Advertisement
ಇವರಿಬ್ಬರ ನಡುವಿನ ಕಾಳಗ ಭಾರತೀಯ ಕಾಲಮಾನದ ಪ್ರಕಾರ ರವಿವಾರ ಸಂಜೆ 6.30ಕ್ಕೆ ಆರಂಭವಾಗಲಿದೆ. ಶುಕ್ರವಾರ ರಾತ್ರಿಯ ಪುರುಷರ ದ್ವಿತೀಯ ಸೆಮಿಫೈನಲ್ ಪಂದ್ಯದಲ್ಲಿ ರಫೆಲ್ ನಡಾಲ್ ಆಸ್ಟ್ರಿಯಾದ ಅಚ್ಚರಿಯ ಸರದಾರ ಡೊಮಿನಿಕ್ ಥೀಮ್ ಅವರನ್ನು 6-3, 6-4, 6-0 ಅಂತರದಿಂದ ಹಿಮ್ಮೆಟ್ಟಿಸಿದರು. ಹಾಲಿ ಚಾಂಪಿ ಯನ್ ನೊವಾಕ್ ಜೊಕೋವಿಕ್ ಅವರನ್ನು ಮಣಿಸಿ ದೊಡ್ಡ ಹೀರೋ ಎನಿಸಿಕೊಂಡಿದ್ದ ಥೀಮ್ ಆಟ ನಡಾಲ್ ಎದುರು ನಡೆಯಲಿಲ್ಲ. 1995ರ ಬಳಿಕ ಗ್ರ್ಯಾನ್‌ಸ್ಲಾಮ್ ಫೈನಲ್ ಪ್ರವೇಶಿಸಿದ ಕೇವಲ 2ನೇ ಆಸ್ಟ್ರಿಯನ್ ಟೆನಿಸಿಗನೆಂಬ ಹೆಗ್ಗಳಿಕೆಯಿಂದ ಥೀಮ್ ದೂರವೇ ಉಳಿದರು. ಅಂದು ಥಾಮಸ್ ಮಸ್ಟರ್ ಈ ಸಾಧನೆ ಮಾಡಿದ್ದರು. ಜತೆಗೆ ಮಸ್ಟರ್ ಪ್ರಶಸ್ತಿಯನ್ನೂ ಎತ್ತಿದ್ದರು.
ಹಿಂದಿನ 9 ಫೈನಲ್‌ಗಳಲ್ಲೂ ಚಾಂಪಿಯನ್ ಆಗಿ ಮೂಡಿಬಂದಿದ್ದ ರಫೆಲ್ ನಡಾಲ್ ರವಿವಾರವೂ ಈ ಸಾಧನೆಯನ್ನು ಪುನರಾವರ್ತಿಸಿದರೆ 10 ಸಲ ಫ್ರೆಂಚ್ ಓಪನ್ ಪ್ರಶಸ್ತಿ ಗೆದ್ದ ವಿಶ್ವದ ಮೊದಲ ಟೆನಿಸಿಗನೆಂಬ ಹಿರಿಮೆಯನ್ನು ಒಲಿಸಿಕೊಳ್ಳಲಿದ್ದಾರೆ. ವಾವ್ರಿಂಕ ವಿರುದ್ಧ 15-3 ಗೆಲುವಿನ ದಾಖಲೆ ಹೊಂದಿರುವುದರಿಂದ ನಡಾಲ್ ಅವರೇ ನೆಚ್ಚಿನ ಆಟಗಾರನಾಗಿ ಗುರುತಿಸಲ್ಪಟ್ಟಿದ್ದಾರೆ. ಆದರೆ 3 ವರ್ಷಗಳ ಹಿಂದೆ ಆಸ್ಟ್ರೇಲಿಯನ್ ಓಪನ್ ಫೈನಲ್‌ನಲ್ಲಿ ನಡಾಲ್ ಅವರನ್ನೇ ಮಣಿಸುವ ಮೂಲಕ ವಾವ್ರಿಂಕ ಚಾಂಪಿಯನ್ ಆಗಿ ಹೊರಹೊಮ್ಮಿದ್ದನ್ನು ಮರೆಯುವಂತಿಲ್ಲ. 32ರ ಹರೆಯದ ವಾವ್ರಿಂಕ ಕಳೆದ 44 ವರ್ಷಗಳಲ್ಲೇ ಫ್ರೆಂಚ್ ಓಪನ್ ಫೈನಲ್ ಪ್ರವೇಶಿಸಿದ ಅತೀ ಹಿರಿಯ ಆಟಗಾರನಾಗಿದ್ದಾರೆ.