Advertisement

22ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ: ನಡಾಲ್‌ಗೆ 14ನೇ ಫ್ರೆಂಚ್‌ ಕಿರೀಟ

10:40 PM Jun 05, 2022 | Team Udayavani |

ಪ್ಯಾರಿಸ್‌: “ಆವೆಯಂಗಳದ ದೊರೆ’ ರಫೆಲ್‌ ನಡಾಲ್‌ ಅವರ ಆಕ್ರಮಣಕಾರಿ ಆಟಕ್ಕೆ ನಾರ್ವೆಯ ಕ್ಯಾಸ್ಪರ್‌ ರೂಡ್‌ ಸಾಟಿಯಾಗಲೇ ಇಲ್ಲ. ರವಿವಾರದ ಫೈನಲ್‌ ಹಣಾಹಣಿಯನ್ನು 6  -3, 6-3, 6-0 ಅಂತರದಿಂದ ಗೆದ್ದ ನಡಾಲ್‌ 14ನೇ ಬಾರಿಗೆ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದು ಸಂಭ್ರಮಿಸಿದರು. ಇದರೊಂದಿಗೆ ಪ್ಯಾರಿಸ್‌ ಫೈನಲ್‌ನಲ್ಲಿ ಅಜೇಯರಾಗಿ ಉಳಿದರು.

Advertisement

ಇದು ಸ್ಪೇನಿಗನಿಗೆ ಒಲಿದ 22ನೇ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ. ಇದರೊಂದಿಗೆ ಅವರು ಸಮಕಾಲೀನ ಟೆನಿಸ್‌ ದಿಗ್ಗಜರಾದ ನೊವಾಕ್‌ ಜೊಕೋವಿಕ್‌ ಮತ್ತು ರೋಜರ್‌ ಫೆಡರರ್‌ ಅವರಿಗಿಂತ ಎರಡು ಹೆಜ್ಜೆ ಮುಂದೆ ಸಾಗಿದರು. ಇವರಿಬ್ಬರೂ ತಲಾ 20 ಪ್ರಶಸ್ತಿ ಜಯಿಸಿದ್ದಾರೆ.

ರೂಡ್‌ ನಿರುತ್ತರ…
ನಡಾಲ್‌ ಅನುಭವಕ್ಕೆ ರೂಡ್‌ ಸಂಪೂರ್ಣ ನಿರುತ್ತರವಾಗಿದ್ದರು. ಅವರಿಗೆ ಯಾವ ಹಂತದಲ್ಲೂ ತಿರುಗಿ ಬೀಳಲು ಸಾಧ್ಯವಾಗಲಿಲ್ಲ. ತೃತೀಯ ಸೆಟ್‌ನಲ್ಲಂತೂ ರೂಡ್‌ ಅವರದು ಸಂಪೂರ್ಣ ಶರಣಾಗತಿ. ಇಲ್ಲಿ ಅವರಿಗೆ ಒಂದೂ ಅಂಕ ಗಳಿಸಲಾಗಲಿಲ್ಲ!

ಇದು ರಫೆಲ್‌ ನಡಾಲ್‌-ಕ್ಯಾಸ್ಪರ್‌ ರೂಡ್‌ ನಡುವಿನ ಮೊದಲ ಮುಖಾಮುಖಿ ಎಂಬುದು ಉಲ್ಲೇಖನೀಯ. ಆದರೆ ಇಬ್ಬರೂ ಬಹಳಷ್ಟು ಪ್ರ್ಯಾಕ್ಟೀಸ್‌ ಮ್ಯಾಚ್‌ ಆಡಿದ್ದಾರೆ. ರೂಡ್‌ ಸ್ಪೇನಿನ “ಮಲ್ಲೋರ್ಕ ಟೆನಿಸ್‌ ಅಕಾಡೆಮಿ’ಯಲ್ಲಿ ಬಹಳಷ್ಟು ವರ್ಷ ಅಭ್ಯಾಸ ನಡೆಸಿದ್ದರು. ನಡಾಲ್‌ ಅವರೇ ರೂಡ್‌ ಪಾಲಿನ ಐಡಲ್‌.

