಂದಾಗುವ, ಶಂಕೆ ಆಧಾರದಲ್ಲಿ ಪೊಲೀಸ್‌ ಕ್ರಮಕ್ಕೆ ಮುಂದಾಗುವುದನ್ನು ತಡೆಯುವ ನಿಟ್ಟಿನಲ್ಲಿ ಅವರಿಗೆ ಗುರುತಿನ ಚೀಟಿ ನೀಡಲಾಗಿದೆ.

ಚಿಂದಿ ಆಯುವವರಲ್ಲಿ ಅನೇಕರಿಗೆ ಇದುವರೆಗೂ ಆಧಾರ, ಪಡಿತರ ಚೀಟಿ, ಆರೋಗ್ಯ ವಿಮೆ ಕಾರ್ಡ್‌ಗಳು ಇಲ್ಲವಾಗಿದ್ದು, ಅತ್ಯಂತ ಬಡ ಕುಟುಂಬದವರಾದರೂ, ದಾಖಲಾತಿಗಳಿಲ್ಲದೆ ಹಲವು ಸೌಲಭ್ಯಗಳಿಂದ ವಂಚಿತರಾಗುತ್ತಿದ್ದರು. ಚಿಂದಿ ಆಯುವ ಕುಟುಂಬಗಳಿಗೆ ಆಧಾರ ಕಾರ್ಡ್‌, ಪಡಿತರ ಚೀಟಿ ಕಾರ್ಡ್‌ಗಳನ್ನು ದೊರಕಿಸಲಾಗುತ್ತಿದೆ. ಅದೇ ರೀತಿ ಸುಮಾರು 650 ಜನರಿಗೆ ಈಗಾಗಲೇ ಆಯುಷ್ಮಾನ್‌ ಭಾರತ ಕಾರ್ಡ್‌ಗಳನ್ನು ನೀಡಲಾಗಿದ್ದು, ಇದರಿಂದ ಚಿಂದಿ ಆಯುವ ಕುಟುಂಬಗಳವರು ಉತ್ತಮ ವೈದ್ಯಕೀಯ ಸೇವೆ ಪಡೆಯುವ ಸೌಲಭ್ಯ ಪಡೆದಂತಾಗಿದೆ. ಚಿಂದಿ ಆಯುವ ವೇಳೆ ತ್ಯಾಜ್ಯದಲ್ಲಿ ಬಳಕೆ ಮಾಡಿ ಬಿಸಾಡಿದ ಚುಚ್ಚುಮದ್ದಿನ ಸೂಜಿ, ಗಾಜು, ಕಬ್ಬಿಣ ತುಂಡುಗಳು ಇನ್ನಿತರ ಅಪಾಯಕಾರಿ ವಸ್ತುಗಳು ಕೈ-ಕಾಲಿಗೆ ತಾಗುತ್ತವೆ. ಇದರಿಂದ ಹಲವು ರೋಗಗಳು ಕಾಣಿಸಿಕೊಳ್ಳುವ ಸಾಧ್ಯತೆಯೂ ಇದೆ. ಈ ಬಗ್ಗೆ ಜಾಗೃತಿ ಮೂಡಿಸಲು ಸುರಕ್ಷತಾ ಕ್ರಮಗಳನ್ನು ಹೇಗೆ ಕೈಗೊಳ್ಳಬೇಕು, ಚಿಂದಿ ಆಯುವ ವೇಳೆ ಏನೆಲ್ಲಾ ಮುಂಜಾಗ್ರತೆ ವಹಿಸಬೇಕು ಎಂಬುದರ ಕುರಿತಾಗಿ ಹುಬ್ಬಳ್ಳಿ ಹಾಗೂ ಬೆಂಗಳೂರಿನಲ್ಲಿ ಮಾಹಿತಿ ಕಾರ್ಯಾಗಾರ ಕೈಗೊಳ್ಳಲಾಗುತ್ತಿದೆ.

