Advertisement

ಸಂಸತ್‌ನಲ್ಲೂ ರಫೇಲ್‌ ಸದ್ದು

05:45 AM Dec 15, 2018 | Karthik A |

ಹೊಸದಿಲ್ಲಿ: ರಫೇಲ್‌ ಜೆಟ್‌ ಡೀಲ್‌ನಲ್ಲಿ ಕೇಂದ್ರ ಸರಕಾರಕ್ಕೆ ಸುಪ್ರೀಂಕೋರ್ಟ್‌ ಕ್ಲೀನ್‌ ಚಿಟ್‌ ನೀಡುತ್ತಿದ್ದಂತೆ, ಸಂಸತ್‌ನ ಉಭಯ ಸದನಗಳಲ್ಲೂ ‘ರಫೇಲ್‌ ಸದ್ದು’ ಪ್ರತಿಧ್ವನಿಸಿದೆ. ಈವರೆಗೆ ರಫೇಲ್‌ ವಿಚಾರವನ್ನೆತ್ತಿಕೊಂಡು ಸರಕಾರವನ್ನು ಟೀಕಿಸುತ್ತಾ ಬಂದಿರುವ ಪ್ರತಿಪಕ್ಷ ಕಾಂಗ್ರೆಸ್‌ ವಿರುದ್ಧ ಆಡಳಿತ ಪಕ್ಷದ ಸದಸ್ಯರು ಮುಗಿಬಿದ್ದಿದ್ದಾರೆ. ದೇಶವನ್ನು ತಪ್ಪುದಾರಿಗೆ ಎಳೆದಿರುವ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಅವರು ಕೂಡಲೇ ಕ್ಷಮೆ ಕೋರಬೇಕು ಎಂದು ಬಿಜೆಪಿ ಸದಸ್ಯರು ಆಗ್ರಹಿಸಿದ್ದಾರೆ.

Advertisement

ಲೋಕಸಭೆ ಹಾಗೂ ರಾಜ್ಯಸಭೆಯಲ್ಲಿ ಕೋಲಾಹಲ ಉಂಟಾದ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪಗಳನ್ನು ಮುಂದೂಡಲಾಯಿತು. ಲೋಕಸಭೆಯಲ್ಲಿ ಕಲಾಪ ಆರಂಭವಾಗುತ್ತಲೇ ಸಚಿವ ನರೇಂದ್ರ ಸಿಂಗ್‌ ತೋಮರ್‌ ಮಾತನಾಡಿ, ರಾಹುಲ್‌ ಗಾಂಧಿ ಕೂಡಲೇ ಕ್ಷಮೆಯಾಚಿಸಬೇಕು ಎಂದು ಪಟ್ಟು ಹಿಡಿದರು. ಇದಕ್ಕೆ ಧ್ವನಿಗೂಡಿಸಿದ ಕೇಂದ್ರ ಗೃಹ ಸಚಿವ ರಾಜನಾಥ್‌ ಸಿಂಗ್‌, ‘ರಾಹುಲ್‌ ದೇಶದ ಹಾದಿತಪ್ಪಿಸಿದ್ದಾರೆ. ಅವರ ಆರೋಪದಿಂದಾಗಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ದೇಶದ ಘನತೆಗೆ ಧಕ್ಕೆ ಉಂಟಾಗಿದೆ. ಅವರು ಕ್ಷಮೆ ಯಾಚಿಸಲೇಬೇಕು’ ಎಂದು ಒತ್ತಾಯಿಸಿದರು. ರಾಜ್ಯಸಭೆಯಲ್ಲಿ ವಿತ್ತ ಸಚಿವ ಅರುಣ್‌ ಜೇಟ್ಲಿ ಅವರು ರಫೇಲ್‌ ವಿಚಾರ ಪ್ರಸ್ತಾಪಿಸಿ, ಕಾಂಗ್ರೆಸ್‌ನ ಕಾಲೆಳೆದರು.

