ಹೊಸದಿಲ್ಲಿ : ವಿವಾದಿತ ರಫೇಲ್ ಫೈಟರ್ ಜೆಟ್ ಡೀಲ್ ಕುರಿತ ದಾಖಲೆ ಪತ್ರಗಳು ರಕ್ಷಣಾ ಸಚಿವಾಲಯದಿಂದ ಕಳವಾಗಿವೆ ಎಂದು ಭಾರತದ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರಿಂದು ಸುಪ್ರೀಂ ಕೋರ್ಟಿಗೆ ತಿಳಿಸಿದರು.
ರಫೇಲ್ ಡೀಲ್ ಕುರಿತ ದಾಖಲೆ ಪತ್ರಗಳು ಕಳವಾಗಿರುವ ಬಗ್ಗೆ ಕೂಲಂಕಷ ತನಿಖೆ ನಡೆಯುತ್ತಿದೆ ಎಂದವರು ಕೋರ್ಟಿಗೆ ತಿಳಿಸಿದರು.
ರಫೇಲ್ ಖರೀದಿ ವಿರುದ್ಧದ ಎಲ್ಲ ಮನವಿಗಳನ್ನು ರದ್ದು ಪಡಿಸಿ ಸುಪ್ರೀಂ ಕೋರ್ಟ್ ಈ ಮೊದಲು ನೀಡಿದ್ದ ತೀರ್ಪನ್ನು ಪುನರ್ ಪರಿಶೀಲಿಸಬೇಕೆಂದು ಕೋರಿರುವ ಅರ್ಜಿಗಳು, ಕಳವಾಗಿರುವ ದಾಖಲೆ ಪತ್ರಗಳನ್ನೇ ಆಧರಿಸಿವೆ ಎಂದು ಅಟಾರ್ನಿ ಜನರಲ್ ಹೇಳಿದರು.
ರಕ್ಷಣಾ ಸಚಿವಾಲಯದಿಂದ ಕಳವಾಗಿದ್ದ ದಾಖಲೆ ಪತ್ರಗಳನ್ನೇ ಆಧರಿಸಿ ಪತ್ರಕರ್ತ ಎನ್ ರಾಮ್ ಅವರು ದಿ ಹಿಂದೂ ಪತ್ರಿಕೆಯಲ್ಲಿ ಕಳೆದ ಫೆ.8ರಂದು ಲೇಖನ ಬರೆದಿದ್ದಾರೆ. ಈ ಲೇಖನವನ್ನೇ ಆಧರಿಸಿ ಕೇಂದ್ರದ ಮಾಜಿ ಸಚಿವ ಯಶವಂತ ಸಿನ್ಹಾ, ಅರುಣ್ ಶೌರಿ ಮತ್ತು ವಕೀಲ ಪ್ರಶಾಂತ್ ಭೂಷಣ್, ಸುಪ್ರೀಂ ಕೋರ್ಟ್ ತೀರ್ಪಿನ ಪುನರ್ ವಿಮರ್ಶೆಯನ್ನು ಕೋರಿದ್ದಾರೆ ಎಂದು ಅಟಾರ್ನಿ ಜನರಲ್ ಹೇಳಿದರು.
ರಫೇಲ್ ದಾಖಲೆಪತ್ರಗಳಲ್ಲಿನ ಕೆಲವೊಂದು ಪ್ರಮುಖ ಅಂಶಗಳನ್ನು ಕೇಂದ್ರ ಸರಕಾರ ಸುಪ್ರೀಂ ಕೋರ್ಟಿನಿಂದ ಮರೆಮಾಚಿದ್ದರಿಂದಲೇ ರಫೇಲ್ ಹಗರಣದ ಬಗ್ಗೆ ಎಫ್ಐಆರ್ ದಾಖಲಿಸಬೇಕೆಂಬ ಮತ್ತು ತನಿಖೆ ನಡೆಸಬೇಕೆಂಬ ತಮ್ಮ ಮನವಿಗಳು ಬಿದ್ದು ಹೋದವು; ಒಂದೊಮ್ಮೆ ಈ ಸತ್ಯಾಂಶಗಳನ್ನು ಸರಕಾರ ಮರೆಮಾಚದಿರುತ್ತಿದ್ದರೆ ಈ ವೇಳೆಗಾಗಲೇ ರಫೇಲ್ ತನಿಖೆ ಆರಂಭವಾಗಿರುತ್ತಿತ್ತು ಎಂದು ವಕೀಲ ಭೂಷಣ್ ಹೇಳಿದರು.