Advertisement

 

 

ಅಣಬೆ ಬೇಸಾಯ ತರಬೇತಿ : ಚಿಂದಿ ಆಯುವವರು ಬೆಳ್ಳಂಬೆಳಗ್ಗೆ ಚಿಂದಿ ಸಂಗ್ರಹಿಸಿ ನಂತರದ ಸಮಯದಲ್ಲಿ ಮನೆಯಲ್ಲೇ ಇರುತ್ತಾರೆ. ಇವರು ಮನೆಯಲ್ಲೇ ಕುಳಿತುಕೊಂಡು ಸ್ವಯಂ ಉದ್ಯೋಗ ಕೈಗೊಳ್ಳುವ ನಿಟ್ಟಿನಲ್ಲಿ ಹಲವು ತರಬೇತಿ ನೀಡಲಾಗುತ್ತಿದೆ. ಈಗಾಗಲೇ ಹುಬ್ಬಳ್ಳಿಯ ಶಿವಶಂಕರ ಕಾಲೋನಿ, ವೀರಾಪುರ ಓಣಿ ಹಾಗೂ ಧಾರವಾಡ ಸರಸ್ವತಪುರದಲ್ಲಿ ಚಿಂದಿ ಆಯುವ ಕುಟುಂಬಗಳ ಮಹಿಳೆಯರಿಗೆ ಅಣಬೆ ಬೇಸಾಯ ತರಬೇತಿ ನೀಡಲಾಗಿದೆ. 15ಕ್ಕೂ ಹೆಚ್ಚು ಮಹಿಳೆಯರು ಅಣಬೆ ಬೇಸಾಯ ತರಬೇತಿ ಪಡೆದಿದ್ದು, ಅಣಬೆ ಬೆಳೆಸುವ ಕಾರ್ಯಕ್ಕೆ ಮುಂದಾಗಿದ್ದಾರೆ. ಇವರು ಬೆಳೆಯುವ ಅಣಬೆಗೆ ಮಾರುಕಟ್ಟೆ ಒದಗಿಸುವ ಕಾರ್ಯಕ್ಕೆ ಸ್ವಯಂ ಸೇವಾ ಸಂಸ್ಥೆ ನೆರವಾಗಲಿದೆ.

ಮಕ್ಕಳಿಗೆ ಶಿಕ್ಷಣ ನೆರವು: ಚಿಂದಿ ಆಯುವ ಕುಟುಂಬಗಳ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂಬ ಉದ್ದೇಶದೊಂದಿಗೆ ಸರಕಾರಿ ಶಾಲೆಯಲ್ಲಿ ಓದುತ್ತಿರುವ ಚಿಂದಿ ಆಯುವವರ ಮಕ್ಕಳಿಗೆ ವಾರ್ಷಿಕ 3,500 ರೂ. ನೀಡಲಾಗುತ್ತಿದೆ. ಜತೆಗೆ ದಾನಿಗಳ ನೆರವಿನೊಂದಿಗೆ ನೋಟ್‌ಬುಕ್‌ ಸೇರಿದಂತೆ ಅಗತ್ಯ ಲೇಖನಿ ಸಾಮಗ್ರಿ ಒದಗಿಸಲಾಗುತ್ತಿದೆ.

ಚಿಂದಿ ಆಯುವವರು ಹಲವು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ಅವರಿಗೆ ಸರಕಾರದ ವಿವಿಧ ಸೌಲಭ್ಯ ದೊರಕಿಸಿ ಕೊಡುವುದು, ವಿಶ್ವಾಸ ತುಂಬುವುದು, ಚಿಂದಿ ಆಯುವಿಕೆಯಲ್ಲಿ ಸುರಕ್ಷತಾ ಕ್ರಮಗಳ ಜತೆಗೆ ಅಣಬೆ ಬೇಸಾಯ ಸೇರಿದಂತೆ ವಿವಿಧ ವೃತ್ತಿ ತರಬೇತಿ ನೀಡಲಾಗುವುದು. ಅವಳಿನಗರದ 9 ಪ್ರದೇಶಗಳ ಸಮೀಕ್ಷೆ ಕೈಗೊಳ್ಳಲಾಗಿದ್ದು, ಇನ್ನಷ್ಟು ಪ್ರದೇಶ ವಿಸ್ತರಿಸಲಾಗುವುದು. ಮಂಜುನಾಥ ಬಾರಕೇರ,ಯೋಜನಾ ವ್ಯವಸ್ಥಾಪಕ, ಹಸಿರು ದಳ

 

ಅಮರೇಗೌಡ ಗೋನವಾರ

Advertisement

Udayavani is now on Telegram. Click here to join our channel and stay updated with the latest news.

Next