2013ರ ಫ್ರೆಂಚ್‌ ಓಪನ್‌ ಫೈನಲ್‌ನಲ್ಲಿ ರಫೆಲ್‌ ನಡಾಲ್‌ ಆಟವನ್ನು ಕಣ್ತುಂಬಿಸಿಕೊಂಡ 14ರ ಹರೆಯದ ರೂಡ್‌ ಅಂದಿನಿಂದ ಸ್ಪೇನಿಗನ ಆಟವನ್ನೇ ಅನುಸರಿಸುತ್ತ ಮೇಲೇರುತ್ತ ಹೋದರು. ಹೀಗಾಗಿ ರವಿವಾರದ ಫೈನಲ್‌ ಎಂಬುದು ಗುರು-ಶಿಷ್ಯರ ನಡುವಿನ ಮುಖಾಮುಖೀ ಆಗಿತ್ತು.

Advertisement

ಹಿರಿಯ ಟೆನಿಸಿಗ
ಈ ಜಯದೊಂದಿಗೆ ರಫೆಲ್‌ ನಡಾಲ್‌ ಫ್ರೆಂಚ್‌ ಓಪನ್‌ ಪ್ರಶಸ್ತಿ ಗೆದ್ದ ಅತೀ ಹಿರಿಯ ಟೆನಿಸಿಗನೆನಿಸಿದರು (36 ವರ್ಷ). 1972ರಲ್ಲಿ ಆ್ಯಂಡ್ರೆಸ್‌ ಜಿಮೆನೊ 34ನೇ ವರ್ಷದಲ್ಲಿ ಚಾಂಪಿಯನ್‌ ಆದದ್ದು ಪ್ಯಾರಿಸ್‌ ದಾಖಲೆಯಾಗಿತ್ತು.

ಇನ್ನೊಂದೆಡೆ 23ರ ಹರೆಯದ ರೂಡ್‌ಗೆ
ಇದು ಮೊದಲ ಗ್ರ್ಯಾನ್‌ಸ್ಲಾಮ್‌ ಫೈನಲ್‌. ಅಷ್ಟೇ ಅಲ್ಲ, ನಾರ್ವೆಯ ಟೆನಿಸಿಗನೋರ್ವ ಗ್ರ್ಯಾನ್‌ಸ್ಲಾಮ್‌ ಪ್ರಶಸ್ತಿ ಸುತ್ತಿಗೇರಿದ ಮೊದಲ ನಿದರ್ಶನವೂ ಇದಾಗಿದೆ. ಆದರೆ ನಡಾಲ್‌ ವಿರುದ್ಧ ಪ್ರಶಸ್ತಿ ಸಮರದಲ್ಲಿ ಕಾಣಿಸಿಕೊಂಡದ್ದೇ ರೂಡ್‌ ಪಾಲಿನ ಹೆಮ್ಮೆಯ ಸಂಗತಿ ಎನಿಸಿತು.

ಫೈನಲ್‌ಗಿಂತ ರಫೆಲ್‌ ನಡಾಲ್‌- ಅಲೆಕ್ಸಾಂಡರ್‌ ಜ್ವೆರೇವ್‌ ನಡುವಿನ ಸೆಮಿಫೈನಲ್‌ ಪಂದ್ಯವೇ ಭಾರೀ ಜೋಶ್‌ನಿಂದ ಕೂಡಿತ್ತು. ಇದು 2 ಸೆಟ್‌ ಕಾಣದೇ ಹೋದರೂ ನೀಡಿದ ಥ್ರಿಲ್‌ ಸಾಟಿಯಿಲ್ಲದ್ದು. ಇದರ ಮುಂದೆ ಫೈನಲ್‌ ಏಕಪಕ್ಷೀಯವೆನಿಸಿ, ತೀರಾ ಸಪ್ಪೆ ಎನಿಸಿತು.

Advertisement

Udayavani is now on Telegram. Click here to join our channel and stay updated with the latest news.

Next