Advertisement

ನಡಾಲ್-ಮೆಡ್ವಡೇವ್‌ ಪ್ರಶಸ್ತಿ ಮುಖಾಮುಖೀ

01:55 AM Aug 12, 2019 | Team Udayavani |

ಮಾಂಟ್ರಿಯಲ್: ರಫೆಲ್ ನಡಾಲ್ ಮತ್ತು ರಶ್ಯದ ಡ್ಯಾನಿಲ್ ಮೆಡ್ವಡೇವ್‌ ‘ರೋಜರ್ ಕಪ್‌’ ಟೆನಿಸ್‌ ಪಂದ್ಯಾವಳಿಯ ಪ್ರಶಸ್ತಿ ಸುತ್ತಿನಲ್ಲಿ ಸೆಣಸಲಿದ್ದಾರೆ.

Advertisement

ಶನಿವಾರ ರಾತ್ರಿಯ ಆಲ್ ರಶ್ಯನ್‌ ಸೆಮಿಫೈನಲ್ನಲ್ಲಿ ಡ್ಯಾನಿಲ್ ಮೆಡ್ವಡೇವ್‌ 6-1, 7-6 (6) ಅಂತರದಿಂದ ಕರೆನ್‌ ಕಶನೋವ್‌ ಅವರನ್ನು ಪರಾಭವಗೊಳಿ ಸಿದರು. ರಫೆಲ್ ನಡಾಲ್ ವಿರುದ್ಧ ಸೆಣಸಬೇಕಿದ್ದ ಫ್ರಾನ್ಸ್‌ನ ಗೇಲ್ ಮಾನ್‌ಫಿಲ್ಸ್ ಗಾಯಾಳಾಗಿ ಹಿಂದೆ ಸರಿದರು.

ಮಳೆಯಿಂದ ಮುಂದೂಡಲ್ಪಟ್ಟ ಕ್ವಾರ್ಟರ್‌ ಫೈನಲ್ ಪಂದ್ಯದ ವೇಳೆ ಮಾನ್‌ಫಿಲ್ಸ್ ಪಾದದ ನೋವಿಗೆ ಒಳಗಾಗಿದ್ದರು. ಹೀಗಾಗಿ ಅಂದೇ ಸಂಜೆ ಆಡಬೇಕಿದ್ದ ಸೆಮಿಫೈನಲ್ ಮುಖಾಮುಖೀಯಿಂದ ದೂರ ಉಳಿಯಲು ನಿರ್ಧರಿಸಿದರು.

‘ನನ್ನ ಆಟ ಉತ್ತಮವಾಗಿತ್ತು. ಎರಡು ಹಂತಗಳಲ್ಲಿ ತುಸು ಹಿನ್ನಡೆ ಯಾಗಿತ್ತು. ಇಲ್ಲವಾದರೆ ಇನ್ನೂ ಸುಲಭದಲ್ಲಿ ಗೆಲ್ಲಬಹುದಿತ್ತು’ ಎಂದು ಡ್ಯಾನಿಲ್ ಮೆಡ್ವಡೇವ್‌ ಹೇಳಿದರು.

ಸೆರೆನಾ-ಬಿಯಾಂಕಾ ಫೈನಲ್
ವನಿತಾ ಸಿಂಗಲ್ಸ್ ಫೈನಲ್ನಲ್ಲಿ ಸೆರೆನಾ ಮತ್ತು ತವರಿನ ಆಟಗಾರ್ತಿ ಬಿಯಾಂಕಾ ಆ್ಯಂಡ್ರಿಸ್ಕಾ ಮುಖಾಮುಖೀಯಾಗಲಿದ್ದಾರೆ.

Advertisement

ಸೆರೆನಾಗೆ ಜೆಕ್‌ ಆಟಗಾರ್ತಿ ಮರಿಯಾ ಬೌಜ್ಕೋವಾ ಭಾರೀ ಸವಾಲೊಡ್ಡಿದರು. ಮೊದಲ ಸೆಟ್‌ನಲ್ಲಿ ಸುಲಭ ಜಯ ಸಾಧಿಸಿ ಸೆರೆನಾಗೆ ಭೀತಿಯೊಡ್ಡಿದರು. ಆದರೆ ಬೌಜ್ಕೋವಾ ಹಾರಾಟ ಇಲ್ಲಿಗೇ ಕೊನೆಗೊಂಡಿತು. ಸೆರೆನಾ 1-6, 6-3, 6-3ರಿಂದ ಗೆದ್ದು ಫೈನಲ್ ತಲಪುವಲ್ಲಿ ಯಶಸ್ವಿಯಾದರು. 2017ರ ಆಸ್ಟ್ರೇಲಿಯ ನ್‌ ಓಪನ್‌ ಕಿರೀಟ ಏರಿಸಿ ಕೊಂಡ ಬಳಿಕ ಸೆರೆನಾಗೆ ಮೊದಲ ಪ್ರಶಸ್ತಿ ಗೆಲ್ಲುವ ಅವಕಾಶವೊಂದು ಎದುರಾಗಿದೆ.

ಬೋಪಣ್ಣ ಜೋಡಿ ಪರಾಭವ

ರೋಜರ್ ಕಪ್‌ ಕೂಟದ ಪುರುಷರ ಡಬಲ್ಸ್ ಸೆಮಿಫೈನಲ್ನಲ್ಲಿ ರೋಹನ್‌ ಬೋಪಣ್ಣ-ಡೆನ್ನಿಸ್‌ ಶಪೊವೊಲೋವ್‌ ಜೋಡಿ ಪರಾಭವಗೊಂಡಿದೆ. ಇವರನ್ನು ನೆದರ್ಲೆಂಡ್ಸ್‌ನ ರಾಬಿನ್‌ ಹಾಸ್‌-ವೆಸ್ಲಿ ಕೂಲೋಫ್ ಸೇರಿಕೊಂಡು 7-6 (3), 7-6 ಅಂತರದಿಂದ ಪರಾಭವಗೊಳಿಸಿತು. ಇಂಡೋ-ಕೆನಡಿಯನ್‌ ಜೋಡಿಗೆ ಕ್ವಾರ್ಟರ್‌ ಫೈನಲ್ನಲ್ಲಿ ವಾಕ್‌ಓವರ್‌ ಲಭಿಸಿತ್ತು.

ದಾಖಲೆ ಬರೆವರೇ ಬಿಯಾಂಕಾ?

ಕೆನಡಾದ 19ರ ಹರೆಯದ ಬಿಯಾಂಕಾ ಆ್ಯಂಡ್ರಿಸ್ಕಾ ಅಮೆರಿಕದ ಸೋಫಿಯಾ ಕೆನಿನ್‌ ವಿರುದ್ಧ 3 ಸೆಟ್‌ಗಳ ಹೋರಾಟ ನಡೆಸಿ 6-4, 7-6 (7-5) ಅಂತರದಿಂದ ಗೆದ್ದು ಬಂದರು. 50 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ತವರಿನ ಆಟಗಾರ್ತಿ ಈ ಪ್ರಶಸ್ತಿ ಗೆಲ್ಲಬಹುದೇ ಎಂಬುದು ಆ್ಯಂಡ್ರಿಸ್ಕಾ ಮೇಲಿರುವ ನಿರೀಕ್ಷೆ.
Advertisement

Udayavani is now on Telegram. Click here to join our channel and stay updated with the latest news.

Next