ಅಷ್ಟರಲ್ಲಿ ಬಿಜೆಪಿ ಸದಸ್ಯರು, ‘ಗಲೀ ಗಲೀ ಮೆ ಶೋರ್‌ ಹೆ, ರಾಹುಲ್‌ ಗಾಂಧಿ ಚೋರ್‌ ಹೆ’ ಎಂದು ಘೋಷಣೆ ಕೂಗತೊಡಗಿದರು. ಅತ್ತ ಪ್ರತಿಪಕ್ಷಗಳ ಸದಸ್ಯರು ರಫೇಲ್‌ ಒಪ್ಪಂದದ ಬಗ್ಗೆ ತನಿಖೆಗೆ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ರಚಿಸಲೇಬೇಕೆಂದು ಒತ್ತಾಯಿಸಿ ಘೋಷಣೆ ಕೂಗತೊಡಗಿದರು. ಎರಡೂ ಕಡೆಗಳಿಂದ ಗದ್ದಲ ತೀವ್ರಗೊಂಡ ಹಿನ್ನೆಲೆಯಲ್ಲಿ ಎರಡೂ ಸದನಗಳ ಕಲಾಪಗಳನ್ನು ದಿನದ ಮಟ್ಟಿಗೆ ಮುಂದೂಡಲಾಯಿತು. ಮುಂದಿನ ಕಲಾಪ ಸೋಮವಾರ ನಡೆಯಲಿದೆ. 

ಜೆಪಿಸಿ ತನಿಖೆ ನಡೆಸಿ: ರಾಹುಲ್‌
ಜಂಟಿ ಸಂಸದೀಯ ಸಮಿತಿಯಿಂದ ತನಿಖೆ ನಡೆಸಿದರೆ ರಫೇಲ್‌ ಡೀಲ್‌ ವಿಚಾರದಲ್ಲಿ ಸರಕಾರದ ಬಣ್ಣ ಬಯಲಾಗುತ್ತದೆ ಎಂದು ರಾಹುಲ್‌ ಗಾಂಧಿ ಹೇಳಿದ್ದಾರೆ. ಪ್ರಧಾನಿ ಮೋದಿ ರಫೇಲ್‌ ಡೀಲ್‌ ಕುರಿತು ಮಾತನಾಡದೇ ಹಿಂದೆ ಸರಿಯುತ್ತಾರೆ. ಬದಲಿಗೆ ಜೇಟ್ಲಿ, ನಿರ್ಮಲಾ ಸೀತಾರಾಮನ್‌ರನ್ನು ಕಳುಹಿಸುತ್ತಾರೆ. ಯಾಕೆ ಅವರು ಜೆಪಿಸಿ ತನಿಖೆಗೆ ಆದೇಶ ನೀಡುವುದಿಲ್ಲ ಎಂದು ಪ್ರಶ್ನಿಸಿದ್ದಾರೆ. ರಫೇಲ್‌ ಡೀಲ್‌ಗೆ ಸಂಬಂಧಿಸಿದ ಸಿಎಜಿ ವರದಿಯನ್ನು ಸಂಸತ್‌ನ ಸಾರ್ವ ಜನಿಕ ಲೆಕ್ಕಪತ್ರ ಸಮಿತಿಗೆ (ಪಿಎಸಿ) ಸಲ್ಲಿಸಲಾಗಿದೆ ಎಂದು ಸುಪ್ರೀಂ ಕೋರ್ಟ್‌ ತನ್ನ ತೀರ್ಪಿನಲ್ಲಿ ಉಲ್ಲೇಖೀಸಿದೆ. ಆದರೆ, ಆ ವರದಿ ಇನ್ನೂ ಪಿಎಸಿಗೆ ಬಂದಿಲ್ಲ ಎಂದು ರಾಹುಲ್‌ ಹೇಳಿದ್ದಾರೆ. ಸಿಎಜಿ ನೀಡಿದ ವರದಿಯನ್ನು ಲೋಕಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ತೋರಿಸಲಿ ಎಂದು ರಾಹುಲ್‌ ಸವಾಲು ಹಾಕಿದ್ದಾರೆ. ಅಲ್ಲದೆ,  ತಲಾ 526 ಕೋಟಿ ರೂ.ಗಳಿದ್ದ ರಫೇಲ್‌ ಜೆಟ್‌ನ ದರ 1,600 ಕೋಟಿ ರೂ.ಗೆ ಏರಿಕೆಯಾಗಿದ್ದು ಹೇಗೆ ಎಂಬುವುದು ನಮ್ಮ ಮೂಲ ಪ್ರಶ್ನೆಯಾಗಿದೆ ಎಂದಿದ್ದಾರೆ.

ಅನಿಲ್‌ ಅಂಬಾನಿ ನಿರಾಳ
ಆಫ್ಸೆಟ್‌ ಪಾಲುದಾರರ ಆಯ್ಕೆಯಲ್ಲಿ ಸರಕಾರದ ಪಾತ್ರವಿಲ್ಲ ಹಾಗೂ ಇದರಲ್ಲಿ ಯಾವುದೇ ಅವ್ಯವಹಾರವಿಲ್ಲ ಎಂದು ಸುಪ್ರೀಂಕೋರ್ಟ್‌ ತೀರ್ಪು ನೀಡಿರುವುದು ರಿಲಯನ್ಸ್‌ ಡಿಫೆನ್ಸ್‌ ಮಾಲೀಕ ಅನಿಲ್‌ ಅಂಬಾನಿಯನ್ನು ನಿರಾಳವಾಗಿಸಿದೆ. ಅನಿಲ್‌ ಅಂಬಾನಿಗೆ ಅನುಕೂಲ ಮಾಡಿಕೊಡುವುದಕ್ಕಾಗಿಯೇ ರಿಲಯನ್ಸ್‌ ಡಿಫೆನ್ಸ್‌ ಅನ್ನು ಆಫ್ಸೆಟ್‌ ಪಾಲುದಾರನನ್ನಾಗಿ ಆಯ್ಕೆ ಮಾಡಲಾಗಿತ್ತು ಎಂದು ಕಾಂಗ್ರೆಸ್‌ ಆರೋಪಿಸಿತ್ತು. ಸುಪ್ರೀಂಕೋರ್ಟ್‌ನ ತೀರ್ಪನ್ನು ನಾನು ಸ್ವಾಗತಿಸುತ್ತೇನೆ. ರಿಲಯನ್ಸ್‌ ಗ್ರೂಪ್‌ ಹಾಗೂ ವೈಯಕ್ತಿಕವಾಗಿ ನನ್ನ ವಿರುದ್ಧ ಮಾಡಿದ ರಾಜಕೀಯ ಪ್ರೇರಿತ, ಆಧಾರ ರಹಿತ ಆರೋಪಗಳು ಸುಳ್ಳು ಎಂಬುದು ಇದರಿಂದಾಗಿ ಸಾಬೀತಾಗಿದೆ ಎಂದು ಅನಿಲ್‌ ಅಂಬಾನಿ ಹೇಳಿದ್ದಾರೆ.

Advertisement

ರಫೇಲ್‌ ಡೀಲ್‌ ವಿಚಾರವನ್ನು ಚರ್ಚೆ ಮಾಡಲು ಸುಪ್ರೀಂಕೋರ್ಟ್‌ ಸೂಕ್ತ ವೇದಿಕೆಯಲ್ಲ. ಇಂತಹ ಸೂಕ್ಷ್ಮ ರಕ್ಷಣಾ ಒಪ್ಪಂದಗಳನ್ನು ಸುಪ್ರೀಂಕೋರ್ಟ್‌ನಲ್ಲಿ ಚರ್ಚೆ ಮಾಡಲಾಗದು. ಸರಕಾರ ಏನನ್ನೂ ಮುಚ್ಚಿಡುತ್ತಿಲ್ಲ ಎಂದಾದರೆ ಜಂಟಿ ಸಂಸದೀಯ ತನಿಖೆಗೆ ಆದೇಶಿಸಲಿ.
— ರಣದೀಪ್‌ ಸುರ್ಜೆವಾಲ, ಕಾಂಗ್ರೆಸ್‌ ವಕ್ತಾರ

ರಫೇಲ್‌ ವಿರುದ್ಧದ ಕ್ಯಾಂಪೇನ್‌ ಇನ್ನು ನಿಲ್ಲಬೇಕು. ಯಾಕೆಂದರೆ ದೇಶದ ಹಿತಾಸಕ್ತಿ ಎಲ್ಲಕ್ಕಿಂತ ಮುಖ್ಯವಾದದ್ದು.
— ರವಿಶಂಕರ ಪ್ರಸಾದ್‌, ಕಾನೂನು ಸಚಿವ

ದೇಶದ ರಕ್ಷಣೆ ಸಂಬಂಧಿ ಖರೀದಿಗಳ ಬಗ್ಗೆ ಕೇಳಿಬರುವ ಅನುಮಾನಗಳು ಮತ್ತು ಭಿನ್ನಾಭಿಪ್ರಾಯಗಳನ್ನು ಬಗೆಹರಿಸಲು ಮೂಲಭೂತ ಸುಧಾರಣೆ ಅಗತ್ಯವಿದೆ.
— ಮಾಯಾವತಿ, ಬಿಎಸ್‌ಪಿ ನಾಯಕಿ

Advertisement

Udayavani is now on Telegram. Click here to join our channel and stay updated with the latest news.

Next